ಸೃಜನಶೀಲತೆ, ಕುಶಲತೆ, ಸಜ್ಜನಶೀಲತೆ ಅಗತ್ಯ

KannadaprabhaNewsNetwork | Published : Mar 26, 2025 1:35 AM

ಸಾರಾಂಶ

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಮೂರು ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುವುದು ಪತ್ರಿಕಾರಂಗ

ಕನ್ನಡಪ್ರಭ ವಾರ್ತೆ ಮೈಸೂರು

ಯಾವುದೇ ಭಾಷೆಯು ಸಮಾಜದ ವಿಕಸನದ ಉತ್ಪನ್ನವಾಗಿದೆ. ಪತ್ರಿಕೋದ್ಯಮದ ಭಾಷೆಯಲ್ಲಿ ಸೃಜನಶೀಲತೆ, ಕುಶಲತೆ ಹಾಗೂ ಸಜ್ಜನಶೀಲತೆಯಿರಬೇಕು ಎಂದು ಅಸ್ಸಾಂ ಕೇಂದ್ರೀಯ ವಿವಿ ವಿಶ್ರಾಂತ ಸಹ ಕುಲಪತಿ ಪ್ರೊ.ಕೆ.ವಿ. ನಾಗರಾಜ್ ತಿಳಿಸಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಇನ್ಸಿಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ಅಂಡ್ ರಿಸರ್ಚ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ಬರವಣಿಗೆ ಕೌಶಲ್ಯಗಳು ಕುರಿತ ಎರಡು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾಷೆಗಳ ನಡುವೆ ಭಿನ್ನತೆಯಿದ್ದರೂ ಈ ದೇಶದಲ್ಲಿ ಪ್ರತಿಯೊಂದು ಭಾಷೆಗೂ ತನ್ನದೇ ಆದ ವೈಶಿಷ್ಟ್ಯವಿದೆ. ಉತ್ತಮ ಪತ್ರಕರ್ತರಾಗಲು ಬಯಸುವವರು ಒಂದಕ್ಕಿಂತ ಹೆಚ್ಚು ಭಾಷೆಯಲ್ಲಿ ಪರಿಣಿತ ಪಡೆಯುವುದು ಉತ್ತಮ. ಭಾಷೆಯಲ್ಲಿ ಚುಟುಕುತನ ಹಾಗೂ ಚುರುಕುತನ ಬಹಳ ಮುಖ್ಯ ಎಂದು ಅವರು ಹೇಳಿದರು.

ಸರಳ ಮತ್ತು ಜನಸಾಮಾನ್ಯರಿಗೆ ತಲುಪುವ ಭಾಷಾ ಬಳಕೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅವಶ್ಯವಾಗಿದೆ. ಅಂತಹ ಸರಳ ಸಜ್ಜನಿಕೆಯ ಭಾಷೆಯನ್ನು ಬಸವಣ್ಣನವರ ವಚನಗಳಲ್ಲಿ ಕಾಣಬಹುದು. ಪತ್ರಕರ್ತರಾದವರಿಗೆ ಭಾಷಾ ಶುದ್ಧತೆ ಹಾಗೂ ವ್ಯಾಕರಣ ಸ್ಪಷ್ಟತೆ ಬಹಳ ಮುಖ್ಯ ಎಂದರು.

ಸಾಹಿತ್ಯ ಓದಿ

ಕಾರ್ಯಾಗಾರ ಉದ್ಘಾಟಿಸಿದ ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ.ಎನ್. ಮಮತಾ ಮಾತನಾಡಿ, ಸಾಹಿತ್ಯ ಓದುವ ಹವ್ಯಾಸವನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಸಾಹಿತ್ಯ ಓದುವಿಕೆ ನಶಿಸಿ ಹೋಗುತ್ತಿದೆ. ತಂತ್ರಜ್ಞಾನ ಭಾಷೆಯನ್ನು ಬಿಟ್ಟು ಎಲ್ಲರೂ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಪ್ರಭು ಮಾತನಾಡಿ, ಪತ್ರಿಕೋದ್ಯಮ ಮತ್ತು ಪತ್ರಕರ್ತರಿಗೆ ವಿಶೇಷವಾದ ಶಕ್ತಿಯಿದೆ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಮೂರು ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುವುದು ಪತ್ರಿಕಾರಂಗ. ಆದ್ದರಿಂದ ಇದನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದೇ ಬಿಂಬಿಸಲಾಗುತ್ತಿದೆ. ಖಡ್ಗಕ್ಕಿಂತ ಲೇಖನಿ ಹರಿತ ಎಂಬ ಮಾತಿನಂತೆ ಸಮಾಜವನ್ನು ಸರಿದಾರಿಗೆ ತರುವ ಜವಾಬ್ದಾರಿ ಪತ್ರಿಕೋದ್ಯಮದ್ದಾಗಿದೆ ಎಂದು ಹೇಳಿದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ಪತ್ರಕರ್ತರಾದ ಎಚ್.ಆರ್. ಶ್ರೀಶಾ, ಎಂ. ನಾಗರಾಜ, ಹೊನಕೆರೆ ನಂಜುಂಡೇಗೌಡ ಮತ್ತು ಡಾ. ಕೂಡ್ಲಿ ಗುರುರಾಜ ಇದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ತ್ರಿವೇಣಿ ಸ್ವಾಗತಿಸಿದರು. ವಿದ್ಯಾರ್ಥಿನಿ ಎಂ.ಆರ್. ಸುಶ್ಮಿತಾ ಪ್ರಾರ್ಥಿಸಿದರು. ಎನ್. ಕೀರ್ತನಾ ವಂದಿಸಿದರು. ಪತ್ರಿಕೋದ್ಯಮದ ಸಹಾಯಕ ಪ್ರಾಧ್ಯಾಪಕಿ ಡಾ. ಸುವರ್ಣ ಕಂಬಿ ನಿರೂಪಿಸಿದರು.

--

ಪ್ರತಿನಿತ್ಯ ಸಾಹಿತ್ಯ ಓದುವುದರಿಂದ ಭಾಷಾ ಜ್ಞಾನ ಬೆಳೆಯುತ್ತದೆ. ಉತ್ತಮ ಪತ್ರಕರ್ತರಾಗಬೇಕೆಂದರೆ ಸಾಹಿತ್ಯ ಓದು ಬಹಳ ಮುಖ್ಯ. ತಂತ್ರಜ್ಞಾನವನ್ನು ಅತಿಯಾಗಿ ಬಳಸದೆ ಕೇವಲ ಪೋಷಕ ಸಾಧನವಾಗಿ ಮಾತ್ರ ಬಳಸಿಕೊಳ್ಳಬೇಕು.

- ಪ್ರೊ.ಎನ್. ಮಮತಾ, ಮುಖ್ಯಸ್ಥೆ, ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ ವಿಭಾಗ, ಮೈಸೂರು ವಿವಿ

----

ಇತ್ತೀಚಿನ ದಿನಗಳಲ್ಲಿ ಜನರನ್ನು ದಿಕ್ಕು ತಪ್ಪಿಸುವಂತಹ ಸುಳ್ಳು ಸುದ್ದಿಗಳೇ ಹೆಚ್ಚಾಗುತ್ತಿವೆ. ಜವಾಬ್ದಾರಿಯುತ ಪತ್ರಿಕಾ ಬರವಣಿಗೆಗೆ ವಿಶ್ವಾಸಾರ್ಹತೆಯು ಬಹಳ ಮುಖ್ಯ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಉತ್ತಮ ಭಾಷಾ ಕೌಶಲ್ಯಗಳನ್ನು ಪಡೆದುಕೊಳ್ಳಬೇಕು.

- ಪ್ರೊ.ಬಿ.ವಿ. ಸಾಂಬಶಿವಯ್ಯ, ಮುಖ್ಯ ಕಾರ್ಯನಿರ್ವಾಹಕ, ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು

Share this article