ದೌರ್ಜನ್ಯದ ವಿರುದ್ಧ ಮಹಿಳೆಯರು ಧೈರ್ಯವಾಗಿ ಧ್ವನಿ ಎತ್ತಿ: ಡಾ.ನಾಗಲಕ್ಷ್ಮೀ ಚೌಧರಿ

KannadaprabhaNewsNetwork | Published : Aug 22, 2024 12:54 AM

ಸಾರಾಂಶ

ಮಹಿಳೆಯರ ಸಂರಕ್ಷಣೆ, ಹಕ್ಕುಗಳು ಹಾಗೂ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ, ಪೊಲೀಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಪಾತ್ರದ ಕುರಿತ ಕಾರ್ಯಾಗಾರವನ್ನು ರಾಜ್ಯ ಮಹಿಳಾ ಹಕ್ಕು ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಿಳೆಯರಿಗಾಗಿ ಇರುವ ಕಾನೂನು ಹಾಗೂ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳ ಬಳಕೆ ಹಾಗೂ ಶಾಲಾ ಕಾಲೇಜುಗಳಲ್ಲಿ ಕಾರ್ಯಾಗಾರ ಆಯೋಜಿಸಿ, ದೌರ್ಜನ್ಯಗಳ ವಿರುದ್ಧ ಮಹಿಳೆಯರು ಧೈರ್ಯವಾಗಿ ಧ್ವನಿ ಎತ್ತುವಂತಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.

ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ಸ್ಪಂದನ ಸಂಸ್ಥೆ ಆಯೋಜಿಸಿದ್ದ ಮಹಿಳೆಯರ ಸಂರಕ್ಷಣೆ, ಹಕ್ಕುಗಳು ಹಾಗೂ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ, ಪೊಲೀಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಪಾತ್ರದ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್‌ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಶಾಲಾ ಕಾಲೇಜುಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಮಹಿಳೆಯರಿಗಾಗಿ ಇರುವ ಕಾನೂನು ಹಾಗೂ ಹಕ್ಕುಗಳ ಕುರಿತು ಅರಿವು ಮೂಡಿಸಬೇಕು. ಶಾಲೆಗಳಲ್ಲಿ ಒಳ್ಳೆಯ ಹಾಗೂ ಕೆಟ್ಟ ಸ್ಪರ್ಶಗಳ ಕುರಿತು ತಿಳವಳಿಕೆ ನೀಡುವುದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗಾಗಿ ಒದಗಿಸಲಾದ ಸೌಲಭ್ಯ ಹಾಗೂ ರಕ್ಷಣೆಗೆ ಇರುವ ವಿಷಯಗಳ ಕುರಿತು ಪರಿಶೀಲಿಸಬೇಕು ಎಂದು ಹೇಳಿದರು.

ಹೆಣ್ಣು ಭಾವನಾತ್ಮಕ ಜೀವಿಯಾಗಿದ್ದು, ನೊಂದ, ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು. ಮಹಿಳೆಯರಲ್ಲಿ ಹಾಗೂ ಹೆಣ್ಣು ಮಕ್ಕಳಲ್ಲಿ ಪೊಲೀಸ್‌ ಠಾಣೆ ಕುರಿತು ಇರುವ ನಕಾರಾತ್ಮಕ ಭಾವನೆ ನಿವಾರಿಸಬೇಕು. ನೊಂದವರಿಗೆ ಸ್ಪಂದನೆ ನೀಡುವುದರ ಜೊತೆಗೆ ದೌರ್ಜನ್ಯಕ್ಕೊಳಗಾದ ಮಹಿಳೆ ದೂರು ನೀಡಿದಲ್ಲಿ ಶೀಘ್ರ ನ್ಯಾಯ ಕೊಡಿಸುವ ಕಾರ್ಯವಾಗಬೇಕು. ಸರ್ಕಾರಿ ಅಧಿಕಾರಿ, ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ಗ್ರಾಮೀಣ ಹಾಗೂ ಕೊಳಗೇರಿಗಳಲ್ಲಿ ವಾಸಿಸುವ ಜನರಿಗೆ ಸಿಗಬೇಕಾದ ಸೌಲಭ್ಯಗಳು ದೊರಕಬೇಕು. ಸರ್ಕಾರ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು ಅನೇಕ ಯೋಜನೆ ಜಾರಿಗೊಳಿಸಿದ್ದು ಮಹಿಳೆಯರು ಇವುಗಳ ಸದುಪಯೋಗ ಪಡಿಸಿಕೊಳಲು ಅಧಿಕಾರಿ, ಸಿಬ್ಬಂದಿಗಳು ಶ್ರಮಿಸಬೇಕೆಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಮುರಳಿ ಮೋಹನ ರೆಡ್ಡಿ ಮಾತನಾಡಿ, ಮಹಿಳೆಯರು ಇಂದು ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿದ್ದು, ಇನ್ನೂ ಹೆಚ್ಚಿನ ಸಾಧನೆಗೆ ಪೂರಕ ವಾತಾವರಣ ನಿರ್ಮಿಸಬೇಕಿದೆ. ಮಹಿಳೆಯರಿಗೆ ಇರುವ ಕಾನೂನು ಹಾಗೂ ಹಕ್ಕುಗಳ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು. ಪೊಲೀಸ್‌ ಅಧಿಕಾರಿಗಳು ಉತ್ತಮ ಸಮಾಲೋಚಕರಾಗಬೇಕು. ಪ್ರತಿಯೊಂದು ದೂರುಗಳು ಮೊದಲು ಠಾಣೆಗಳಿಗೆ ಬರುವುದರಿಂದ ಪೊಲೀಸ್ ಅಧಿಕಾರಿಗಳು ಸಮಾಲೋಚನೆ ನಡೆಸುವ ಮೂಲಕ ಶೀಘ್ರ ನ್ಯಾಯ ದೊರಕಿಸಬಹುದಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ರಾಮಗೊಂಡ.ಬಿ. ಬಸರಗಿ ಮಾತನಾಡಿ, ಪೊಲೀಸ್ ಅಧಿಕಾರಿಗಳು ಮಹಿಳೆಯರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಇಲಾಖೆಯಲ್ಲಿ ಠಾಣೆಗೆ ಆಗಮಿಸುವ ಮಹಿಳೆಯರು ಹಾಗೂ ಇಲಾಖೆಯ ಮಹಿಳಾ ಸಿಬ್ಬಂದಿಯೊಂದಿಗೆ ಗೌರವಯುತವಾಗಿ ನಡೆದುಕೊಳ್ಳುತ್ತಿದೆ, ಠಾಣೆಗೆ ದೂರು ನೀಡಲು ಆಗಮಿಸುವ ಮಹಿಳೆಯರಿಗೆ ತ್ವರಿತವಾಗಿ ಸ್ಪಂದಿಸುವಂತೆ ತಿಳಿಸಿದರು. ಇ.ಆರ್.ಎಸ್.ಎಸ್. (112) ಕರೆ ಬಂದಲ್ಲಿ ಕೂಡಲೇ ಸ್ಪಂದಿಸುತ್ತಿದೆ. ಇದು ಮಹಿಳೆಯರಲ್ಲಿ ಸುರಕ್ಷಿತ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಕೀಲರಾದ ರವೀಂದ್ರ ತೋಟಗೆರಿ, ಪ್ರತಿಮಾ ಜೋಶಿ ಹಾಗೂ ಪೊಲೀಸ್‌ ಅಧಿಕಾರಿ ಮಲ್ಲೇಶ ಜಾಲಗಾರ ಮಹಿಳೆಯರ ಸಂರಕ್ಷಣೆ, ಹಕ್ಕುಗಳು ಹಾಗೂ ಕಾನೂನುಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಪೊಲೀಸ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಪಾತ್ರದ ಕುರಿತು ಇರುವ ಕಾನೂನುಗಳ ಕುರಿತು ಉಪನ್ಯಾಸ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಅನ್ನಪ್ಪ ಹೆಗಡೆ, ಶಿಶು ಅಭಜವೃದ್ಧಿ ಯೋಜನಾಧಿಕಾರಿ ರಾಮಮೂರ್ತಿ, ಸುಮಿತ್ರಾ, ಸ್ಪಂದನ ಸಂಸ್ಥೆಯ ಕಾರ್ಯದರ್ಶಿ ವಿ.ಸುಶೀಲ ಸೇರಿದಂತೆ ಪೊಲೀಸ್, ಅಂಗನವಾಡಿ ಮೇಲ್ವಿಚಾರಕರು ಹಾಗೂ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

112 ಸಹಾಯವಾಣಿ ಕುರಿತು ಪ್ರತಿಯೊಬ್ಬರಲ್ಲಿ ಅರಿವು ಮೂಡಿಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು. ಪೊಲೀಸ್‌ ಕುರಿತು ಮಕ್ಕಳ ಮನೋಭಾವನೆ ಬದಲಾಯಿಸಿ ಜನಸ್ನೇಹಿ ಪೊಲೀಸ್ ಆಗಲು ಕರೆ ನೀಡಿದ ಅವರು, ಮಕ್ಕಳಲ್ಲಿ ಪೊಲೀಸರ ಬಗ್ಗೆ ಇರುವ ಭಯ ನಿವಾರಣೆ ಮಾಡುವ ಕಾರ್ಯವಾಗಬೇಕು.

- ಡಾ.ನಾಗಲಕ್ಷ್ಮೀ ಚೌಧರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ

Share this article