ರಂಗಭೂಮಿ ಬದುಕಿಗೆ ಹತ್ತಿರ ಆಗಿರಬೇಕು

KannadaprabhaNewsNetwork | Published : Mar 24, 2025 12:35 AM

ಸಾರಾಂಶ

ಜನರ ಕಷ್ಟ, ದುಃಖ-ದುಮ್ಮಾನಗಳು, ಜೀವನ ಸಾಧನೆಗಳು, ಅವರ ಕಲೆಗಳು ಕಥಾ ವಸ್ತುವಾದರೆ ರಂಗಭೂಮಿಯು ವಾಸ್ತವದ ನೆಲೆಗಟ್ಟಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಂಗಭೂಮಿಯು ಮನುಷ್ಯನ ಬದುಕಿಗೆ ಹತ್ತಿರ ಆಗಿರಬೇಕು ಎಂದು ಹಿರಿಯ ರಂಗಕರ್ಮಿ ಕೆ.ಆರ್. ಸುಮತಿ ತಿಳಿಸಿದರು.

ನಗರದ ರಂಗಾಯಣದ ಭೂಮಿಗೀತದಲ್ಲಿ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಆಯೋಜಿಸಿರುವ ವಿಶ್ವ ರಂಗ ಸಂಭ್ರಮ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರ ಕಷ್ಟ, ದುಃಖ-ದುಮ್ಮಾನಗಳು, ಜೀವನ ಸಾಧನೆಗಳು, ಅವರ ಕಲೆಗಳು ಕಥಾ ವಸ್ತುವಾದರೆ ರಂಗಭೂಮಿಯು ವಾಸ್ತವದ ನೆಲೆಗಟ್ಟಾಗುತ್ತದೆ. ಜನರಿಗೆ ಉಪಯೋಗವಾಗುವಂತಹ ನಾಟಕಗಳನ್ನು ಹೆಚ್ಚು- ಹೆಚ್ಚು ಪ್ರದರ್ಶನ ಮಾಡಬೇಕಾಗಿದೆ ಎಂದರು.

ಸಂವಿಧಾನ ನಮಗೆ ಕೊಟ್ಟಿರುವ ಸೌಲಭ್ಯಗಳು, ಕರ್ತವ್ಯಗಳು, ಹಕ್ಕುಗಳ ಬಗ್ಗೆ ಜನರಿಗೆ ಅರಿವನ್ನು ಹಾಗೂ ಜಾಗೃತಿ ಮೂಡಿಸುವಂತಹ ನಾಟಕಗಳು ರಂಗಭೂಮಿಯಲ್ಲಿ ಪ್ರದರ್ಶನವಾಗಬೇಕಾಗಿದೆ ಎಂದು ಅವರು ಹೇಳಿದರು.

ವೃತ್ತಿಪರ ನಾಟಕಗಳಲ್ಲಿ ಕಾಣುತ್ತಿದ್ದ ವೈಭವಯುತವಾದ ರಂಗಸಜ್ಜಿಕೆ, ವಸ್ತ್ರಾಲಂಕಾರ ಇವುಗಳಿಗೆ ವ್ಯತಿರಿಕ್ತವಾಗಿ ಸೀಮಿತ ಪರಿಕರಗಳನ್ನು ಬಳಸಿಕೊಂಡು ಬದುಕಿಗೆ ಹತ್ತಿರವಾದ ನಾಟಕಗಳನ್ನು ಪ್ರದರ್ಶಿಸಲು ಹವ್ಯಾಸಿ ಕಲಾವಿದರು ಪ್ರಾರಂಭಿಸಿದರು. ಶ್ರೀರಂಗ, ಟಿ.ಪಿ. ಕೈಲಾಸಂ ಅವರು ಪ್ರಥಮವಾಗಿ ಈ ಪ್ರಯೋಗವನ್ನು ಮಾಡಿದರು. ತದನಂತರ ಬಿ.ವಿ. ಕಾರಂತರು ಸಂಕ್ರಾಂತಿ, ಈಡೀಪಸ್, ಜೋಕುಮಾರಸ್ವಾಮಿಯಂತಹ ನಾಟಕಗಳನ್ನು ರಂಗಭೂಮಿಗೆ ಅಳವಡಿಸುವ ಮೂಲಕ ಆಧುನಿಕ ರಂಗಭೂಮಿಗೆ ಹೊಸ ಅಸ್ಮಿತೆಯನ್ನು ತಂದರು. ಪ್ರಸನ್ನ, ಸಿಜಿಕೆ ಮುಂತಾದವರು ಹವ್ಯಾಸಿ ರಂಗಭೂಮಿಯ ಬೆಳವಣಿಗೆಗೆ ದುಡಿಮೆಯನ್ನು ಮಾಡಿದ್ದಾರೆ ಎಂದು ಅವರು ವಿವರಿಸಿದರು.

ವೃತ್ತಿ ಕಲಾವಿದರಿಗೆ ನೆರವು

ಪ್ರಸ್ತುತ ಕಾಲಘಟ್ಟದಲ್ಲಿ ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿಯ ನಡುವೆ ಅಂತರ ಕಡಿಮೆಯಾಗಿದೆ. ಎರಡರ ನಡುವೆ ಮಸುಕು ಇಲ್ಲ. ಈ ಹಿನ್ನೆಲೆಯಲ್ಲಿ ಹವ್ಯಾಸಿ ನಾಟಕ ತಂಡಗಳು ಕನಿಷ್ಠ ಇಬ್ಬರು ವೃತ್ತಿ ರಂಗಭೂಮಿ ಕಲಾವಿದರನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಿಕೊಂಡು ಅವರಿಗೆ ವೇತನ ಕೊಡಬೇಕು. ಇದರಿಂದ ವೃತಿಪರ ಕಲಾವಿದರಿಗೂ ಅನುಕೂಲವಾಗುತ್ತದೆ. ಇದಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅನುದಾನ ನೀಡುವ ಸಮಯದಲ್ಲಿ ವೃತ್ತಿಪರ ರಂಗತಂಡಗಳಿಗೂ ಸಹಾಯವನ್ನು ಮಾಡಬೇಕು. ವೃತ್ತಿ ರಂಗ ಕಲಾವಿದರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಅವರು ಮನವಿ ಮಾಡಿದರು.

ಉದ್ಯಮದವರು ರಂಗ ತಂಡ ಕಟ್ಟಲಿ

ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ದಶಕಗಳ ಹಿಂದೆ ಸಾರ್ವಜನಿಕ ಉದ್ದಿಮೆಗಳಾದ ಎಚ್‌ಎಂಟಿ, ಪೇಪರ್ ಮಿಲ್ ಸೇರಿದಂತೆ ಹಲವಾರು ಉದ್ದಿಮೆಗಳು ನಾಟಕ ತಂಡಗಳನ್ನು ಪ್ರೋತ್ಸಾಹಿಸುತ್ತಿದ್ದವು. ಒಂದೊಂದು ಸಂಸ್ಥೆಯಲ್ಲಿ 2- 3 ನಾಟಕ ತಂಡಗಳು ಇರುತ್ತಿದ್ದವು. ಇದರಿಂದ ಉದ್ಯಮಗಳಿಗೂ ಬ್ರ್ಯಾಂಡಿಗ್ ಆಗುತ್ತಿತ್ತು. ಹೊಸ- ಹೊಸ ನಾಟಕಗಳ ಪ್ರಯೋಗಗಳ ಮೂಲಕ ರಂಗಭೂಮಿಯು ಬೆಳವಣಿಗೆ ಹೊಂದಿತು. ಆದರೆ, ಆ ಉದ್ದಿಮೆಗಳು ಸ್ಥಗಿತಗೊಂಡಿರುವುದರಿಂದ ನಾಟಕ ತಂಡಗಳು ನಿಷ್ಕ್ರೀಯೆಗೊಂಡಿವೆ ಎಂದರು.

ಆದ್ದರಿಂದ ಇನ್ಫೋಸಿಸ್, ಟಾಟಾ, ಬಿರ್ಲಾ ಅಂತಹ ದೊಡ್ಡ- ದೊಡ್ಡ ಉದ್ದಿಮೆಗಳು ತಮ್ಮ ಸಂಸ್ಥೆಗಳಲ್ಲಿ ರಂಗತಂಡಗಳನ್ನು ಕಟ್ಟಬೇಕು. ನಾಟಕಗಳನ್ನು ಪ್ರದರ್ಶನ ಮಾಡಿಸಬೇಕು. ರಂಗಭೂಮಿ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಅಧ್ಯಕ್ಷ ರಾಜೇಶ್ ಎಚ್. ತಲಕಾಡು, ಕಾರ್ಯದರ್ಶಿ ಎಂ.ಪಿ. ಹರಿದತ್ತ ಮೊದಲಾದವರು ಇದ್ದರು.

Share this article