ಕನ್ನಡಪ್ರಭ ವಾರ್ತೆ ಯಾದಗಿರಿ
ಯಾದಗಿರಿ ಜಿಲ್ಲಾ ಕ್ರೀಡಾಂಗಣ ಹಾಗೂ ವಸತಿ ನಿಲಯ ಅವ್ಯವಸ್ಥೆ ಕುರಿತು "ಕನ್ನಡಪ್ರಭ "ದಲ್ಲಿ 27 ನವೆಂಬರ್ 2023 ರಂದು ಪ್ರಕಟಗೊಂಡಿದ್ದ ವರದಿಗೆ ಸಂಬಂಧಿಸಿದಂತೆ, ತನಿಖೆ ನಡೆಸಿ ಐದು ದಿನಗಳೊಳಗೆ ವರದಿ ನೀಡುವಂತೆ ರಾಜ್ಯ ಯುವಜನ ಹಾಗೂ ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ ಅವರು ಸೂಚಿಸಿದ್ದಾಗ್ಯೂ ಸಹ, ಈವರೆಗೂ ತನಿಖೆ ಕೈಗೊಂಡಿಲ್ಲದಿರುವುದು ಕಂಡುಬಂದಿರುವುದರಿಂದ, ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಸಚಿವರು, ತನಿಖಾಧಿಕಾರಿ ನೇಮಿಸಿದ್ದಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಹಾಗೂ ಈ ಕೂಡಲೇ ಪ್ರಕರಣದ ಬಗ್ಗೆ ಅತೀ ತುರ್ತಾಗಿ ತನಿಖೆ ನಡೆಸುವಂತೆ ಇಲಾಖೆ ಆಯುಕ್ತರಿಗೆ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಎಲ್.ಪಿ.ಗಿರೀಶ್ ಜ24ರಂದು ಪತ್ರ ಬರೆದಿದ್ದಾರೆ."ಯಾದಗಿರಿ ಕ್ರೀಡಾ ವಸತಿ ನಿಲಯದಲ್ಲಿ ಅಪರಾ ತಪರಾ " ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ಬಡ ಕ್ರೀಡಾಪಟುಗಳ ಪ್ರೋತ್ಸಾಹಿಸಿ, ಅವರನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕಾದ ವಸತಿ ನಿಲಯದಲ್ಲಿ ಅವ್ಯವಸ್ಥೆ ಬಗ್ಗೆ ವರದಿ ಗಮನ ಸೆಳೆದಿತ್ತು. ಊಟ, ವಸತಿ, ಕ್ರೀಡಾ ಸಾಮಗ್ರಿಗಳು ಸೇರಿ ಇನ್ನಿತರ ಸರ್ಕಾರದ ವ್ಯವಸ್ಥೆಗಳು ಮಕ್ಕಳಿಗೆ ಸಿಗುವಲ್ಲಿ ವಂಚನೆಯಾಗುತ್ತಿದೆ ಎಂದು ದೂರಗಳು ಕೇಳಿ ಬಂದಿದ್ದವು. ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಸಹ ಅಲ್ಲಿಗೆ ಭೇಟಿ ನೀಡಿದ್ದಾಗ, ಅವ್ಯವಸ್ಥೆ ಕಂಡು ಬೇಸರ ವ್ಯಕ್ತಪಡಿಸಿದ್ದರಲ್ಲದೆ, ವರದಿ ನೀಡುವಂತೆ ಸೂಚಿಸಿದ್ದರು.
ಈ ಕುರಿತು, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಸಚಿವರ ಗಮನಕ್ಕೆ ತಂದು, ಜಿಲ್ಲೆಯ ಕ್ರೀಡಾಂಗಣ ನಿರ್ಮಾಣ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದರು. ಆಗ, ತನಿಖೆ ನಡೆಸುವಂತೆ ಸಚಿವ ನಾಗೇಂದ್ರ ಸೂಚಿಸಿದ್ದರು. ಆದರೆ, ಇನ್ನೂ ತನಿಖೆ ನಡೆಯದ ಬಗ್ಗೆ ಗಮನಕ್ಕೆ ಬಂದಿದ್ದರಿಂದ, ಜ.24ರಂದು ಆಯುಕ್ತರಿಗೆ ಪತ್ರ ಬರೆದು ಸೂಚಿಸಿದ್ದಾರೆ.ಕೆಡಿಪಿ ಸಭೆಯಲ್ಲೂ ಚರ್ಚೆ :
ಇಲ್ಲಿನ ಜಿಪಂ ಸಭಾಂಗಣದಲ್ಲಿ ನಡೆದಿದ್ದ ಕೆಡಿಪಿ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು. ಸಚಿವ ದರ್ಶನಾಪುರ ಅವರು ಕನ್ನಡಪ್ರಭ ಪತ್ರಿಕೆ ವರದಿ ಉಲ್ಲೇಖಿಸಿ, ಕ್ರೀಡಾಂಗಣ ಅಧಿಕಾರಿಯನ್ನು ವಿಚಾರಿಸಿದ್ದರು. ಸಮಜಾಯಿಸಿ ನೀಡಲು ಬಂದ ಅವರ ವಿರುದ್ಧ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದರು.