ಕನ್ನಡಪ್ರಭ ವಾರ್ತೆ ಯಾದಗಿರಿ
ಯಾದಗಿರಿ ನಗರದಿಂದ 27ಕಿ.ಮೀ. ದೂರದಲ್ಲಿರುವ ಮೈಲಾಪೂರದಲ್ಲಿ ಪ್ರತಿವರ್ಷ ಜ.14ರಂದು ನಡೆಯುವ ಈ ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಸೇರಿ ತೆಲಂಗಾಣ, ಆಂಧ್ರ, ಹಾಗೂ ಮಹಾರಾಷ್ಟ್ರದಿಂದ ಸುಮಾರು ಐದು ಲಕ್ಷಗಳಿಗೂ ಹೆಚ್ಚು ಭಕ್ತರು ಆಗಮಿಸಿ, ಶ್ರೀಮೈಲಾರಲಿಂಗನ ದರುಶನ ಪಡೆಯುತ್ತಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹು ಪ್ರಸಿದ್ಧಿ ಪಡೆದಿರುವ ಮೈಲಾರಲಿಂಗೇಶ್ವರ ಜಾತ್ರೆ ಅಂಗವಾಗಿ, ಭಕ್ತರ ಅನುಕೂಲಕ್ಕೆಂದು ಜಿಲ್ಲಾಡಳಿತ ಕಳೆದೊಂದು ತಿಂಗಳಿನಿಂದ ಅಲ್ಲಿ ಸಿದ್ಧತೆಗಳ ನಡೆಸುತ್ತಿದೆ. ಕುಡಿಯುವ ನೀರು, ಭಕ್ತರಿಗೆ ಮೂಲಭೂತ ಸೌಕರ್ಯಗಳು, ತಾತ್ಕಾಲಿಕ ವೈದ್ಯಕೀಯ ವ್ಯವಸ್ಥೆ, ಜನ ಜಾಗೃತಿ ಕೇಂದ್ರ, ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.ಹರಕೆ ಕುರಿಮರಿಗಳ ಎಸೆತಕ್ಕೆ ನಿಷೇಧ:
ಜಾತ್ರೆ ದಿನದಂದು, ಅಲ್ಲಿನ ಹೊನ್ನಕೆರೆಯಲ್ಲಿ ಮೈಲಾರಲಿಂಗನ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಗರ್ಭಗುಡಿಗೆ ಕರೆದೊಯ್ಯುವ ವೇಳೆ ಸಾವಿರಾರು ಹರಕೆ ಕುರಿಗಳನ್ನ ಎಸೆಯುವ ಅಮಾನವೀಯ ಕೃತ್ಯ ನಡೆಯುತ್ತಿತ್ತು. ಭಂಡಾರದ ಬಣ್ಣದ ನಡುವೆ ಭಯ-ಭಕ್ತಿಯ ಪರಾಕಾಷ್ಠೆ ಮುಗಿಲು ಮುಟ್ಟಿ, ಲಕ್ಷಾಂತರ ಭಕ್ತರ ಕಾಲುಗಳಲ್ಲಿ ಸಿಲುಕಿ ಸಾವಿರಾರು ಕುರಿಮರಿಗಳು ಸಾವನ್ನಪ್ಪುತ್ತಿದ್ದವು.
ಕುರಿಮರಿಗಳ ರಕ್ಷಿಸಲು ಮೈಲಾಪೂರದ ಸುತ್ತಮುತ್ತ ಚೆಕ್ ಪೋಸ್ಟ್ ನಿರ್ಮಿಸಿ, ಭಕ್ತರಿಂದ ಅಲ್ಲೇ ಪಡೆಯಲಾಗುತ್ತದೆ. ಜಪ್ತಿ ಮಾಡಿದ ಕುರಿಮರಿಗಳನ್ನು ಪಶು ಸಂಗೋಪನಾ ಇಲಾಖೆ ಸುಪರ್ದಿಗೆ ನೀಡಿ, ಮರುದಿನ ಒಟ್ಟು ಕುರಿಮರಿಗಳ ಹರಾಜು ಹಾಕಿ, ಬರುವ ಲಕ್ಷಾಂತರ ರುಪಾಯಿ ಆದಾಯವನ್ನು ಮಲ್ಲಯ್ಯನ ದೇವಸ್ಥಾನದ ಅಭಿವೃದ್ಧಿಗೆ ನೀಡಲಾಗುತ್ತದೆ.
ಯಾದಗಿರಿ: ವಿಚಿತ್ರ ಹಾಗೂ ವಿಶಿಷ್ಟ ಸಂಪ್ರದಾಯಗಳಿಗೆ ಹೆಸರಾದ ಮೈಲಾಪೂರ ಗ್ರಾಮದ ಬಹುತೇಕ ಆಚರಣೆಗಳು, ವೈಜ್ಞಾನಿಕವಾಗಿ ಮುಂದುವರೆಯುತ್ತಿರುವ ಆಧುನಿಕ ಯುಗದಲ್ಲಿಯೂ ಅಚ್ಚರಿ ಹುಟ್ಟಿಸುತ್ತವೆ.
ಇನ್ನು, ಮೈಲಾರಲಿಂಗೇಶ್ವರ ದೇವರ ವಾಹನ ಕುದುರೆಯಾಗಿದ್ದರಿಂದ ಈ ಗ್ರಾಮದಲ್ಲಿ ಯಾರೂ ಕುದುರೆ ಮೇಲೆ ಕೂಡುವುದಿಲ್ಲ. ಪೌರಾಣಿಕ ಕತೆಯೊಂದರ ಐತಿಹ್ಯದಂತೆ, ರಾಕ್ಷಸ ಸಂಹಾರ ವೇಳೆ ಕೋಳಿ ಕೂಗಿದ್ದರಿಂದ ದೇವರ ಕೈಯ್ಯಿಂದ ರಾಕ್ಷಸ ತಪ್ಪಿಸಿಕೊಂಡ ಎಂಬ ಕಾರಣಕ್ಕೆ, ಈ ಗ್ರಾಮದಲ್ಲಿ ಯಾರೂ ಕೋಳಿಗಳನ್ನು ಸಾಕುವುದಿಲ್ಲ. ಮುಂಜಾನೆ ಕೋಳಿ ಕೂಗು ಇಲ್ಲಿ ಕೇಳಿಸೋದೇ ಇಲ್ಲ. ಕುಂಬಾರರು ಗಡಿಗೆ ಸಪ್ಪಳ ಕೇಳ ಮಾಡುವಂತಿಲ್ಲ.
ಗುಡ್ಡದ ತುತ್ತತುದಿಯಲ್ಲಿರುವ ಮೈಲಾರಲಿಂಗನ ಸನ್ನಿಧಿ ಬಳಿ ಎತ್ತರದಾದ ಒಂದು ಬಂಡೆಗಲ್ಲಿದೆ. ಬಂಡೆಗಲ್ಲಿನ ತುದಿಯಲ್ಲಿ ದೀಪ ಹಚ್ಚಲಿಕ್ಕೆಂದೇ ಗುಡ್ಡೇರರು ಅನ್ನೋ ಪ್ರತ್ಯೇಕ ಜನಾಂಗದವರ ಸಾಹಸ ಶತಮಾನದಿಂದಲೂ ನಡೆದಿದೆ. ಹಗ್ಗವೊಂದನ್ನು ಹಿಡಿದುಕೊಂಡು, ಸರಸರನೇ ಬಂಡೆಗಲ್ಲನ್ನೇರಿ, ಬೃಹತ್ ಪಾತ್ರೆಗೆ ಡಬ್ಬಿಗಟ್ಟಲೇ ಎಣ್ಣೆ ಸುರಿದು ದೀಪ ಹಚ್ಚೋದು ಇವರ ನಿತ್ಯಕಾಯ. ಮೈನವಿರೇಳಿಸುವ ಇವರ ಸಾಹಸ ಜಾತ್ರೆಯ ಆಕರ್ಷಣೆ.