ರಾಘವೇಂದ್ರ ಅಗ್ನಿಹೋತ್ರಿ
ಮಂಗಳೂರು : ವಿಶ್ವದ ಅತ್ಯಂತ ದುಬಾರಿ ಮಾವು ಎಂದೇ ಪ್ರಸಿದ್ಧಿ ಪಡೆದಿರುವ ಮಿಯಾಝಕಿ ಮಾವು ಈಗ ಕರುನಾಡಿನ ರೈತರ ಅಂಗಳದಲ್ಲೂ ಬೆಳೆಯುತ್ತಿದೆ. ರಾಜ್ಯದ ಹಲವು ಪ್ರಗತಿಪರ ಕೃಷಿಕರು ಮಿಯಾಝಕಿ ಮಾವು ಬೆಳೆಯಲು ಮುಂದಾಗುತ್ತಿದ್ದು, ಕೆಲವರ ಗಿಡಗಳಲ್ಲಿ ಹೂವು ಬಂದರೆ ಇನ್ನು ಕೆಲವು ರೈತರು ಈಗಾಗಲೇ ಫಸಲು ಪಡೆದು, ಹಣ್ಣು ಸವಿದಿದ್ದಾರೆ. ನಿಧಾನವಾಗಿ ಮಿಯಾಝಕಿ ಮಾವು ಈಗ ಕರುನಾಡಿನಲ್ಲಿ ಬೇರೂರುತ್ತಿದೆ.
ರಾಜ್ಯದ ಚಿಕ್ಕೋಡಿಯ ಪ್ರಗತಿಪರ ರೈತರಾದ ಶಿವನಗೌಡ ಪಾಟೀಲ್ ಹಾಗೂ ಉಡುಪಿ ಶಿರ್ವದ ಕಸಿ ತಜ್ಞ ಜೋಸೆಫ್ ಅವರು ಈಗಾಗಲೇ ಮಿಯಾಝಕಿ ಫಸಲು ಪಡೆದು, ಸವಿದಿದ್ದಾರೆ. ಮಧ್ಯಪ್ರದೇಶದಿಂದ ಗಿಡ ತರಿಸಿರುವ ಪಾಟೀಲ್ ಅವರು ಕಳೆದ ವರ್ಷವೇ ಒಂದು ಮಾವಿನಹಣ್ಣಿಗೆ 10 ಸಾವಿರ ರುಪಾಯಿಗೆ ಮಾರಾಟ ಮಾಡಿದ್ದಾರೆ. ಆದರೆ ಇದುವರೆಗೆ ರೈತರು ನಾಲ್ಕೈದು ಗಿಡಗಳನ್ನಷ್ಟೇ ನೆಟ್ಟು ನಮ್ಮ ವಾತಾವರಣದಲ್ಲಿ ಹೊಂದಾಣಿಕೆಯಾಗಬಹುದಾ ಎಂದು ಪ್ರಯೋಗ ನಡೆಸಿದ್ದು, ಇನ್ನೂ ಯಾವ ರೈತರೂ ವಾಣಿಜ್ಯಿಕವಾಗಿ ಈ ಮಾವು ಬೆಳೆಯಲು ಆರಂಭಸಿಲ್ಲ. ಸ್ವತಃ ತೋಟಗಾರಿಕಾ ಇಲಾಖೆಯ ವತಿಯಿಂದಲೂ ಕೆಲವು ಗಿಡಗಳನ್ನು ನೆಟ್ಟು ಈ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.ಮಿಯಾಝಕಿ ವಿಶೇಷತೆಯೇನು?
ಹಣ್ಣುಗಳ ರಾಜ ಮಾವು, ಆದರೆ ಮಾವಿನಲ್ಲಿ ಅತ್ಯಂತ ದುಬಾರಿ ಹಣ್ಣು ಮಿಯಾಝಕಿ. ತನ್ನ ಆಕರ್ಷಕ ಬಣ್ಣದಿಂದಲೇ ಈ ಮಾವು ಗ್ರಾಹಕರನ್ನು ಸೆಳೆಯುತ್ತಿದೆ. ಅದೇ ರೀತಿ ಮಿಯಾಝಕಿ ಮಾವಿಗಿರುವ ಅತ್ಯಧಿಕ ದರ ಕೃಷಿಕರನ್ನೂ ಸೆಳೆಯುತ್ತಿದ್ದು, ಗುಜರಾತ್, ಮಧ್ಯಪ್ರದೇಶ, ಕೋಲ್ಕೊತ್ತಾ ಹಾಗೂ ಕೇರಳದಿಂದ ಗಿಡಗಳನ್ನು ತರಿಸಿ ನೆಡುತ್ತಿದ್ದಾರೆ. ಅದರಲ್ಲಿ ಕೆಲವರು ಯಶಸ್ಸು ಗಳಿಸಿದ್ದು, ಕೆಲವರು ಯಶಸ್ಸಿನ ಹಾದಿಯಲ್ಲಿದ್ದಾರೆ. ಶಿವಮೊಗ್ಗ ಸಾಗರದ ರಾಜೇಂದ್ರ ಹಿಂಡೂಮನೆ, ದಕ್ಷಿಣ ಕನ್ನಡದ ಅನಿಲ್ ಬಳಂಜ ಹಾಗೂ ಸುಳ್ಯದ ತಿರುಮಲೇಶ್ವರ ಭಟ್ ಅವರೂ ಈ ಮಾವು ಬೆಳೆದಿದ್ದು, ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಜಪಾನ್ ಮೂಲದ ಮಾವು:
ಮಿಯಾಝಕಿ ಮಾವಿನ ಮೂಲ ಅಮೆರಿಕಾ. ಇರ್ವಿನ್ ಎಂಬ ತಳಿಯ ಮಾವನ್ನು ಜಪಾನ್ ಮಿಯಾಝಕಿಯಲ್ಲಿ ರೈತರು ಬೆಳೆದರು. ಸಾಮಾನ್ಯವಾಗಿ ಜಪಾನ್‌ನಲ್ಲಿ ಮಾವು ಬೆಳೆಯಲ್ಲ, ಪಾಲಿಹೌಸ್‌ನಲ್ಲಿ ಹೀಟರ್ ಇಟ್ಟು ಅದಕ್ಕೆ ಪೂರಕ ವಾತಾವರಣ ಕಲ್ಪಿಸಿ ಅತ್ಯಂತ ಜತನದಿಂದ ಕಾಯ್ದುಕೊಂಡು ಈ ಮಾವು ಬೆಳೆಯುವಲ್ಲಿ ಯಶಸ್ಸು ಗಳಿಸಿದರು. ಉತ್ಪಾದನಾ ವೆಚ್ಚ ಹೆಚ್ಚಳದಿಂದ ಹಾಗೂ ಆಕರ್ಷಕ ಬಣ್ಣದಿಂದಾಗಿ ಜಪಾನ್‌ನಲ್ಲಿ ಈ ಹಣ್ಣು 2.50 ಲಕ್ಷದಿದ 2.70 ಲಕ್ಷ ರು ಗಳ ವರೆಗೆ ಮಾರಾಟವಾಗುತ್ತಿದೆ.
ಈ ಮಾವಿನ ದರ ಹಾಗೂ ಬಣ್ಣಕ್ಕೆ ಮರುಳಾಗಿ ಭಾರತದಲ್ಲೂ ಈಗ ಬೆಳೆಯುತ್ತಿದ್ದಾರೆ. ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ಬೆಳೆದು ಕಸಿ ಗಿಡಗಳು ಮಾರಾಟವಾಗುತ್ತಿವೆ. ಕರುನಾಡಿನ ರೈತರಲ್ಲೂ ಮಿಯಾಝಕಿ ಬೆಳೆಯುವ ಕ್ರೇಜ್ ಶುರುವಾಗಿದ್ದು, ಎರಡು ಮೂರು ಗಿಡಗಳನ್ನು ನೆಟ್ಟು, ಮತ್ತಷ್ಟು ಗಿಡಗಳನ್ನು ನೆಡಲು ಹೆಚ್ಚಿನ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.ಗಿಡವೂ ದುಬಾರಿ: ಮಿಯಾಝಕಿಯಲ್ಲಿ ಕೆಂಪು, ಗುಲಾಬಿ ಮತ್ತು ಹಸಿರು ಹೀಗೆ ಮೂರು ಆಕರ್ಷಕ ವೆರೈಟಿಗಳಿವೆ. ಮಿಯಾಝಕಿ ಮಾವಿನ ಗಿಡಕ್ಕೆ ಬೇಡಿಕೆ ಹೆಚ್ಚುತ್ತಿದ್ದಂತೆ ಗಿಡದ ಬೆಲೆಯೂ ದುಬಾರಿಯಾಗಿದೆ. ಕಸಿ ಗಿಡಗಳು 700 ರುಪಾಯಿಯಿಂದ 4000 ರುಪಾಯಿ ವರೆಗೂ ದರ ನಿಗದಿಯಾಗಿದೆ. ಈ ಗಿಡಗಳನ್ನು ಮಾರಾಟ ಮಾಡುತ್ತಿರುವ ದಕ್ಷಿಣ ಕನ್ನಡದ ಅನಿಲ್ ಬಳಂಜ ಅವರು ಥೈಲ್ಯಾಂಡ್‌ನಿಂದ ಗಿಡದ ಟೊಂಗೆಗಳನ್ನು ತಂದು ಅವರ ನರ್ಸರಿಯಲ್ಲಿ ಕಸಿ ಮಾಡಿ, ಒಂದು ಗಿಡಕ್ಕೆ 700 ರುಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ.
ರೈತರು ಈಗ ಕ್ರೇಝಿಯಾಗಿ ಮಿಯಾಝಕಿ ಬೆಳೆಯುತ್ತಿದ್ದಾರೆ. ಹಣ್ಣು ತಿನ್ನಲು ನಮ್ಮಲ್ಲಿಯ ಅಲ್ಫೋನ್ಸಾ ಮಾವೇ ಮಿಯಾಝಕಿಗಿಂತ ಉತ್ತಮವಾಗಿದೆ. ಆದರೆ ಬಣ್ಣ ಮತ್ತು ಅದರ ದರದ ಮೇಲಿನ ಕ್ರೇಝ್‌ನಿಂದ ರೈತರು ಸ್ವಲ್ಪ ಸ್ವಲ್ಪ ಗಿಡಗಳನ್ನು ತರಿಸಿ ಬೆಳೆಯುತ್ತಿದ್ದಾರೆ, ಕೊಪ್ಪಳದಲ್ಲಿ ರೈತರೊಬ್ಬರು ತುಂಬಾ ಗಿಡ ನೆಟ್ಟಿದ್ದಾರೆ. ಎರಡುಮೂರು ವರ್ಷಗಳಲ್ಲಿ ವಾಣಿಜ್ಯಿಕ ಸ್ವರೂಪ ಬರಬಹುದು. ತೋಟಗಾರಿಕೆ ಇಲಾಖೆ ವತಿಯಿಂದಲೂ ಸ್ವಲ್ಪ ಗಿಡ ನೆಟ್ಟು ನೋಡುತ್ತಿದ್ದೇವೆ ಎಂದು ರಾಜ್ಯ ತೋಟಗಾರಿಕಾ ಇಲಾಖೆಯ ಅಪರ ನಿರ್ದೇಶಕ ಡಾ. ಕೆ.ಬಿ. ದುಂಡಿ ಕನ್ನಡಪ್ರಭ ಕ್ಕೆ ತಿಳಿಸಿದ್ದಾರೆ.ಮೂರು ವರ್ಷದ ಮಿಯಾಝಕಿ ಗಿಡದಲ್ಲಿ ನಮ್ಮಲ್ಲಿ ಫಸಲು ಬಂದಿದೆ. ಆದರೆ ಕರಾವಳಿಯ ತಾಪಮಾನಕ್ಕೆ ಜಪಾನ್ ಅಥವಾ ಗುಜರಾತಿನಲ್ಲಿ ಬಂದ ಕಲರ್ ನಮಲ್ಲಿ ಬಂದಿಲ್ಲ. ಕಳೆದ ವರ್ಷವೂ ಎರಡು ಕಾಯಿ ಬಂದಿತ್ತು, ಈ ವರ್ಷ ಮೂರು ಕಾಯಿ ಬಂದಿದೆ.
- ಜೋಸೆಫ್ ಲೋಬೊ, ಶಂಕರಪುರ, ಉಡುಪಿ
ನಮ್ಮಲ್ಲಿ ನಾಲ್ಕು ಮಿಯಾಝಕಿ ಗಿಡಗಳಿವೆ. ನಾನು ಗಿಡಗಳಿಗೆ ವಿಶೇಷ ಆರೈಕೆ ಏನೂ ಮಾಡಿಲ್ಲ, ಹಟ್ಟಿಗೊಬ್ಬರ, ಕಪ್ಪುಮಣ್ಣು ಹಾಕಿದ್ದೇನೆ. ಮೂರು ಗಿಡಗಳಲ್ಲಿ ಕಾಯಿಗಳು ಬಂದಿವೆ. ಕಳೆದ ವರ್ಷವೂ ಹಣ್ಣಾಗಿತ್ತು, ಒಂದು ಹಣ್ಣಿಗೆ 10 ಸಾವಿರ ರುಪಾಯಿಗೆ ಮಾರಾಟ ಮಾಡಿದ್ದೇನೆ.
- ಶಿವನ ಗೌಡ ಪಾಟೀಲ್, ಪ್ರಗತಿಪರ ಕೃಷಿಕರು ಪೋಗತ್ಯಾನಟ್ಟಿ, ಚಿಕ್ಕೋಡಿ