ಹಾವೇರಿ: ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಬೇಕು. ಇತರೆ ಕಾಲಂನಲ್ಲಿ ಉಪ ಪಂಗಡಗಳನ್ನು ನಮೂದಿಸಬೇಕು ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಕರೆ ನೀಡಿದರು.ಲಿಂಗಾಯತ ಮಠಾಪತಿಗಳ ಒಕ್ಕೂಟ, ಬಸವ ಸಂಸ್ಕೃತಿ ಅಭಿಯಾನ ಸಮಿತಿ ಹಾಗೂ ವಿವಿಧ ಬಸವಪರ ಸಂಘಟನೆಗಳ ಸಹಯೋಗದೊಂದಿಗೆ ಭಾನುವಾರ ನಗರದ ರಜನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನ ಪ್ರಯುಕ್ತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಜತೆ ವಚನ ಸಂವಾದದಲ್ಲಿ ಮಾತನಾಡಿದರು.ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಾವು ಏನು ಬರೆಸಬೇಕು. ವೀರಶೈವ ಲಿಂಗಾಯತ ಅಂತ ಒಬ್ಬರು, ಲಿಂಗಾಯತ ಅಂತ ಇನ್ನೊಬ್ಬರು ಹೇಳುತ್ತಾರೆ. ಮತ್ತೊಬ್ಬರು ಹಿಂದೂ ಲಿಂಗಾಯತ ಬರೆಸಿ ಎನ್ನುತ್ತಾರೆ. ಈ ಬಗ್ಗೆ ನಿಖರ ಸ್ಪಷ್ಟತೆ ಕೊಡಬೇಕು ಎಂದು ಕೇಳಿಬಂದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಲಿಂಗಾಯತ ಎಂಬುದು ಧರ್ಮನೋ ಜಾತಿನೋ ಎಂದು ಪ್ರಶ್ನಿಸಿದಾಗ ಲಿಂಗಾಯತ ಧರ್ಮ ಎಂದು ಸಾರ್ವಜನಿಕರು ಒಕ್ಕೊರಲಿನಿಂದ ಹೇಳಿದರು. ಇಷ್ಟು ಸ್ಪಷ್ಟತೆ ಇದ್ದರೆ ಸಾಕು ಎಂದು ಹೇಳಿದ ಶ್ರೀಗಳು, ಧರ್ಮ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಬೇಕು.
ಲಿಂಗಾಯತ ಧರ್ಮದಲ್ಲಿ 99 ಉಪ ಪಂಗಡಗಳು ಇವೆ. ಆಯಾ ಪಂಗಡಗಳಿಗೆ ಅನುಗುಣವಾಗಿ ಇತರೆ ಕಾಲಂನಲ್ಲಿ ಉಪ ಪಂಗಡ ಬರೆಯಿಸಬೇಕು. ಈ ಉಪ ಪಂಗಡಗಳಲ್ಲಿ ವೀರಶೈವ ಎಂಬುದೂ ಇದೆ. ಈ ಹಿನ್ನೆಲೆ ಲಿಂಗಾಯತ ವೀರಶೈವ ಎಂದು ಬರೆಸಬೇಕೆ ಹೊರತು ವೀರಶೈವ ಲಿಂಗಾಯತ ಎಂದು ಬರೆಸಬಾರದು. ಇದು ತಪ್ಪು. ಇನ್ನೂ ಹೆಚ್ಚಿನ ಮಾಹಿತಿ ಸರ್ಕಾರದ ದಾಖಲಾತಿಗಳಲ್ಲಿದ್ದು, ಆ ದಾಖಲಾತಿ ಮೇರೆಗೆ ನಮೂದಿಸಬೇಕೆಂದು ತಿಳಿಸಿದರು. ದೀಕ್ಷೆ ಪಡೆಯುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ದೀಕ್ಷೆ ತೆಗೆದುಕೊಳ್ಳುವವರು ಬಸವಗುರು ತತ್ವ ಅಳವಡಿಸಿಕೊಳ್ಳಬೇಕು. ಗುರುವಿನ ಮೇಲೆ ನಂಬಿಕೆ, ಶ್ರದ್ಧೆ, ಇಷ್ಟಲಿಂಗದ ಮೇಲೆ ನಂಬಿಕೆಯುಳ್ಳವರಾಗಿರಬೇಕು. ದುಷ್ಟ ದುರ್ಗುಣ ತ್ಯಜಿಸಿ ಸದ್ಗುಣ ಚಾರಿತ್ರ್ಯ ಬೆಳೆಸಿಕೊಂಡಿರಬೇಕು. ಜಾತಿ, ಮತ, ಪಂಥ, ಭೇದ, ಭಾವ ಇಲ್ಲದಿರುವ ಯಾರು ಬೇಕಾದರೂ ದೀಕ್ಷೆ ತೆಗೆದುಕೊಳ್ಳಬಹುದು. ಅದೇ ರೀತಿ ದೀಕ್ಷೆ ಕೊಡುವವರು ಅರಿವು, ಆಚಾರ, ಅನುಭಾವಿ, ಜ್ಞಾನಿಯಾದ ಗುರುಗಳಾಗಿರಬೇಕು ಎಂದರು.ಬಸವಲಿಂಗ ಪಟ್ಟದೇವರು ಬಾಲ್ಕಿ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ ಶಿರಸಿ, ಬಸವಪ್ರಭು ಸಾಮೀಜಿ ಬಸವಕಲ್ಯಾಣ, ಅಲ್ಲಮಪ್ರಭು ಸ್ವಾಮೀಜಿ, ಶಿವಾನಂದ ಸ್ವಾಮೀಜಿ ಮೊದಲಾದ ಮಠಾಧೀಶರು ಇದ್ದರು.