ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಹಿಳೆಯರು ಹಿಂಜರಿಕೆ ಸ್ವಭಾವದಿಂದ ಹಿಂದುಳಿದಿದ್ದಾರೆ. ತಮಗಿರುವ ಅವಕಾಶ, ಹಕ್ಕು, ಅಧಿಕಾರಕ್ಕಾಗಿ ಧೈರ್ಯವಾಗಿ ಮುನ್ನುಗ್ಗಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮತ್ತು ವಿಧವೆಯರ ಸಂಖ್ಯೆಯ ದರ ಹೆಚ್ಚಿದೆ. ಮೌಢ್ಯತೆ, ಅನಕ್ಷರತೆ ಕಾರಣವಾಗಿರುವುದರ ಜೊತೆಗೆ ಮಹಿಳೆಯರು ತಮಗೆ ಸಿಕ್ಕಿರುವ ಅಧಿಕಾರ,ಅವಕಾಶಗಳ ಹಕ್ಕುಗಳನ್ನು ಪಡೆದುಕೊಳ್ಳಲು ಧೈರ್ಯವಾಗಿ ಮುಂದೆ ಬರುತ್ತಿಲ್ಲ.
ಪ್ರತಿಯೊಬ್ಬ ಮಹಿಳೆಯೂ ಉದ್ಯೋಗಸ್ಥಳಾಗಬೇಕು. ಆರ್ಥಿಕವಾಗಿ ಸ್ವಾವಲಂಬನೆ ಹೊಂದಬೇಕು. ವಿದ್ಯಾರ್ಥಿಗಳು ಕಾಲೇಜಿನ ಸಮಯದಲ್ಲಿ ಅನ್ಯವಿಷಯಗಳಿಗೆ ಮನಸ್ಸುಕೊಡದೆ, ಬದುಕಿನ ಗುರಿ, ಉದ್ದೇಶಗಳೆಡೆ ಸಾಗಬೇಕು.
ಸಂವಿಧಾನಾತ್ಮಕವಾಗಿ ಸಿಕ್ಕಿರುವ ಮತದಾನದ ಹಕ್ಕನ್ನು ಮಹಿಳೆಯರು ಚಲಾಯಿಸುವಲ್ಲಿ ಹಿಂದುಳಿದಿದ್ದಾರೆ. ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದವರು ಕೂಡಲೇ ನೋಂದಣಿ ಮಾಡಿಸಿಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬೇಕು ಎಂದು ಕರೆನೀಡಿದರು.
ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಡಾ.ಪಿ.ದೇವರಾಜು ಮುಖ್ಯ ಅತಿಥಿಗಳಾಗಿ ಮಾತನಾಡಿ, ಭಾರತೀಯ ಮಹಿಳೆಯರಿಗೆ ಡಾ. ಅಂಬೇಡ್ಕರ್ ಹಲವು ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ ಭಾರತೀಯ ನಾರಿ ಅಭಿವೃದ್ಧಿ ಪಥದಲ್ಲಿ ಸಾಗಲು ಹೆದ್ದಾರಿಯನ್ನು ನಿರ್ಮಿಸಿಕೊಟ್ಟಿದ್ದಾರೆ. ಮಹಿಳೆಯು ತನಗಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ.ಚಂದ್ರಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಅಧ್ಯಯನದಿಂದ ಉತ್ತಮ ಫಲಿತಾಂಶ ದೊರಕಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಉದ್ಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಾಂಸ್ಕೃತಿಕ ಸಂಚಾಲಕ ಪ್ರೊ.ನಾಗೇಂದ್ರಕುಮಾರ್, ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.