ಹತ್ತಿ ಬಿಡಿಸುವ ಕೈಗಳಿಗೆ ರೈತರು ಹುಡುಕಾಟ: ಬೇರೆಡೆ ವಲಸೆ ಹೋಗಿರುವ ಕೂಲಿ ಕಾರ್ಮಿಕರುಮಲ್ಲಯ್ಯ ಪೋಲಂಪಲ್ಲಿ
ಕನ್ನಡಪ್ರಭ ವಾರ್ತೆ ಶಹಾಪುರಹತ್ತಿ ತೊಳೆ ಬಿಡಿಸಲು ಸಿಗದ ಕೃಷಿ ಕೂಲಿ ಕಾರ್ಮಿಕರು, ಗಾಳಿಗೆ ನೆಲಕ್ಕೆ ಸೋರಿ ಹಾಳಾಗುತ್ತಿರುವದರಿಂದ ಹತ್ತಿ ಕೈಗೆ ಬಂದರೂ ತುತ್ತು ಬಾಯಿಗೆ ಬಾರದಂತಾಗಿದೆ. ಕೃಷಿ ಕಾರ್ಮಿಕರು ಕುಟುಂಬ ಸಮೇತ ಬೆಂಗಳೂರು, ಮುಂಬೈ, ಹೈದ್ರಾಬಾದ್ ಪುನಾ, ಹುಬ್ಬಳ್ಳಿ ಸೇರಿದಂತೆ ಇನ್ನಿತರ ಕಡೆಗೆ ದುಡಿಯಲು ವಲಸೆ ಹೋಗಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಜಮೀನಿನಲ್ಲಿನ ಹತ್ತಿ ನೋಡಿ ಜೀವ ಮರಗುವಂತಾಗಿದೆ ಎಂದು ಹತ್ತಿ ಬೆಳೆದ ರೈತರು ತಮ್ಮ ಅಳಲು ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನ ದೋರನಹಳ್ಳಿ, ಸಗರ, ಕನ್ಯಾಕೋಳೂರು, ಶಿರವಾಳ, ರಸ್ತಾಪುರ್, ಮದ್ರಿಕಿ ಮೂಡಬುಳ, ಅಣಬಿ, ಹೋಸೂರು, ಬೇವಿನಹಳ್ಳಿ, ಗೋಗಿ ವನದುರ್ಗಾ ಸೇರಿದಂತೆ ಇನ್ನಿತರ ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರ ಸಮಸ್ಯೆ ಸಾಕಷ್ಟು ಇದೆ. ಹತ್ತಿ ಬಿಡಿಸಲು ಕಾರ್ಮಿಕರು ಸಿಗದೆ ರೈತರು ಪರದಾಡುತ್ತಿದ್ದಾರೆ.67 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಹತ್ತಿ ಬೆಳೆದಿದ್ದಾರೆ. ಈಗ ಬೆಳೆ ಕೈಗೆ ಬಂದಿದ್ದು, ಹತ್ತಿ ಬಿಡಿಸಲು ಕೃಷಿ ಕಾರ್ಮಿಕರು ಸಿಗದ ಕಾರಣ ರೈತರು ಕೃಷಿ ಕಾರ್ಮಿಕರ ಹುಡುಕಾಟದಲ್ಲಿ ತೊಡಗಿದ್ದಾರೆ. ಅನಿವಾರ್ಯವಾಗಿ ಬೇರೆ ಊರುಗಳಿಂದ ಕೂಲಿ ಕಾರ್ಮಿಕರನ್ನು ಕರೆಸಿಕೊಂಡು ಬರುತ್ತಿದ್ದಾರೆ. ಅವರನ್ನು ಆಟೋ ಅಥವಾ ಟಂಟಂ ಮೂಲಕ ಕರೆತಂದು ಮತ್ತೆ ವಾಪಸ್ ಅವರ ಹಳ್ಳಿಗೆ ಬಿಟ್ಟು ಬರಲಾಗುತ್ತಿದೆ. ಒಂದು ವೇಳೆ ವಾಹನ ಮಾಡದಿದ್ದರೆ ಕೃಷಿ ಕಾರ್ಮಿಕರು ಹತ್ತಿ ಬಿಡಿಸಲು ಬರಲು ನಿರಾಕರಿಸುತ್ತಿದ್ದಾರೆ.
ಕೂಲಿ ಕಾರ್ಮಿಕರ ಸಮಸ್ಯೆ: ಹತ್ತಿ ಬಿಡಿಸಲು ಕೂಲಿ ಕಾರ್ಮಿಕರ ಸಮಸ್ಯೆ ಎದುರಾಗಿದೆ. ಹತ್ತಿ ಬಿಡಿಸಲು ಕೂಲಿ ಕೆಲಸಕ್ಕೆ ಕರೆದರೆ ಯಾರು ಬರುವುದಿಲ್ಲ. ಅದರ ಬದಲಿಗೆ ಕೆಜಿ ಲೆಕ್ಕದಲ್ಲಿ ಹತ್ತಿ ಬಿಡಿಸಲು ಬರುವುದಾಗಿ ಹೇಳುತ್ತಾರೆ. 8 ರಿಂದ 10 ರು.ಗಳಿಗೆ ಒಂದು ಕೆಜಿಯಂತೆ ಹತ್ತಿ ಬಿಡಿಸುತ್ತಾರೆ. ಹೊಲಕ್ಕೆ ಹತ್ತಿ ಬಿಡಿಸಲು ಬರುವವರಿಗೆ ವಾಹನ ಸೌಕರ್ಯ ಒದಗಿಸಿ ಕೊಡಬೇಕು. ಕೂಲಿ ಕಾರ್ಮಿಕರನ್ನು ಟಂಟಂ ದಲ್ಲಿ ಕರೆದುಕೊಂಡು ಬರುವ ಚಾಲಕನಿಗೆ ಕಮಿಷನ್ ಕೊಡಬೇಕು. ಎಲ್ಲ ಖರ್ಚು ಮಾಡಿದರು ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಿದೆ ಎನ್ನುತ್ತಾರೆ ರೈತ ಮೈಲಾರಪ್ಪ.ಕೂಲಿ ದರ: ಕೂಲಿ ಲೆಕ್ಕದಲ್ಲಾದರೆ ದಿನಕ್ಕೆ ಒಬ್ಬರಿಗೆ 250 ರಿಂದ 300 ರು.ಗಳು ಕೂಲಿ ಕೊಡಬೇಕು. ಬೆ.10 ಗಂಟೆಗೆ ಮನೆ ಬಿಡುತ್ತಾರೆ. ಹೊಲದಲ್ಲಿ ಕೆಲಸಕ್ಕೆ ನಿಲ್ಲಲು ಬೆ.11.30 ಗಂಟೆಯಾಗುತ್ತದೆ. ಸಂಜೆವರೆಗೂ 15 ರಿಂದ 20 ಕೆಜಿ ಹತ್ತಿ ಬಿಡಿಸುತ್ತಾರೆ. ಆದರೆ, ಕೆಜಿ ಲೆಕ್ಕ ಕೂಲಿ ಮಾಡಿದರೆ ದಿನಕ್ಕೆ 80 ಕೆಜಿಯಿಂದ 1 ಕ್ವಿಂಟಲ್ ವರೆಗೆ ಒಬ್ಬರು ಹತ್ತಿ ಬಿಡಿಸುತ್ತಾರೆ.
ಸಾಲದ ಹೊರೆ: ಎಕರೆಗೆ 40 ಸಾವಿರ ದಿಂದ 50 ಸಾವಿರ ರು.ಗಳವರೆಗೆ ಖರ್ಚು ಮಾಡಿದ್ದೇವೆ ಎಕರೆಗೆ 15 ರಿಂದ 20 ಕ್ವಿಂಟಲ್ ಇಳುವರಿ ಬರುವ ಭರವಸೆ ಇತ್ತು. ಮಳೆ ಜೋರಾಗಿ, ಬೆಳೆ ಹಾಳಾಗಿ ಎಕರೆಗೆ 10 ರಿಂದ 12 ಕ್ವಿಂಟಲ್ ಬರುವುದು ದುಸ್ತರವಾಗಿದೆ. ಬೀಜ, ಗೊಬ್ಬರ, ಕೂಲಿ, ಆಳು, ಎತ್ತು ಹಾಗೂ ನಾವು ದುಡಿದ ಕೂಲಿ ಎಲ್ಲಾ ತೆಗೆದರೆ ಕೈಯಲ್ಲಿ ಉಳಿಯುವುದು ಮತ್ತೆ ಸಾಲ. ಇದರ ಹೊರೆ ಜಾಸ್ತಿಯಾಗಿದೆ ಎಂದು ಕಾಡಮಗೇರಾ ಗ್ರಾಮದ ರೈತ ದೇವಿಂದ್ರಪ್ಪ ಅಳಲು ತೋಡಿಕೊಂಡರು.----
.....ಕೋಟ್ -1.....ಸಾಲ ಮಾಡಿ 8 ಎಕರೆ ಜಮೀನಿನಲ್ಲಿ ಕಷ್ಟಪಟ್ಟು ಹತ್ತಿ ಬೆಳೆದಿದ್ದೇನೆ. ಹತ್ತಿ ಬಿಡಿಸಲು ಕೂಲಿಗಾರರು ಸಿಗುತ್ತಿಲ್ಲ. ಕೂಲಿ ಕೂಲಿಗೆ ಕರೆದರೆ ಯಾರು ಬರುತ್ತಿಲ್ಲ. ಕೆಜಿ ಲೆಕ್ಕದಲ್ಲಿ ಬಿಡಿಸುತ್ತಾರೆ. ಕೇಜಿಗೆ 10 ರು.ಗಳಾದರೆ ಬರುತ್ತಾರೆ. ನಾಳೆಯಿಂದ ಬನ್ನಿ ಎಂದರೆ ಬೆಳಗಾಗುವಷ್ಟರಲ್ಲಿ 12 ರು.ಗಳು ಕೊಡುತ್ತಾರೆ. ಅಲ್ಲಿಗೆ ಹೋಗುತ್ತೇವೆ ಎನ್ನುತ್ತಾರೆ. ಹೊಲದಾಗ ಹತ್ತಿ ಹಾಳಾಗುತ್ತಿದ್ದು, ಚಿಂತೆಯಾಗಿ ಬಿಟ್ಟಿದೆ.
- ಸಂಗಣ್ಣ ದೋರನಹಳ್ಳಿ, ದೋರನಹಳ್ಳಿ ಗ್ರಾಮದ ರೈತ.------
....ಕೋಟ್-2.......ಶಾಲೆ ಬಿಡಿಸಿ ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ಹಳ್ಳಿಗಳಲ್ಲಿ ಬಾಲಕಾರ್ಮಿಕ ಪದ್ಧತಿ ರಾಜರೋಷವಾಗಿ ನಡೆಯುತ್ತಿದೆ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಇದರ ಬಗ್ಗೆ ಎಚ್ಚರ ವಹಿಸುವುದು ಅಗತ್ಯವಾಗಿದೆ.
- ವಿಜಯಕುಮಾರ, ಜಿಲ್ಲಾ ಕಾರ್ಮಿಕ ಮುಖಂಡ.-----
ಪೋಟೊ: ಶಹಾಪುರ ತಾಲೂಕಿನಲ್ಲಿ ಹತ್ತಿ ಬೆಳೆ ಬೆಳೆದ ಜಮೀನೊಂದರಲ್ಲಿ ಹತ್ತಿ ಬಿಡಿಸಲು ಕೂಲಿ ಕಾರ್ಮಿಕರು ಸಿಗದೇ ಹತ್ತಿ ಹೊಲದಲ್ಲಿ ಹಾಳಾಗುತ್ತಿರುವುದು.11ವೈಡಿಆರ್8
------ಪೋಟೊ:ಶಹಾಪುರ ತಾಲೂಕಿನಲ್ಲಿ ಹತ್ತಿ ಬೆಳೆ ಬೆಳೆದ ಜಮೀನೊಂದರಲ್ಲಿ ಹತ್ತಿ ಬಿಡಿಸಲು ಕೂಲಿ ಕಾರ್ಮಿಕರು ಸಿಗದೇ ಹತ್ತಿ ಹೊಲದಲ್ಲಿ ಹಾಳಾಗುತ್ತಿರುವುದು.
11ವೈಡಿಆರ್9