ದಾಬಸ್‌ಪೇಟೆ: ಅಕ್ಷರ ದಾಸೋಹದ ಬಿಸಿಯೂಟ ಸೇವಿಸುತ್ತಿದ್ದ ಮಕ್ಕಳ ತಟ್ಟೆಯಲ್ಲಿ ಹುಳಗಳು ಕಂಡು ಬಂದಿದ್ದು, ಬೇಜವಾಬ್ದಾರಿ ವಹಿಸಿರುವ ಮುಖ್ಯಶಿಕ್ಷಕಿ ಅಮಾನತಿಗೆ ಆಗ್ರಹಿಸಿ ಮಕ್ಕಳು ಹಾಗೋ ಪೋಷಕರು ಶಿವಗಂಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂದೆ ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ 114ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ಬಿಸಿಯೂಟದಲ್ಲಿ ಪದೇಪದೆ ಹುಳಗಳು ಪತ್ತೆಯಾಗುತ್ತಿವೆ. ಕಳೆದ ಎರಡು ಮೂರು ತಿಂಗಳಿಂದ ಬಿಸಿಯೂಟದಲ್ಲಿ ಹುಳಗಳು ಕಂಡು ಬರುತ್ತಿದ್ದು, ಮಕ್ಕಳು ಪೋಷಕರಿಗೆ ವಿಷಯ ತಿಳಿಸಿದ್ದರು. ಪೋಷಕರು ಮುಖ್ಯಶಿಕ್ಷಕಿ ಸುಮಂಗಳ ಅವರಿಗೆ ಈ ಬಗ್ಗೆ ಗಮನಹರಿಸುವಂತೆ ತಿಳಿಸಿದರೂ ಕ್ರಮ ಕೈಗೊಳ್ಳದೆ, ಇನ್ನೊಮ್ಮೆ ಪೋಷಕರಿಗೆ ಈ ವಿಷಯ ತಿಳಿಸಿದರೆ ಪರೀಕ್ಷೆಯಲ್ಲಿ ಫೇಲು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ.ಕೊಳೆತ ತರಕಾರಿಗಳನ್ನೇ ಸಾರಿಗೆ ಬಳಸುತ್ತಾರೆ. ಅದಲ್ಲದೆ ಸರಸ್ವತಿ ಪೂಜೆ ದಿನ ಹಾಲಿನ ಪುಡಿಯಿಂದ ಮೊಸರನ್ನ ಮಾಡಿಸಿ ಬಡಿಸಿದ್ದರು. ಕೇಳಿದರೆ ಫೇಲ್ ಮಾಡ್ತೀನಿ ಅಂತ ಹೆದರಿಸ್ತಾರೆಂದು ಶಾಲಾ ಮಕ್ಕಳು ಮುಖ್ಯ ಶಿಕ್ಷಕಿ ಮೇಲೆ ಗಂಭೀರ ಆರೋಪ ಮಾಡಿದರು. ಬಿಸಿಯೂಟದಲ್ಲಿ ಹುಳಗಳು ಪತ್ತೆಯಾದ್ದರಿಂದ ಮಕ್ಕಳಿಗೆ ಮನೆಯಿಂದಲೇ ಊಟ ಕೊಡುತ್ತಿದ್ದೇವೆ ಎಂದು ಪೋಷಕರು ತಿಳಿಸಿದರು.
ಮುಖ್ಯಶಿಕ್ಷಕಿ ವಿರುದ್ದ ಕ್ರಮ ಕೈಗೊಳ್ಳಿ:ಮಕ್ಕಳು ಆರೋಗ್ಯ ಕಾಪಾಡಬೇಕಾದದ್ದು ಶಿಕ್ಷಕರ ಜವಾಬ್ದಾರಿ. ಮಕ್ಕಳ ಜೀವದ ಜತೆ ಚೆಲ್ಲಾಟ ಆಡಬಾರದು. ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆ ಜರುಗದಂತೆ ಎಚ್ಚರ ವಹಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್ ನಾಯಕ್ ಒತ್ತಾಯಿಸಿದರು.
ಬಿಇಒ ಅಸಮಾಧಾನ: ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳು ಶಾಲೆಯ ಅಡುಗೆ ಮನೆ, ದಾಸ್ತಾನು ಕೊಠಡಿ, ಶೌಚಾಲಯ, ನೀರು ಶೇಖರಣಾ ತೊಟ್ಟಿಗಳನ್ನು ಪರಿಶೀಲನೆ ಮಾಡಿದಾಗ ಅವ್ಯವಸ್ಥೆ ಹಾಗೂ ಸ್ವಚ್ಛತೆ ಇಲ್ಲದ್ದು ಕಂಡು ಸ್ವತಃ ಬಿಇಒ ಅವರೇ ಅಸಮಾಧಾನ ವ್ಯಕ್ತಪಡಿಸಿದರು.ಮುಖ್ಯಶಿಕ್ಷಕಿ ಅಮಾನತಿಗೆ ಪೋಷಕರ ಆಗ್ರಹ: ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಪೋಷಕರು, ಎಸ್‌ಡಿಎಂಸಿ ಸಭೆಯಲ್ಲಿ ಬಿಇಒ ಅವರು ಬಿಸಿಯೂಟದ ದಾಸ್ತಾನು ಪುಸ್ತಕದಲ್ಲಿ ಮಾಹಿತಿ ಬರೆಯದೇ ಇರುವುದು, ಅನುದಾನ ದುರುಪಯೋಗ, ಮಕ್ಕಳಿಂದ ಹಣ ಸಂಗ್ರಹ ಸೇರಿದಂತೆ ಎಸ್‌ಡಿಎಂಸಿ ಪುಸ್ತಕ, ಲೆಕ್ಕಪುಸ್ತಕಗಳನ್ನು ತೋರಿಸದೇ ಮನೆಯಲ್ಲಿಟ್ಟಿರುವುದಾಗಿ ಮುಖ್ಯಶಿಕ್ಷಕಿ ತಿಳಿಸಿದ್ದಕ್ಕೆ ಆಕ್ರೋಶಗೊಂಡ ಪೋಷಕರು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿದರು.ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಕುಮಾರ್ ಮಾತನಾಡಿ, ಆಹಾರ ಧಾನ್ಯಗಳನ್ನು ಶೇಖರಣೆ ಮಾಡುವ ಬಗ್ಗೆ ಅಡುಗೆ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಇದರಲ್ಲಿ ಮುಖ್ಯಶಿಕ್ಷಕಿಯ ನಿರ್ಲಕ್ಷ್ಯ ಕಾಣುತ್ತಿದ್ದು ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದರು.
ಘಟನೆ ವಿಷಯ ತಿಳಿದು, ಇಸಿಒ ಸುಚಿತ್ರಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರುದ್ರಾರಾಧ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಾಸುದೇವಮೂರ್ತಿ, ಗ್ರಾಪಂ ಅಧ್ಯಕ್ಷ ಪ್ರಭುದೇವ್, ಸದಸ್ಯ ನಾರಾಯಣ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.ಕೋಟ್......ಬಿಸಿಯೂಟದಲ್ಲಿ ಹುಳ ಪತ್ತೆಯಾಗಿರುವ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. ಪರಿಶೀಲನೆ ವೇಳೆ ಮುಖ್ಯಶಿಕ್ಷಕಿ ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದ್ದು, ಕೂಡಲೇ ಕ್ರಮ ವಹಿಸುವಂತೆ ಡಿಡಿಪಿಐ ಅವರ ಗಮನಕ್ಕೆ ತರುತ್ತೇನೆ. -ತಿಮ್ಮಯ್ಯ, ಬಿಇಒ, ನೆಲಮಂಗಲಪೋಟೋ 1 :ಶಿವಗಂಗೆಯ ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿ ಹುಳ.
ಪೋಟೋ 2 :ಶಾಲೆ ಮುಂದೆ ಮಕ್ಕಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು.
ಪೋಟೋ 3 :ಬಿಇಒ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಸಿದರು.
ಪೋಟೋ 4 :ಮುಖ್ಯಶಿಕ್ಷಕಿ ಸುಮಂಗಳ.