ಕನ್ನಡಪ್ರಭ ವಾರ್ತೆ ಶಿಕಾರಿಪುರ
ರಾಜಯೋಗಿನಿ ದಾದಿ ಪ್ರಕಾಶಮಣಿಜೀ ಅವರ ಸ್ಮರಣಾರ್ಥ ವಿಶ್ವ ಬಂಧುತ್ವ ದಿನದ ಅಂಗವಾಗಿ ಇದೇ 25ರ ಸೋಮವಾರ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ಥಳೀಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕರಾದ ಸ್ನೇಹಕ್ಕ ತಿಳಿಸಿದರು.ಇಲ್ಲಿನ ರಥಬೀದಿಯ ಬ್ರಹ್ಮಕುಮಾರಿ ಈಶ್ವರೀಯ ವಿವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಅಂತಾರಾಷ್ಟ್ರೀಯ ಆದ್ಯಾತ್ಮಿಕ ಸಮಾಜ ಸೇವೆಯ ಸಂಸ್ಥೆಯಾಗಿದ್ದು, ಪ್ರತಿಯೊಬ್ಬರೂ ಮೌಲ್ಯಾಧಾರಿತ ಜೀವನ ನಡೆಸಲು ವಿಶೇಷ ಮಾರ್ಗದರ್ಶನ ನೀಡುತ್ತಿರುವ ವಿವಿ ಜಗತ್ತಿನಾದ್ಯಂತ 147 ದೇಶಗಳಲ್ಲಿ ನಿಸ್ವಾರ್ಥವಾಗಿ,ಉಚಿತವಾಗಿ ಜಾತಿ ಮತ ಬೇಧವಿಲ್ಲದೆ ಸೇವೆ ಸಲ್ಲಿಸುತ್ತಿದೆ ಎಂದರು.
ಸಂಸ್ಥೆಯ ಸೇವೆಯನ್ನು ಜಗತ್ತಿನಾದ್ಯಂತ ವಿಸ್ತಾರಗೊಳಿಸಲು ರಾಜಯೋಗಿಣಿ ದಾದಿ ಪ್ರಕಾಶ್ ಮಣಿಜೀರವರ ಜ್ಞಾನ, ತಪಸ್ಸು, ಸೇವೆ, ಪ್ರೀತಿಪಾಲನೆ, ಅವಿಸ್ಮರಣೀಯವಾಗಿ ವರ್ಣಿಸಲು ಅಸಾದ್ಯವಾಗಿದೆ. ರಾಜಯೋಗಿನಿ ರವರ ಸ್ಮರಣಾರ್ಥ ವಿಶ್ವ ಬಂಧುತ್ವ ದಿನದ ಅಂಗವಾಗಿ ಎಲ್ಲೆಡೆ ಬೃಹತ್ ರಕ್ತದಾನ ಶಿಬಿರ ಆಯೋಜಿಸಲು ತೀರ್ಮಾನಿಸಲಾಗಿದೆ. ಶಿಬಿರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ರಾಘವೇಂದ್ರ ಸಮ್ಮುಖದಲ್ಲಿ ಚಾಲನೆ ನೀಡಲಾಗುವುದು, ವಿರಕ್ತಮಠ ಹಾಗೂ ತಿಪ್ಪಾಯಿಕೊಪ್ಪದ ಶ್ರೀಗಳ ಸಹಿತ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ದೇಶಾದ್ಯಂತ ಆಯೋಜಿಸಲಾದ ರಕ್ತದಾನ ಶಿಬಿರಕ್ಕೆ ದೆಹಲಿ ಮುಖ್ಯ ಶಾಖೆಯಲ್ಲಿ ಕೇಂದ್ರ ಸಚಿವ ಜೆ.ಪಿ ನಡ್ಡಾ ಅಧಿಕೃತವಾಗಿ ಚಾಲನೆ ನೀಡಲಿದ್ದು, ಅಭಿಯಾನದಲ್ಲಿ 1 ಲಕ್ಷ ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ರಕ್ತ ದಾನ ಎಲ್ಲ ದಾನಗಳಿಗಿಂತ ಶ್ರೇಷ್ಟವಾಗಿದ್ದು, ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ, ಕೃತಕವಾಗಿ ಉತ್ಪಾದಿಸಲು ಅಸಾದ್ಯವಾದ ರಕ್ತ ದಾನ ಮಾಡುವುದರಿಂದ ಅಗತ್ಯವಿರುವ ರೋಗಿಗೆ ಮರುಜನ್ಮ ನೀಡಿದ ಪುಣ್ಯ ಪ್ರಾಪ್ತಿಯಾಗಲಿದೆ. ಯುವಜನತೆ ಆರೋಗ್ಯವಂತರು ಕಾಲಕಾಲಕ್ಕೆ ರಕ್ತ ದಾನ ಮಾಡುವ ಅಬ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಬಸವ ಕುಲಾಲ್ ಮಾತನಾಡಿ, ರಕ್ತದಾನ ಶಿಬಿರದ ಮೂಲಕ ಅತಿ ಹೆಚ್ಚು ರಕ್ತ ಸಂಗ್ರಹಣೆಯಲ್ಲಿ ತಾಲೂಕು ಮುಂಚೂಣಿಯಲ್ಲಿದ್ದು, ಈ ದಿಸೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಪಾತ್ರ ಬಹು ಅಮೂಲ್ಯವಾಗಿದೆ ಎಂದರು.ಗೋಷ್ಠಿಯಲ್ಲಿ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸಂಘಟನಾ ಕಾರ್ಯದರ್ಶಿ ಕಾಂಚನ ಕುಮಾರ್, ವಿಹಿಂಪ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ್, ಸಾಮಾಜಿಕ ಕಾರ್ಯಕರ್ತ ಹದಡಿ ಪ್ರವೀಣ್, ಜೆಸಿಐ ಅಧ್ಯಕ್ಷ ಪ್ರಶಾಂತ್ ಪ್ರತಿಬಿಂಬ, ವಿಜಯಶ್ರೀ, ಲಲಿತಕ್ಕ, ಮಂಜುಳಕ್ಕ, ಮನೋಜ್, ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕ ಚಂದ್ರಶೇಖರ್ ಉಪಸ್ಥಿತರಿದ್ದರು.