ಕಪುಚಿನ್ ಕೃಷಿಕ ಸೇವಾ ಕೇಂದ್ರ । ವಿಮುಕ್ತಿಯಿಂದ ಬಣಕಲ್ ಚರ್ಚ್ ಹಾಲ್‌ನಲ್ಲಿ ನಡೆದ ಮಹಿಳಾ ಸಮಾವೇಶ
ಕನ್ನಡಪ್ರಭ ವಾರ್ತೆ, ಕೊಟ್ಟಿಗೆಹಾರಮಹಿಳೆ ಸಾಮಾಜಿಕ ಹಾಗೂ ಆರ್ಥಿಕ ಸಬಲತೆ ಸಾಧಿಸಬೇಕು. ಸಮಾಜ ಅಭಿವೃದ್ಧಿಯಾಗಬೇಕಾದರೆ ಭ್ರೂಣ ಹತ್ಯೆ ಮಾಡದೇ, ಹೆಣ್ಣನ್ನು ತುಷ್ಟ ಭಾವನೆಯಿಂದ ನೋಡದೆ ಪೂಜಿಸುವ ಕಾರ್ಯ ಆಗಬೇಕಿದೆ ಎಂದು ರಾಯಚೂರಿನ ಪೋತ್ನಾಳ ವಿಮುಕ್ತಿ ಸಂಸ್ಥೆಯ ನಿರ್ದೇಶಕ ಫಾ.ಸತೀಶ್ ಫೆನಾಂಡಿಸ್ ಹೇಳಿದರು. ಕಪುಚಿನ್ ಕೃಷಿಕ ಸೇವಾ ಕೇಂದ್ರ, ವಿಮುಕ್ತಿಯಿಂದ ಬಣಕಲ್ ಚರ್ಚ್ ಹಾಲ್‌ನಲ್ಲಿ ನಡೆದ ಮಹಿಳಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಸಮಾಜದ ಏಳಿಗೆಗೆ ಮಹಿಳೆಯ ಕೊಡುಗೆ ಅಪಾರವಾಗಿದೆ ಎಂದರು. ಚಿಕ್ಕಮಗಳೂರು ಧರ್ಮಪ್ರಾಂತ್ಯದ ಸಮಾಜ ಸೇವಾ ಸಂಸ್ಥೆ ನಿರ್ದೇಶಕ ಫಾ.ಆರ್.ಶಾಂತರಾಜ್ ಮಾತನಾಡಿ, ಸಂಘ ಗಳಿಂದ ಮಹಿಳೆಯರು ಧೈರ್ಯ ಹಾಗೂ ಆರ್ಥಿಕವಾಗಿ ಸಬಲರಾಗಲು ಮಹಿಳಾ ಹಕ್ಕುಗಳು ಸಹಕಾರಿಯಾಗಿವೆ. ಮಹಿಳೆ ವಿವಿಧ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ ದುಡಿಯುತ್ತಿದ್ದು ಮಹಿಳೆ ಸಮಾಜದಲ್ಲಿ ಅಮ್ಮನಾಗಿ ಸಹೋದರಿಯಾಗಿ ಗೌರವಯುತವಾಗಿ ನಡೆಯುವುದನ್ನು ನಾವೆಲ್ಲರೂ ಕಲಿಯಬೇಕಿದೆ ಎಂದರು. ಬಣಕಲ್ ಧರ್ಮ ಕೇಂದ್ರದ ಧರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಮಾತನಾಡಿ, ಮಹಿಳೆಗೆ ಸಮಾಜದಲ್ಲಿ ಉತ್ತಮ ಗೌರವವಿದೆ. ಅವರು ಕುಟುಂಬದ ಕಣ್ಣಾಗಿ ಸಂಸಾರ ನಡೆಸಬಲ್ಲಳು. ಮಹಿಳೆಯರು ಸ್ತ್ರೀ ಶಕ್ತಿ ಮತ್ತಿತರ ಮಹಿಳಾ ಸಂಘಟನೆ ಗಳನ್ನು ಸೇರಿ ಸ್ವಾವಲಂಬನೆಯಿಂದ ಜೀವನ ಸಾಗಿಸುತ್ತಾರೆ. ಸಮಾಜದಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನವಿದೆ ಎಂದು ಹೇಳಿದರು. ಕಬಡ್ಡಿ ಆಟಗಾರ್ತಿ ಎ.ಎಂ.ರಶ್ಮಿ ಮಾತನಾಡಿ, ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಹಿಂಜರಿಯಬಾರದು. ನಾನು ತಂದೆಯನ್ನು ಕಳೆದುಕೊಂಡಿದ್ದರೂ ತಾಯಿಯ ಸಹಾಯದಿಂದ ಕಬಡ್ಡಿ ಕ್ರೀಡೆಯಲ್ಲಿ ಮೇಲ್ಮಟ್ಟದ ಸಾಧನೆ ಮಾಡಿದ್ದೇನೆ. ಗುರಿ ಮತ್ತು ಛಲ ನಮ್ಮಲ್ಲಿ ಇದ್ದರೆ ನಾವು ಜೀವನದಲ್ಲಿ ಮುಂದೆ ಬರಬಹುದು ಎಂದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಅತಿಕಭಾನು, ಬಣಕಲ್ ವಿಮುಕ್ತಿ ನಿರ್ದೇಶಕ ಫಾ.ಎಡ್ವಿನ್ ಡಿಸೋಜ, ವಿಮುಕ್ತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಯಶೋಧ, ಕಾರ್ಯಕ್ರಮದ ಸಂಯೋಜಕಿ ವಿಂದ್ಯಾ ಯೋಗೇಶ್ ಶೆಟ್ಟಿ, ಕಾರ್ಯಕರ್ತೆಯರಾದ ಪುಷ್ಪಾ, ಪೈಝಾ, ಪದಾಧಿಕಾರಿಗಳಾದ ಸಾವಿತ್ರಿ, ದೇವಕಿ, ಪಾರ್ವತಿ ಹಾಗೂ ವಿಮುಕ್ತಿ ಒಕ್ಕೂಟದ ಸರ್ವ ಸದಸ್ಯರು ಹಾಗೂ ಬಾನಹಳ್ಳಿ ಘಟಕ, ತ್ರಿಪುರ ಘಟಕ, ಗುತ್ತಿಹಳ್ಳಿ ಘಟಕ, ಸಬ್ಬೇನಹಳ್ಳಿ ಘಟಕ, ಕೂಡಳ್ಳಿ ಘಟಕ, ಸಬ್ಲಿ ಘಟಕಗಳು ಸಮಾವೇಶದಲ್ಲಿ ಭಾಗವಹಿಸಿದ್ದವು. 6 ಕೆಸಿಕೆಎಂ 3ಕಪುಚಿನ್ ಕೃಷಿಕ ಸೇವಾ ಕೇಂದ್ರ ಹಾಗೂ ವಿಮುಕ್ತಿಯಿಂದ ಬಣಕಲ್ ಚರ್ಚ್ ಹಾಲ್‌ನಲ್ಲಿ ಮಹಿಳಾ ಸಮಾವೇಶ ನಡೆಯಿತು.