ಎಲ್ಲ ಕ್ಷೇತ್ರದಲ್ಲೂ ಛಾಪು ಮೂಡಿಸಿದ ಮಹಿಳೆಯರು: ನಾಗರತ್ನ ಶೆಟ್ಟಿ

KannadaprabhaNewsNetwork | Published : Mar 18, 2024 1:45 AM

ಸಾರಾಂಶ

ದೊಡ್ಡ ಕವಿ, ಸಾಹಿತಿಗಳು ಮಹಿಳೆಯರಿಗೆ ಎತ್ತರದ ಸ್ಥಾನವನ್ನು ನೀಡಿದ್ದು, ಈ ಶತಮಾನದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ತನ್ನ ಅಸ್ತಿತ್ವ ಉಳಿಸಿಕೊಂಡು ಮುನ್ನುಗ್ಗುತ್ತಿರುವುದು ಹೆಮ್ಮೆ ಪಡುವ ವಿಚಾರ.

ಮುಂಡಗೋಡ: ರಾಮಾಯಣ ಕಾಲದಿಂದ ಹಿಡಿದು ಇಲ್ಲಿಯವರೆಗೂ ಸಮಾಜ ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡುತ್ತಾ ಬಂದಿದೆ. ಮಹಿಳೆ ಎಲ್ಲ ಕ್ಷೇತ್ರದಲ್ಲಿ ದಾಪುಗಲು ಹಾಕುತ್ತಿದ್ದು, ಮಹಿಳೆಯರು ಉನ್ನತ ಮಟ್ಟದಲ್ಲಿ ಬೆಳೆದಿದ್ದಾರೆ. ಅದಕ್ಕೆ ಸಮಾಜ ನೀಡಿದ ಗೌರವ ಮತ್ತು ಅಭಿಮಾನವೇ ಕಾರಣ ಎಂದು ಲೊಯೋಲಾ ಸಂಯಕ್ತ ಪದವಿಪೂರ್ವ ಕಾಲೇಜು ಉಪನ್ಯಾಸಕಿ ನಾಗರತ್ನ ಶೆಟ್ಟಿ ತಿಳಿಸಿದರು.ನಗರದ ಸಂಗಮೇಶ್ವರ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ಘಟಕದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಧುನಿಕ ಕಾಲದಲ್ಲಿ ಮಹಿಳೆಯವರು ಎದುರಿಸುತ್ತಿರುವ ಸಮಸ್ಯೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ದೊಡ್ಡ ಕವಿ, ಸಾಹಿತಿಗಳು ಮಹಿಳೆಯರಿಗೆ ಎತ್ತರದ ಸ್ಥಾನವನ್ನು ನೀಡಿದ್ದು, ಈ ಶತಮಾನದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ತನ್ನ ಅಸ್ತಿತ್ವ ಉಳಿಸಿಕೊಂಡು ಮುನ್ನುಗ್ಗುತ್ತಿರುವುದು ಹೆಮ್ಮೆ ಪಡುವ ವಿಚಾರ ಎಂದರು.

ರಾಜಯೋಗಿನಿ ಬ್ರಹ್ಮಕುಮಾರಿ ಗಂಗಾಬಿಕೆಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಪಕೃತಿಯಲ್ಲಿ ಮಹಿಳೆ ಮತ್ತು ಪುರುಷರಿಬ್ಬರೂ ಸಮಾನರು. ಇಬ್ಬರು ಪರಸ್ಪರ ತಮ್ಮ ಜೀವನದುದ್ದಕ್ಕೂ ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡು ಜೀವನ ನಡೆಸಿದರೆ ಯಾರಿಂದ ತೊಂದರೆ ಬರುವುದಿಲ್ಲ. ಈ ಇಬ್ಬರ ಗೌರವಕ್ಕೆ ಧಕ್ಕೆ ಬರದಂತೆ ಮತ್ತು ಇತರರಿಗೆ ಮಾದರಿಯಾಗಿ ಬೆಳೆಬೇಕಾಗಿದೆ. ಮಹಿಳೆಯ ತಾಳ್ಮೆ, ಗೌರವ ಪ್ರೀತಿ, ವಾತ್ಸಲ್ಯ ಕರುಣಾಮಯಿ ಮಹಿಳೆ ಎನ್ನುವುದನ್ನು ಸಮಾಜಕ್ಕೆ ತಿಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಮುಂಡಗೋಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಸಂತ ಕೊಣಸಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಣು ಈ ಜಗದ ಕಣ್ಣು. ಅವಳನ್ನು ಅತ್ಯಂತ ಉತ್ತಮ ಸ್ಥಾನಮಾನದಲ್ಲಿ ದೇಶದಲ್ಲಿ ಕಾಣುತ್ತಿದ್ದೇವೆ. ಇಂತಹ ಹಲವಾರು ಉದಾಹರಣೆಗಳು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ ಎಂದರು.

ಕಸಾಪ ಗೌರವ ಕಾರ್ಯದರ್ಶಿ ವಿನಾಯಕ ಶೇಟ್ ಹಾಗೂ ಎಸ್.ಡಿ ಮುಡೆಣ್ಣವರ, ಇಂದಿರಾ ಹುದ್ದಾರ, ಶಾರದಾ ರಾಠೋಡ, ಉಮಾ ಅಭಿ ಕರುವಿನಕೊಪ್ಪ, ಪಿ.ಪಿ. ಛಬ್ಬಿ, ಚಿದಾನಂದ ಪಾಟೀಲ, ಎಸ್.ಕೆ. ಬೋರಕರ್, ಎಸ್.ಬಿ. ಹೂಗಾರ, ಆರ್.ಜೆ. ಬೆಳ್ಳೆನವರ, ಆರ್.ಎಸ್. ಕಲಾಲ, ಸಂಗಪ್ಪ ಕೋಳೂರು, ನಾಗರಾಜ ಅರ್ಕಸಾಲಿ, ಆರ್.ಎನ್. ನಾಯ್ಕ, ಸುಭಾಸ ವಡ್ಡರ, ಆನಂದ ಹೊಸೂರು, ಎಚ್.ಎನ್. ತಪೇಲಿ ಮುಂತಾದವರು ಉಪಸ್ಥಿತರಿದ್ದರು.

ಆದಿಜಾಂಬವ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂಗೀತಾ. ಎಡಗೆ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಇಂದೂರು ಪ್ರೌಢಶಾಲೆ ಶಿಕ್ಷಕಿ ಮಧುಮತಿ ಹಿರೇಮಠ ಸ್ವಾಗತಿಸಿದರು. ಗೌರಮ್ಮ ಕೊಳ್ಳಾನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಮ್ಮ ನೀರಲಗಿ ನಿರೂಪಿಸಿದರು.

Share this article