ಕಾಲುಬಾಯಿ ಲಸಿಕಾ ಅಭಿಯಾನ ಯಶಸ್ಸಿಗೆ ಶ್ರಮಿಸಿ

KannadaprabhaNewsNetwork |  
Published : Oct 23, 2024, 01:46 AM IST
ಸಭೆಯನ್ನು ಉದ್ದೇಶಿಸಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿದರು.  | Kannada Prabha

ಸಾರಾಂಶ

ಕಾಲುಬಾಯಿ ರೋಗಗಳಿಂದ ಜಾನುವಾರುಗಳನ್ನು ರಕ್ಷಿಸಲು ಕಾಲುಬಾಯಿ ಲಸಿಕಾಕರಣ ಮುಖ್ಯ

ಗದಗ: 6ನೇ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ರೋಗ ಲಸಿಕಾ ಅಭಿಯಾನವು ಜಿಲ್ಲಾದ್ಯಂತ ಅಕ್ಟೋಬರ್ ನಿಂದ ಪ್ರಾರಂಭವಾಗಿ ನ. 20 ರವರೆಗೆ ಜರುಗುತ್ತಿದ್ದು, ಅಭಿಯಾನ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಲುಬಾಯಿ ರೋಗಗಳಿಂದ ಜಾನುವಾರುಗಳನ್ನು ರಕ್ಷಿಸಲು ಕಾಲುಬಾಯಿ ಲಸಿಕಾಕರಣ ಮುಖ್ಯವಾಗಿದ್ದು. ಜಾನುವಾರುಗಳಿಗೆ ತಪಾಸಣೆ ನಡೆಸಿ ತಪ್ಪದೇ ಲಸಿಕೆ ಹಾಕಬೇಕು. ಈ ಕುರಿತು ಜಾನುವಾರು ಮಾಲೀಕರಿಗೆ ಲಸಿಕಾಕರಣದ ಕುರಿತು ಅರಿವು ಮೂಡಿಸಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್.ಎಸ್ ಮಾತನಾಡಿ, ಕಾಲುಬಾಯಿ ಲಸಿಕೆಯನ್ನು ಮನೆ ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಲಸಿಕಾಕರಣದಿಂದ ಯಾವುದೇ ಜಾನುವಾರು ವಂಚಿತವಾಗದಂತೆ ನೋಡಿಕೊಳ್ಳಬೇಕು. 6 ನೇ ಸುತ್ತಿನ ಕಾಲು ಬಾಯಿ ಲಸಿಕೆ ಹಾಕಬೇಕಾದ ಜಾನುವಾರುಗಳ ಕುರಿತು ತಾಲೂಕಾವಾರು ಮಾಹಿತಿ ಪಡೆದು ಚರ್ಚಿಸಿದರು. ಜಿಲ್ಲೆಯ ಜಾನುವಾರುಗಳ ಲಸಿಕಾಕರಣಕ್ಕೆ ಅಗತ್ಯವಿರುವ ಔಷಧಿ ವ್ಯವಸ್ಥೆ ಮತ್ತು ಶಿಥಿಲೀಕರಣ ವ್ಯವಸ್ಥೆ ಕುರಿತು ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ ಅವರು, ಒಟ್ಟಾರೆ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಯಶಸ್ವಿಗೊಳಿಸಲು ಸರಿಯಾದ ಯೋಜನೆ ರೂಪಿಸಬೇಕು. ರೂಪಿಸಿದ ಯೋಜನೆಯಂತೆ ನಿಗದಿತ ಅವಧಿಯೊಳಗೆ ಅನುಷ್ಟಾನಗೊಳಿಸಿ ಪೂರ್ಣಗೊಳಿಸಬೇಕು. ಈ ಕುರಿತು ಸಾರ್ವಜನಿಕರಿಗೆ ಮುಂಚಿತವಾಗಿಯೇ ಮಾಹಿತಿ ಇರುವಂತೆ ಇಲಾಖಾಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಚ್.ಬಿ. ಹುಲಗಣ್ಣವರ ಮಾತನಾಡಿ, ಜಿಲ್ಲೆಯಲ್ಲಿ ದನ ಮತ್ತು ಎಮ್ಮೆ ಸೇರಿದಂತೆ ಒಟ್ಟು 192109 ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಲಸಿಕೆ ಸಂಗ್ರಹಿಸಿಡಲು ಶಿಥಿಲೀಕರಣದ ವ್ಯವಸ್ಥೆ ಮಾಡಲಾಗಿದ್ದು 3 ವಾಕ್ ಇನ್‌ಕೂಲರ್, 16 ಐಸ್‌ಲೈನ್ ರೆಫ್ರಿಜರೇಟರ್, 19 ಐಸ್‌ಲೈನ್ ರೆಫ್ರಿಜರೇಟರ್ ಫ್ರೀಜರ್, 7 ಆಕ್ಟಿವ್ ಕೂಲರ್ ಬಾಕ್ಸ್, 86 ರೆಫ್ರಿಜರೇಟರ್, 173 ವ್ಯಾಕ್ಸಿನ್ ಕ್ಯಾರಿಯರ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 150 ಲಸಿಕಾದಾರರು ಲಸಿಕೆ ಹಾಕಲಿದ್ದು, 11 ಲಸಿಕಾ ತಂಡದ ಮುಖ್ಯಸ್ಥರಿದ್ದಾರೆ. ಲಸಿಕಾ ಕಾರ್ಯಕ್ರಮಕ್ಕಾಗಿ ಜಿಲ್ಲೆಯ 7 ತಾಲೂಕುಗಳಲ್ಲಿ 2598 ಬ್ಲಾಕ್ ರಚಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕಾಲುಬಾಯಿ ರೋಗ ಮಾಹಿತಿ ಕುರಿತು ಪೋಸ್ಟರ್ಸ ಮತ್ತು ಕರಪತ್ರ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಪಶುಸಂಗೋಪನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ತಾಲೂಕಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ