ಕನ್ನಡಪ್ರಭ ವಾರ್ತೆ ಔರಾದ್
ವಿವಿಧ ವಿಭಾಗಗಳಲ್ಲಿ ವಿಜೇತರಾದ ಕುಸ್ತಿಪಟುಗಳಿಗೆ ಶಾಸಕ ಪ್ರಭು ಚವ್ಹಾಣ್ ಶಾಲು ಹೊದಿಸಿ, ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿ ಪ್ರೋತ್ಸಾಹಿಸಿದರು.
ಅಂತಿಮ ಪಂದ್ಯಾವಳಿಯಲ್ಲಿ ಪುಣೆಯ ಪ್ರಸಾದ್ ಶಿಂಧೆ ಹಾಗೂ ಮಿರಜ್ ಸೋಲಾಪೂರ ಸುಮಾರು ಒಂದು ಗಂಟೆವರೆಗೆ ಸೆಣಸಾಡಿದರು. ಕೊನೆಯವರೆಗೆ ಡ್ರಾನೊಂದಿಗೆ ಆಟ ಮುಕ್ತಾಯವಾಯಿತು. ಇದಕ್ಕೂ ಮುನ್ನ ನಡೆದ 5 ಸಾವಿರ ಬಹುಮಾನ ವಿಭಾಗದ ಪಂದ್ಯಾವಳಿಯಲ್ಲಿ ಉದಗೀರನ ಆಯುಬ್ ಶೇಖ್ ಹಾಗೂ ಗಂಗಾಧರ ಅಹ್ಮದಾಪೂರ ಅವರ ನಡುವೆ ತೀವ್ರ ಸ್ಪರ್ಧೆ ನಡೆಯಿತು. ಕೊನೆಗೆ ಇಬ್ಬರಿಗೂ ಸಮಾನ ಅಂಕಗಳನ್ನು ನೀಡಿ ಡ್ರಾ ಘೋಷಿಸಲಾಯಿತು.ಕರ್ನಾಟಕವಲ್ಲದೇ ಮಹಾರಾಷ್ಟ್ರ ಹಾಗೂ ತೆಲಂಗಾಣಾ ರಾಜ್ಯದಿಂದಲೂ ನೂರಾರು ಕುಸ್ತಿಪಟುಗಳು ಆಗಮಿಸಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಮಕ್ಕಳು, ಯುವಕರು ಕುಸ್ತಿಯಲ್ಲಿರುವ ತಮ್ಮ ಕೌಶಲಗಳನ್ನು ಪ್ರದರ್ಶಿಸಿ ಕ್ರೀಡಾಸಕ್ತರನ್ನು ರಂಜಿಸಿದರು.
ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಕುಸ್ತಿ ನಮ್ಮ ದೇಶದ ಕ್ರೀಡೆಯಾಗಿದೆ. ಇಂತಹ ದೇಶಿ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕು. ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದ ಇಚ್ಛಾಪೂರ್ತಿ ಜಾತ್ರಾ ಮಹೋತ್ಸವದಲ್ಲಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ ಎಂದರು.
ಮಹಾರಾಷ್ಟ್ರ ರಾಜ್ಯದ ಕರ್ಖೇಲ್ ಗ್ರಾಮದಿಂದ ಆಗಮಿಸಿದ್ದ ಕುಸ್ತಿಪಟು ಗಣೇಶ ದೇಶಮುಖ ಒಂದೇ ಕೈಯಿದ್ದರೂ ಸಾಮಾನ್ಯ ಕುಸ್ತಿಪಟುವಿನೊಂದಿಗೆ ಸ್ಪರ್ಧಿಸಿ ಜಯ ಸಾಧಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದರು. ಹುಲ್ಯಾಳ ಗ್ರಾಮದ ಮಹಿಳಾ ಕುಸ್ತಿಪಟುಗಳಾದ ಕಲ್ಪನಾ ಪವಾರ ಹಾಗೂ, ಪಲ್ಲವಿ ಪವಾರ ಅವರು ಪುರುಷ ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಿ ಜಯ ಗಳಿಸಿದರು.