ವಸಂತಕುಮಾರ್ ಕತಗಾಲ
ಕನ್ನಡಪ್ರಭ ವಾರ್ತೆ ಕಾರವಾರರಾಜ್ಯ ಸರ್ಕಾರ ಯಕ್ಷಗಾನ ಅಕಾಡೆಮಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಿದ್ದು, ಉತ್ತರ ಕನ್ನಡವನ್ನು ಸಂಪೂರ್ಣ ಕಡೆಗಣಿಸಿದೆ. ಈ ಜಿಲ್ಲೆ ಯಕ್ಷಗಾನದ ಆಡಂಬೊಲವಾಗಿದ್ದರೂ, ಜಿಲ್ಲೆಯಿಂದ ಆಯ್ಕೆಯಾದ ನಾಲ್ವರು ಕಾಂಗ್ರೆಸ್ ಶಾಸಕರಿಗೆ ಅಕಾಡೆಮಿ ನೇಮಕದಲ್ಲಿ ಜಿಲ್ಲೆಗೆ ನ್ಯಾಯ ಕೊಡಿಸಲು ಆಗಿಲ್ಲ.
ಅಕಾಡೆಮಿಗೆ ಅಧ್ಯಕ್ಷರಾಗಿ ನೇಮಕಗೊಂಡ ತಲ್ಲೂರ ಶಿವರಾಮ ಶೆಟ್ಟಿ, ಸದಸ್ಯರಾಗಿ ನೇಮಕಗೊಂಡ ಕಾಸರಗೋಡಿನ ಸತೀಶ ಸಂಕಬೈಲ್ ಅವರನ್ನು ಹೊರತುಪಡಿಸಿದರೆ, ಉಳಿದ 9 ಸದಸ್ಯರು ದಕ್ಷಿಣ ಕನ್ನಡಕ್ಕೆ ಸೇರಿದವರಾಗಿದ್ದಾರೆ. ಉತ್ತರ ಕನ್ನಡದ ಯಾವೊಬ್ಬ ಕಲಾವಿದ, ಕಲಾ ವಿಮರ್ಶಕರೂ ಇದರಲ್ಲಿ ಸ್ಥಾನ ಪಡೆದಿಲ್ಲ.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕಾರವಾರ ಶಾಸಕ ಸತೀಶ ಸೈಲ್, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಹಳಿಯಾಳದ ಆರ್.ವಿ. ದೇಶಪಾಂಡೆ ಅವರಂಥ ಹಿರಿಯ ಅನುಭವಿ ಶಾಸಕರಿದ್ದೂ ಉತ್ತರ ಕನ್ನಡಕ್ಕೆ ಅಕಾಡೆಮಿಯಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದರೆ ಇವರಿಂದ ಜಿಲ್ಲೆಗೆ ನ್ಯಾಯ ದೊರಕಿಸಿಕೊಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಉಂಟಾಗಿದೆ.
ಯಕ್ಷಗಾನಕ್ಕೆ ಮೊದಲ ಪದ್ಮಶ್ರೀ ದೊರಕಿಸಿಕೊಟ್ಟವರು ನಮ್ಮ ಜಿಲ್ಲೆಯ ಚಿಟ್ಟಾಣಿ ರಾಮಚಂದ್ರ ಹೆಗಡೆ. ಯಕ್ಷಗಾನ ಕಲೆಯನ್ನು ಸಾಗರದಾಚೆ ಮೊದಲ ಬಾರಿಗೆ ಕೊಂಡೊಯ್ದವರು ನಮ್ಮ ಜಿಲ್ಲೆಯ ಕಲಾವಿದರು. ಯಕ್ಷಗಾನ ಸಾಹಿತಿಗಳು, ಕಲಾವಿದರು ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಇವರಲ್ಲಿ ಒಬ್ಬರೂ ಸರ್ಕಾರಕ್ಕೆ ಕಾಣಲಿಲ್ಲವೇ? ಅಥವಾ ನಮ್ಮ ಆಡಳಿತ ಪಕ್ಷದ ಜನಪ್ರತಿನಿಧಿಗಳಿಗೆ ಕಾಣಿಸಲಿಲ್ಲವೇ? ಎನ್ನುವುದು ಮಹತ್ವದ ಸಂಗತಿಯಾಗಿದೆ.ಯಾವ ಆಧಾರ?
ಯಕ್ಷಗಾನದ ಪ್ರಕಾರಗಳು ಹಾಗೂ ಹಲವು ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಶಿವಮೊಗ್ಗ ಜಿಲ್ಲೆಗೂ ಯಾವುದೇ ಪ್ರಾತಿನಿಧ್ಯ ನೀಡಲಾಗಿಲ್ಲ. ಯಕ್ಷಗಾನದ ಹಿಂದೆ ಮುಂದೆ ಗೊತ್ತಿಲ್ಲದೆ ಈ ನೇಮಕವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಯಾವ ಆಧಾರದಲ್ಲಿ ಅಕಾಡೆಮಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಲಾಗಿದೆ ಎಂಬುದು ಜಿಲ್ಲೆಯ ಯಕ್ಷಗಾನ ವಲಯದಲ್ಲಿ ಅಸಮಾಧಾನ ಮೂಡಿಸಿದೆ.ಪುನಾರಚನೆ
ಇದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಲ್ಲ. ಇದು ದಕ್ಷಿಣ ಕನ್ನಡ ಯಕ್ಷಗಾನ ಅಕಾಡೆಮಿ. ಉತ್ತರ ಕನ್ನಡ, ಮೈಸೂರು, ತುಮಕೂರು, ಚಿತ್ರದುರ್ಗ, ಕೋಲಾರ, ಬೆಂಗಳೂರು, ಗ್ರಾಮಾಂತರ ಜಿಲ್ಲೆಗಳನ್ನು ಕಡೆಗಣಿಸಿರುವುದು ಖಂಡನೀಯ. ಇದು ಪುನಾರಚನೆ ಆಗಬೇಕು. ಮೂಡಲಪಾಯ, ಘಟ್ಟದ ಕೋರೆ, ಉತ್ತರ ಕನ್ನಡ ಯಕ್ಷಗಾನ ಪರಂಪರೆ ಅವಗಣನೆ ಮಾಡಿರುವುದು ಸಾಂಸ್ಕೃತಿಕ ಕ್ಷೇತ್ರದ ದುರಂತ ಎಂದು ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷರಾದ ಡಾ. ಜಿ.ಎಲ್. ಹೆಗಡೆ ಹೇಳದ್ದಾರೆ.