ಸಮಾಜದಲ್ಲಿ ಮಹಿಳಾ ಸಬಲೀಕರಣ ಅತೀಮುಖ್ಯ: ಮಂಗಳಾನಾಥ ಸ್ವಾಮೀಜಿ

KannadaprabhaNewsNetwork | Published : Mar 14, 2024 2:03 AM

ಸಾರಾಂಶ

ಮಹಿಳಾ ಸಬಲೀಕರಣಗೊಂಡರೆ ಎಲ್ಲ ಮಹಿಳೆಯರು ಸಶಕ್ತರಾಗುತ್ತಾರೆ. ಸಬಲೀಕರಣ ಶಕ್ತತೆ ಎನ್ನುವುದು ಸಾಮಾನ್ಯವಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸಿ ಅವರ ಸಾಮರ್ಥ್ಯ ಹೆಚ್ಚಿಸುವುದೇ ಆಗಿದೆ. ಅರ್ಹತೆ, ಸಾಮರ್ಥ್ಯ ಹೆಚ್ಚಿಸುವುದು, ಲಿಂಗ ಸಮಾನತೆ ಅಳವಡಿಸುವುದು, ಮಹಿಳೆಯರ ಒಳಗೊಳ್ಳುವಿಕೆ ಮತ್ತು ಚುನಾವಣೆಗೆ ಕೋಟಾವನ್ನು ಹೊಂದಿರುವುದು, ಮಹಿಳಾ ಪ್ರಾತಿನಿಧ್ಯಕ್ಕಾಗಿ ಗುರಿಗಳನ್ನು ಸ್ಥಾಪಿಸುವುದು, ಮಹಿಳಾ ಅಭ್ಯರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ ಮತ್ತು ಅವರಿಗೆ ತರಬೇತಿ ನೀಡುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಪ್ರತಿಯೊಬ್ಬರೂ ದುಡಿಯಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಹಿಳೆಯರಲ್ಲಿ ಬೌದ್ಧಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಬಲ ಹೆಚ್ಚಿಸುವುದಕ್ಕೆ ಪುರುಷರು ಸಹಕಾರ ನೀಡಬೇಕು ಎಂದು ಆದಿ ಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಕಾರ್ಯದರ್ಶಿ ಮಂಗಳಾನಾಥ ಸ್ವಾಮೀಜಿ ಹೇಳಿದರು.

ನಗರ ಹೊರವಲಯದ ಎಸ್‌ ಜೆಸಿ ಐಟಿ ಇಂಜನಿಯರಿಂಗ್‌ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸಬಲೀಕರಣಗೊಂಡರೆ ಎಲ್ಲ ಮಹಿಳೆಯರು ಸಶಕ್ತರಾಗುತ್ತಾರೆ. ಸಬಲೀಕರಣ ಶಕ್ತತೆ ಎನ್ನುವುದು ಸಾಮಾನ್ಯವಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸಿ ಅವರ ಸಾಮರ್ಥ್ಯ ಹೆಚ್ಚಿಸುವುದೇ ಆಗಿದೆ. ಅರ್ಹತೆ, ಸಾಮರ್ಥ್ಯ ಹೆಚ್ಚಿಸುವುದು, ಲಿಂಗ ಸಮಾನತೆ ಅಳವಡಿಸುವುದು, ಮಹಿಳೆಯರ ಒಳಗೊಳ್ಳುವಿಕೆ ಮತ್ತು ಚುನಾವಣೆಗೆ ಕೋಟಾವನ್ನು ಹೊಂದಿರುವುದು, ಮಹಿಳಾ ಪ್ರಾತಿನಿಧ್ಯಕ್ಕಾಗಿ ಗುರಿಗಳನ್ನು ಸ್ಥಾಪಿಸುವುದು, ಮಹಿಳಾ ಅಭ್ಯರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ ಮತ್ತು ಅವರಿಗೆ ತರಬೇತಿ ನೀಡುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಪ್ರತಿಯೊಬ್ಬರೂ ದುಡಿಯಬೇಕು ಎಂದರು.

ಮಹಿಳೆಯರು ಇಂದು ಯಶಸ್ಸಿನ ಮಾಪನವಾಗಿ ಸ್ಪರ್ಧಾತ್ಮಕತೆ ಮತ್ತು ಸ್ವಾವಲಂಬನೆಗೆ ಆದ್ಯತೆ ನೀಡಿದ್ದಾರೆ. ಸಮಾಜದ ಒಲವು ಕೂಡ ಇದೇ ಆಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಚುಂಚಾದ್ರಿ ಮಹಿಳಾ ಪ್ರತಿಷ್ಠಾನವನ್ನು ಗಟ್ಟಿಗೊಳಿಸಬೇಕು. ಪ್ರತಿಷ್ಠಾನದಡಿ ಮಹಿಳೆಯರು ಬಲಿಷ್ಠವಾಗಿ ಸಂಘಟಿತರಾಗಬೇಕು ಎಂದರು.

ಪ್ರತಿಷ್ಠಾನ ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿ ದುಡಿಯಬೇಕು. ರಾಜ್ಯ ಒಕ್ಕಲಿಗರ ಸಂಘದಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು. ಚುಂಚಾದ್ರಿ ಪ್ರತಿಷ್ಠಾನವು ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ಆರ್ಥಿಕ ಸಬಲತೆಯೆಂಬ ಮೂರು ಉದ್ದೇಶಗಳನ್ನು ಹೊಂದಿದೆ. ಒಕ್ಕಲಿಗ ಸಮಾಜದ ಎಲ್ಲ ಸಂಘ - ಸಂಸ್ಥೆಗಳು ಒಂದೇ ವೇದಿಕೆಯಡಿ ಒಗ್ಗೂಡಬೇಕು. ಸಮಾಜದ ಒಳಿತಿಗಾಗಿ ಪ್ರತಿಯೊಬ್ಬರೂ ದುಡಿಯಬೇಕು. ಮಹಿಳೆಯರು ತಮ್ಮ ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು, ಕೌಶಲ್ಯಾಭಿವೃದ್ಧಿ ಹೊಂದಿ ಆರ್ಥಿಕವಾಗಿ ಸದೃಢರಾಗಬೇಕು ಇದಕ್ಕಾಗಿ ಆದಿ ಚುಂಚನಗಿರಿ ಪ್ರತಿಷ್ಠಾನ ಸದಾ ಮಹಿಳೆಯರ ಬೆಂಬಲಕ್ಕೆ ಇರಲಿದೆ ಎಂದು ಭರವಸೆ ನೀಡಿ, ಮಹಿಳೆಯರು ಕೇವಲ ಕುಟುಂಬ, ಆರ್ಥಿಕತೆ, ರಾಜಕೀಯ ಎನ್ನದೆ ಆಧ್ಯಾತ್ಮೀಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಹಿಳಾ ಸಮೂಹ ಸಂಘಟಿತರಾಗುವ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು.ನಾವು ಏಕಾಂಗಿಯಾಗಿ ಏನನ್ನೂ ಕೂಡ ಮಾಡಲು ಆಗುವುದಿಲ್ಲ ಎಂಬುದನ್ನು ಅರಿತು ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ಜತೆ ಕೈಜೋಡಿಸಬೇಕು.ಒಡೆದ ಮನಸ್ಸುಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದಲೇ ಈ ಪ್ರತಿಷ್ಠಾನ ರಾಜ್ಯಾದ್ಯಂತ ಕೆಲಸ ಮಾಡುತ್ತಿದೆ. ಇದನ್ನು ಮನಗಂಡು ಒಕ್ಕಲಿಗ ಸಮುದಾಯದ ಮಹಿಳಾ ಸಮೂಹ ಒಗ್ಗೂಡಬೇಕಿದೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ನಾನಾ ತಾಲೂಕುಗಳಿಂದ ಆಗಮಿಸಿದ್ದ ಗೌಡ್ತಿಯರು ತಮ್ಮಲ್ಲಿ ಹುದುಗಿರುವ ಕಲಾಪ್ರಪಂಚವನ್ನು ಪ್ರದರ್ಶನ ಮಾಡುವ ಮೂಲಕ ನಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟರು. ನೃತ್ಯ,ಗುಂಪಿನ ಹಾಡು,ಒಂಟಿ ಹಾಡು,ಸಮೂಹ ಕುಣಿತ, ಒಂಟಿ ಕುಣಿತ,ಬಿನ್ನಾಣದ ನಡಿಗೆ ಕ್ಯಾಟ್ ವಾಕ್‌ಗಳ ಮೂಲಕ ತಮ್ಮ ಕಲಾ ಪ್ರತಿಭೆಯನ್ನು ಹೊರಹಾಕಿದರು.

ಕಾರ್ಯಕ್ರಮದಲ್ಲಿ ಎಸ್ ಜೆಸಿಐಟಿ ಪ್ರಾಂಶುಪಾರು ಡಾ.ಜಿ.ಟಿ.ರಾಜು, ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ರಾಜ್ಯ ಉಪಾಧ್ಯಕ್ಷೆ ಉಷಾ ಆಂಜನೇಯರೆಡ್ಡಿ, ರಾಜ್ಯ ನಿರ್ದೇಶಕಿ ಅನಸೂಯ ಆನಂದ್, ವನಿತಾ ಶ್ರೀನಿವಾಸ್, ಜಿಲ್ಲಾಧ್ಯಕ್ಷೆ ಶಾಂತಾ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಹೇಮಾ ಜನಾರ್ಧನ್, ನಿರ್ದೇಶಕಿ ಪ್ರಿಯದರ್ಶಿನಿ ಗೋಪಾಲಗೌಡ, ಜಿಲ್ಲಾ ಗೌರವಾಧ್ಯಕ್ಷೆ ಲೀಲಾ, ಮತ್ತಿತರರು ಇದ್ದರು.

Share this article