ಅರಮನೆಯಿಂದ ಜನರ ಬಳಿ ನಾನೇ ಬರುವೆ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

KannadaprabhaNewsNetwork | Updated : Mar 19 2024, 01:35 PM IST

ಸಾರಾಂಶ

ಸಂವಿಧಾನ ಬಂದ ಮೇಲೆ ರಾಜ- ಮಹರಾಜ ಅಥವಾ ಇನ್ನಾವುದೊ ಬಿರುದುಗಳು ಇಲ್ಲ. ನಾವು ಸಹ ಎಲ್ಲಾ ಪ್ರಜೆಗಳಂತೆ ಮತ್ತು ಸಾಮಾನ್ಯ ವ್ಯಕ್ತಿಗಳಂತೆ. ನನ್ನನ್ನು ಭೇಟಿ ಮಾಡಲು ಸಾರ್ವಜನಿಕರು ಅರಮನೆಗೆ ಬರುವ ಅವಶ್ಯಕತೆ ಇಲ್ಲ, ನಾನೇ ಅವರ ಬಳಿಗೆ ಹೋಗುತ್ತೇನೆ. ಅವರ ಜೊತೆ ಸಂಪರ್ಕದಲ್ಲಿರುತ್ತೇನೆ

ಕನ್ನಡಪ್ರಭ ವಾರ್ತೆ ಮೈಸೂರು

ನನಗೆ ಎಲ್ಲಾ ಪಕ್ಷದವರೊಂದಿಗೆ ಸಂಬಂಧ ಇದೆ. ನನ್ನ ಪರಿಕಲ್ಪನೆಗೆ ಬಿಜೆಪಿಯೊಂದಿಗೆ ಹೊಂದಾಣಿಕೆ ಇದೆ. ಹೀಗಾಗಿ, ನಾನು ಬಿಜೆಪಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಬಿಜೆಪಿ ಸೋಮವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನಮ್ಮ ಅರಮನೆಗೆ ಎಲ್ಲಾ ಪಕ್ಷದವರು ಬರುತ್ತಾರೆ. ಎಲ್ಲರ ಜೊತೆಯೂ ನಮಗೆ ಸಂಪರ್ಕವಿದೆ. ಆದರೆ, ನನ್ನ ವೈಯಕ್ತಿಕ ದೃಷ್ಟಿಯಿಂದ ನಾನು ಬಿಜೆಪಿ ಪಕ್ಷಕ್ಕೆ ಹೋಗಿದ್ದೇನೆ. ಹೀಗಾಗಿ, ಅವರು ನನಗೆ ಟಿಕೆಟ್ ಕೊಟ್ಟಿದ್ದಾರೆ ಎಂದರು.

ಸಂವಿಧಾನ ಬಂದ ಮೇಲೆ ರಾಜ- ಮಹರಾಜ ಅಥವಾ ಇನ್ನಾವುದೊ ಬಿರುದುಗಳು ಇಲ್ಲ. ನಾವು ಸಹ ಎಲ್ಲಾ ಪ್ರಜೆಗಳಂತೆ ಮತ್ತು ಸಾಮಾನ್ಯ ವ್ಯಕ್ತಿಗಳಂತೆ. 

ನನ್ನನ್ನು ಭೇಟಿ ಮಾಡಲು ಸಾರ್ವಜನಿಕರು ಅರಮನೆಗೆ ಬರುವ ಅವಶ್ಯಕತೆ ಇಲ್ಲ, ನಾನೇ ಅವರ ಬಳಿಗೆ ಹೋಗುತ್ತೇನೆ. ಅವರ ಜೊತೆ ಸಂಪರ್ಕದಲ್ಲಿರುತ್ತೇನೆ ಎಂದು ಅವರು ಹೇಳಿದರು.

ನಾನು ಕಳೆದ 9 ವರ್ಷಗಳಿಂದಲೂ ಸಾರ್ವಜನಿಕರ ಸಂಪರ್ಕದಲ್ಲಿದ್ದೇನೆ. ಅವರ ಕಷ್ಟ ಸುಖದ ಅರಿವು ಇದೆ. ಈಗ ಇನ್ನಷ್ಟು ತಿಳಿದುಕೊಳ್ಳುವ ಸಮಯ ಬಂದಿದೆ. 

ಎಲ್ಲವನ್ನು ಅರ್ಥಮಾಡಿಕೊಂಡು ಎಲ್ಲರ ಕಷ್ಟ ಸುಖಗಳಿಗೆ ಭಾಗಿಯಾಗುತ್ತೇನೆ. ನನಗೆ ಎಲ್ಲಾ ಜಾತಿ ಧರ್ಮದವರು ಮುಖ್ಯ, ಎಲ್ಲರ ಅಭಿವೃದ್ಧಿಗಾಗಿ ನಾನು ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ. ಎಲ್ಲಾ ಧರ್ಮದವರ ಬಳಿಗೂ ತೆರಳಿ ಮತಯಾಚಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ನಮ್ಮ ಸಂಪ್ರದಾಯದಂತೆ ಅರಮನೆ ವಿಚಾರ ಬಂದಾಗ ನಾನು ಅರಮನೆಯ ಉತ್ತರಾಧಿಕಾರಿಯಾಗಿಯೂ ಸ್ವಲ್ಪ ದಿನ ಇರಬೇಕಾಗುತ್ತದೆ. ಉಳಿದ ಸಮಯ ಸಾಮಾನ್ಯನಂತೆ ಸಾರ್ವಜನಿಕ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. 

ಅರಮನೆ ಮತ್ತು ಸರ್ಕಾರದ ನಡುವೆ ನಡೆಯುತ್ತಿರುವ ವ್ಯಾಜ್ಯಗಳನ್ನು ಕಾನೂಕಾತ್ಮಕವಾಗಿ ಮುಂದುವರೆಸುತ್ತೇವೆ. ಅದಕ್ಕೂ ರಾಜಕಾರಣಕ್ಕೂ ಸಂಬಂಧ ಇಲ್ಲ, ನಮ್ಮ ಆಸ್ತಿ ರಕ್ಷಿಸಿಕೊಳ್ಳಬೇಕು ಎಂದು ನಾನು ರಾಜಕೀಯಕ್ಕೆ ಬಂದಿಲ್ಲ. 

ವಿಕಸಿತ ಭಾರತಕ್ಕಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದು ಅವರು ಹೇಳಿದರು.

ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮಾಜಿ ಸಚಿವ ಎಸ್.ಎ. ರಾಮದಾಸ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್, ರಾಬಿನ್ ದೇವಯ್ಯ, ರವಿ ಕಾಳಪ್ಪ ಇದ್ದರು.

ನಾನು ರಾಜ ಅಂತ ಹೇಳಿಲ್ಲ: ನಾನು ಯಾವತ್ತೂ ರಾಜ ಅಂತ ಹೇಳಿಲ್ಲ. ಅರಮನೆಗೆ ಒಂದು ಸಂಪ್ರದಾಯ, ಪರಂಪರೆ ಇದೆ. ಆ ದಿನಗಳಲ್ಲಿ (ದಸರಾ) ಸಂಪ್ರದಾಯ ಪ್ರಕಾರ ನಡೆಯುತ್ತದೆ. 

ಅದನ್ನು ಹೊರತುಪಡಿಸಿ ನಾನು ಸಾಮಾನ್ಯನಾಗಿ ಇರುತ್ತೇನೆ ಎಂದು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಜನರಿಗೆ ಅರಮನೆ ಬಗ್ಗೆ ಭಾವನಾತ್ಮಕ ಸಂಬಂಧ ಇದೆ. ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು. ಸಾಮಾನ್ಯ ಎಂಪಿ ರೀತಿ ಕೆಲಸ ಮಾಡುತ್ತೇನೆ. ಆಧುನಿಕ ತಂತ್ರಜ್ಞಾನದ ಮೂಲಕ ಸಂಪರ್ಕ ಇಟ್ಟುಕೊಳ್ಳಬಹುದು. 

ತುಂಬಾ ದೊಡ್ಡ ನಿರೀಕ್ಷೆ ಇದೆ ಅಂತ ಅನ್ನಿಸುತ್ತಿಲ್ಲ. ನನ್ನನ್ನು ಸಂಸದ, ಜನಪ್ರತಿನಿಧಿ, ಸೇವಕ ಏನು ಬೇಕಾದರೂ ಕರೆಯಿರಿ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ನನ್ನ ತಾಯಿ (ಪ್ರಮೋದಾದೇವಿ ಒಡೆಯರ್) ನನ್ನ ಪರವಾಗಿ ಪ್ರಚಾರಕ್ಕೆ ಬರುವುದು ಈಗ ಅಗತ್ಯವಿಲ್ಲ. ತಾಯಿ ಆಶೀರ್ವಾದದಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ. ಅವರು ನನ್ನ ಪರವಾಗಿ ಹೇಳಿಕೆ ಕೊಡಬೇಕೆಂಬುದು ಏನು ಇಲ್ಲ. ಅವರ ಸಹಕಾರ ನನ್ನ ಮೇಲೆ ಸದಾ ಇರುತ್ತದೆ. - ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ಅಭ್ಯರ್ಥಿ

Share this article