ಯಾದಗಿರಿ: ಅಳಿದುಳಿದ ಬೆಳೆ ರಕ್ಷಣೆಗೆ ಟ್ಯಾಂಕರ್ ಮೊರೆ ಹೋದ ರೈತರು

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ಹುಣಸಗಿ ತಾಲೂಕಿನಲ್ಲಿ 1085.71 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬಿತ್ತನೆಯಾಗಿದ್ದು, ಭೂಮಿಯ ತೇವಾಂಶ ಕಾಪಾಡಲು ರೈತರು ಹರಸಾಹಸ ಪಡುತ್ತಿದ್ದಾರೆ.

ಬಸವರಾಜ ಎಂ. ಕಟ್ಟಿಮನಿ

ಕನ್ನಡಪ್ರಭ ವಾರ್ತೆ ಹುಣಸಗಿ

ತಾಲೂಕಿನಾದ್ಯಂತ ಮಳೆ ಹಾಗೂ ಕಾಲುವೆಗೆ ನೀರು ಸ್ಥಗಿತದ ಪರಿಣಾಮ ಬೆಳೆಗಳೆಲ್ಲ ಒಣಗುತ್ತಿದ್ದು, ಮೆಣಸಿನಕಾಯಿ ಬೆಳೆ ಬೆಳೆದಿರುವ ಪಟ್ಟಣ ಸೇರಿ ಇನ್ನಿತರ ಗ್ರಾಮದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪಟ್ಟಣದ ಯುವ ರೈತ ಪ್ರಭು ಹುಲಕಲ್ ತಮ್ಮ ಸ್ವಂತ 2 ಎಕರೆಯಲ್ಲಿ ಮೆಣಸಿನಕಾಯಿ ಬೆಳೆ ಬೆಳೆದು ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿದ್ದವರಿಗೆ ಕಾಲುವೆಗೆ ನೀರು ಹರಿಸದ ಪರಿಣಾಮ ಅವರನ್ನು ಸಂಕಷ್ಟಕ್ಕೆ ಗುರಿ ಮಾಡಿದೆ. ಇದೇ ರೀತಿ ತಾಲೂಕಿನ ಇನ್ನಿತರ ಗ್ರಾಮಗಳ ಕೆಲ ರೈತರು ಜಮೀನುಗಳಿಗೆ ಟ್ಯಾಂಕರ್ ನೀರು ಹಾಯಿಸುವ ಮೂಲಕ ಬೆಳೆ ಉಳಿಸಿಕೊಳ್ಳುವ ಹರಸಾಹಸ ಪಡುತ್ತಿದ್ದಾರೆ.

ಮೆಣಸಿನಕಾಯಿ ಬೆಳೆಗೆ ಕಳೆದ ಹಿಂದಿನ ವರ್ಷ ಉತ್ತಮ ಬೆಲೆಯಿಂದಾಗಿ ತಾಲೂಕಿನಲ್ಲಿ ಈ ಬಾರಿ 1085.71 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ನಾಟಿ ಮಾಡಿದ್ದಾರೆ. ಈ ಭಾರಿ ಮಳೆ ಕೊರತೆ ಹಾಗೂ ಕಾಲುವೆಗೆ ನೀರು ಸ್ಥಗಿತದಿಂದ ಬೆಳೆಗಳು ಬಾಡತೊಡಗಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.

ಬ್ಯಾಡಗಿ ಮತ್ತು ಗುಂಟೂರು ತಳಿಯ ಮೆಣಸಿನಕಾಯಿ ಎಕರೆಗೆ ಕನಿಷ್ಠ ಆರು ಕ್ವಿಂಟಲ್ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ನೀರಿನ ಕೊರತೆಯಿಂದಾಗಿ ಬೆಳೆಗಾಗಿ ಮಾಡಿದ ಖರ್ಚನ್ನು ತೆಗೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬೆಳೆ ಉಳಿಸಿಕೊಳ್ಳಲು ರೈತರು ಒಂದು ಎಕರೆಗೆ ಕನಿಷ್ಠ 40ರಿಂದ 60ಟ್ಯಾಂಕರ್ ನೀರು ಬೇಕಾಗುತ್ತದೆ, ಟ್ರ್ಯಾಕ್ಟರ್ ಬಾಡಿಗೆ 2500 ರು. ಟ್ಯಾಂಕರ್ 500 ರು. ಹಾಗೂ ಡೀಸೆಲ್ ಮೋಟಾರ್ ಒಂದು ದಿನಕ್ಕೆ 3.500 ರು. ಒಟ್ಟಾರೆ ಒಂದು ಟ್ಯಾಂಕರ್ ನೀರಿಗೆ 6800 ರು. ಹಣ ಕೊಟ್ಟು ರೈತರು ಖರೀದಿಸಬೇಕಾದ ಪರಿಸ್ಥಿತಿ ಉಂಟಾಗಿದೆ.

ಕೃಷ್ಣಾ ಅಚ್ಚುಕಟ್ಟು ಭಾಗದ ರೈತರು ಮೆಣಸಿನಕಾಯಿ ಬೆಳೆ ಬೆಳೆದಿದ್ದಾರೆ. ಈಗಾಗಲೇ ಎಕರೆಗೆ ಅಂದಾಜು ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದಾರೆ. ಫೆ.10 ರವರೆಗೆ ನೀರು ಹರಿಸಿದರೆ ರೈತ ಬೆಳೆದ ಮೆಣಸಿನ ಕಾಯಿ ಬೆಳೆ ರೈತನ ಕೈ ಸೇರುತ್ತದೆ. ಇಲ್ಲದಿದ್ದರೆ ಬೆಳೆ ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗುತ್ತದೆ. ಇದರಿಂದ ರೈತರು ಆತ್ಮಹತ್ಯೆ ಶರಣಾಗುತ್ತಾರೆ. ಹೀಗಾಗಿ ರೈತ ಬೆಳೆದ ಬೆಳೆ ಉಳಿಯಬೇಕೆಂದರೆ ಸರ್ಕಾರ ಫೆ.10 ರವರೆಗೆ ಕಾಲುವೆಗೆ ನೀರು ಹರಿಸಬೇಕಾಗಿದೆ ಎಂದು ಬಿಜೆಪಿ ಯುವ ಮುಖಂಡ ರವಿ ಪುರಾಣಿಕಮಠ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕಾಲುವೆಗೆ ನೀರು ಹರಿಸಿ ರೈತರ ಹಿತ ಕಾಪಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಬೆಳೆ ಹಾನಿಯಾದ ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ.

ಮಹಾದೇವಿ ಬೇವಿನಾಳಮಠ, ರೈತ ಸಂಘದ ರಾಜ್ಯ ಉಪಾಧ್ಯಕ್ಷೆ, ಹುಣಸಗಿ.

Share this article