ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ನ ಯಲ್ಲನಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷೆಯಾಗಿ ಶೀಲಾ ರಾಜಶೇಖರ ಭಾವಿಕಟ್ಟಿ ಅವಿರೋಧವಾಗಿ ಆಯ್ಕೆಗೊಂಡರು. ಈ ಮೂಲಕ ಮಹಾಲಿಂಗಪುರ ಪುರಸಭೆ ಕೈ ಪಾಲಾಯಿತು.ಪುರಸಭೆಯಲ್ಲಿ ಒಟ್ಟು 23 ಸದಸ್ಯರ ಸಂಖ್ಯಾ ಬಲವಿದ್ದು, ಬಹುಮತಕ್ಕೆ 13 ಸ್ಥಾನಗಳ ಅವಶ್ಯಕತೆ ಇತ್ತು. ಕಾಂಗ್ರೆಸ್ 9, ಬಿಜೆಪಿ ಬಂಡಾಯ 03 ಪಕ್ಷೇತರ 01 ಒಟ್ಟು 13 ಸದಸ್ಯರು ಕಾಂಗ್ರೆಸ್ ಬೆಂಬಲಿಸಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಯಿತು. ಕಾಂಗ್ರೆಸ್ ಸದಸ್ಯರಾದ ಯಲ್ಲನಗೌಡ ಪಾಟೀಲ್ ಹಾಗೂ ಶೀಲಾ ರಾಜಶೇಖರ ಭಾವಿಕಟ್ಟಿ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು.
ಮಹಿಳಾ ಸಾಮಾನ್ಯ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಭಾಜಪ ಪ್ರತಿರೋಧವಿಲ್ಲದೇ ಅವಿರೋಧ ಆಯ್ಕೆಯಾದರೆಂದು ರಬಕವಿ ಬನಹಟ್ಟಿ ತಹಸೀಲ್ದಾರ್ ಚುನಾವಣಾಧಿಕಾರಿ ಗಿರಿಶ ಸ್ವಾದಿ ಘೋಷಿಸಿದರು.ಕಳೆದ ಚುನಾವಣೆಯ ಕಹಿ ಘಟನೆ ಮರುಕಳಿಸದಂತೆ ಪೊಲೀಸ್ ಇಲಾಖೆ ಬಿಗಿಭದ್ರತೆ ಒದಗಿಸಿ ಶಾಂತ ರೀತಿಯಲ್ಲಿ ಮತದಾನ ಜರುಗಿಲು ಸಹಕರಿಸಿತು ಎಂದರು.
ನೂತನವಾಗಿ ಆಯ್ಕೆಯಾದ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷೆ ಶೀಲಾ ರಾಜಶೇಖರ ಭಾವಿಕಟ್ಟಿ ಅವರನ್ನು ಕಾರ್ಯಕರ್ತರು, ಮುಖಂಡರು ಅಭಿನಂದಿಸಿದರು. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ ಪರಸ್ಪರ ಗುಲಾಲ ಎರಚಿ ಮೆರವಣಿಗೆ ಮೂಲಕ ವಿಜಯೋತ್ಸವ ಆಚರಿಸಿದರು.ಪಟ್ಟಣದ ಅಭಿವೃದ್ಧಿಯ ಸಲುವಾಗಿ ನಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದೇವೆ ಹೊರತು ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸಜನಸಾಬ ಪೆಂಡಾರಿ ಬಂಡಾಯ ಅಭ್ಯರ್ಥಿಗಳಾದ ಸವಿತಾ ಹುರಕಡ್ಲಿ, ಚಾಂದನಿ ನಾಯಿಕ ಹಾಗೂ ಗೋದಾವರಿ ಬಾಟ್ ಹೇಳಿದರು.
ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರ, ಡಾ.ಎ.ಆರ್.ಬೆಳಗಲಿ ,ಅಶೋಕ ಅಂಗಡಿ, ಬಸವರಾಜ ರಾಯರ, ಲಕ್ಷಣ ಮಾಂಗ, ಪುರಸಭೆ ಸದಸ್ಯರಾದ ಅಬ್ದುಲ್ ಬಾಗವಾನ, ರಾಜು ಗೌಡಪ್ಪಗೋಳ, ಮುಸ್ತಾಕ ಚಿಕ್ಕೋಡಿ, ಸಜ್ಜನಸಾಬ ಪೆಂಡಾರಿ, ಬಲವಂತಗೌಡ ಪಾಟೀಲ, ಬಸಪ್ಪ ಬುರುಡ, ಸವಿತಾ ಹುರಕಡ್ಲಿ, ಗೋದಾವರಿ ಬಾಟ,ಚಾಂದನಿ ನಾಯಕ, ಭಾವನಾ ಪಾಟೀಲ, ಸುಜಾತ ಮಾಂಗ, ಸೇರಿದಂತೆ ಇನ್ನು ನೂರಾರು ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.