ಹುಬ್ಬಳ್ಳಿ:
ಮೊಹರಂ ಹಬ್ಬಕ್ಕೂ 10 ದಿನ ಮೊದಲೆ ಇಲ್ಲಿ ಕಾರ್ಯಕ್ರಮ ಶುರುವಾಗುತ್ತವೆ. ಮೊದಲ ದಿನದಂದು ಚಂದ್ರನನ್ನು ನೋಡಿ ಗುದ್ದಲಿ ಹಾಕಿ, ಮಸೀದಿಯ ಮುಂದೆ ಅವಾನಿ ಕುಣಿಕೆಯನ್ನು ತೆಗೆಯಲಾಗುತ್ತದೆ. ಸರ್ವ ಧರ್ಮಿಯರು ''''''''ಜಿಯಾರತ್'''''''' ಕೈಗೊಂಡು ಫಕ್ಕೀರರಾಗುತ್ತಾರೆ. ಎಂಟನೇ ದಿನ ಸಂದಲ್ ರಾತ್ರಿ 11 ಗಂಟೆಯ ನಂತರ ಶರಣೆ ಬೀಬಿ ಫಾತಿಮಾ ಮೆರವಣಿಗೆ ನಡೆಯುತ್ತದೆ. ಯುವಕರ ಹೆಜ್ಜೆಮೇಳ ಹಾಗೂ ಕೋಲಾಟಗಳು ಮೆರವಣಿಗೆಗೆ ಮತ್ತಷ್ಟು ರಂಗು ತರುತ್ತವೆ. 9ನೇ ದಿನ ಕತ್ತಲ್ ರಾತ್ರಿ ಅಂದು ಮಸೀದಿಗಳಲ್ಲಿ ಡೋಲಿಗಳನ್ನು ವಿದ್ಯುದೀಪಗಳಿಂದ ಅಲಂಕರಿಸುತ್ತಾರೆ. ಭಕ್ತರು ಮನೆಯಲ್ಲಿ ಮಾಡಿದ ಅಡಿಗೆಯ ನೈವೇದ್ಯೆ ತೆಗೆದುಕೊಂಡು ಮಸೀದಿಗೆ ಆಗಮಿಸಿ ಪಾತೆಹಾ(ಪೂಜೆ) ಸಲ್ಲಿಸುತ್ತಾರೆ.
10ನೇ ದಿನ ಮೊಹರಂ ಹಬ್ಬದ ಕೊನೆಯ ದಿನ. ಅಂದು ಬೆಳಗಿನ 4 ಗಂಟೆಯ ಹೊತ್ತಿಗೆ ಯರಗುಪ್ಪಿಯ 3 ಡೋಲಿಗಳು ಹಾಗೂ ಕೈದೇವರು ಮೆರವಣಿಗೆ ಹೊರಟು ಊರಿನಲ್ಲಿ ಸುತ್ತಾಡಿ 8 ಗಂಟೆಯ ಹೊತ್ತಿಗೆ ವಿರಮಿಸುತ್ತವೆ. 10 ಗಂಟೆಯ ಹೊತ್ತಿಗೆ ಮತ್ತೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಯರಗುಪ್ಪಿ ಗ್ರಾಮದಲ್ಲಿರುವ ಕೆರೆಯ ವಿಶಾಲ ಮೈದಾನದಲ್ಲಿ ಡೋಲಿಗಳನ್ನು ಒಂದೆಡೆ ಸೇರಿಸಿ ಮಂಚದ ಮೇಲೆ ಕೂಡಿಸುತ್ತಾರೆ. ಈ ಉತ್ಸವವನ್ನು ನೋಡಲು ಅನ್ಯರಾಜ್ಯಗಳಿಂದ ಭಕ್ತರು ಆಗಮಿಸುವುದು ವಿಶೇಷ.ಮೊಹರಂ ಶೋಕಾಚರಣೆ ಅನ್ನುವುದನ್ನು ಐತಿಹ್ಯವೇ ಸಾರಿ ಹೇಳುತ್ತೆ. ಆದರೆ, ಕಾಲಾಂತರದಲ್ಲಿ ಶೋಕಾಚರಣೆಯೇ ಸಂಭ್ರಮ ಸ್ವರೂಪ ಪಡೆದುಕೊಂಡಿದೆ. ಮೊಹರಂ ಹಬ್ಬವೆಂದರೆ ಅಲ್ಲಿ ಹೆಜ್ಜೆಮೇಳ ಇರಲೇಬೇಕು. ಅದರಲ್ಲೂ ಅಲಾವಿ ಕುಣಿತ ಇರದಿದ್ದರೆ ಈ ಹಬ್ಬ ಸಂಪೂರ್ಣವಾಗುವುದೇ ಇಲ್ಲ. ಯರಗುಪ್ಪಿ ಜಾತ್ರೆಯಲ್ಲಂತೂ ತಲೆತಲಾಂತರದಿಂದಲೂ ಜಾನಪದ ಸೊಗಡನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿರುವುದು ಇಲ್ಲಿನ ಮತ್ತೊಂದು ವಿಶೇಷ.
ಜಾತ್ರೆಯ ಕೊನೆಯ ದಿನ ಮಧ್ಯಾಹ್ನ 2 ಗಂಟೆ ವೇಳೆಗೆ ಕೆರೆಯ ಮೈದಾನದಲ್ಲಿ ಹೆಜ್ಜೆಮೇಳ, ಕೋಲುಮೇಳ, ಕಡೆಗೋಲು ಕುಣಿತ, ಜತ್ತಿಗೆ ಕುಣಿತ, ಮುಳ್ಳು ಹೆಜ್ಜೆ ಕುಣಿತಗಳ ಸ್ಪರ್ಧೆ ಏರ್ಪಡಿಸಲಾಗುತ್ತೆ. ಸಾಹಸ ಕ್ರೀಡೆ ಕೂಡ ಇಲ್ಲಿ ನಡೆಯುತ್ತೆ. ಹೆಜ್ಜೆಮೇಳದಲ್ಲಿ ಅದ್ಭುತ ಪ್ರದರ್ಶನ ನೀಡುವ 3 ತಂಡಗಳಿಗೆ ಬಹುಮಾನ ನೀಡಲಾಗುತ್ತದೆ. ವಿವಿಧ ಜಿಲ್ಲೆಗಳಿಂದ 60ಕ್ಕೂ ಹೆಚ್ಚು ಹೆಜ್ಜೆಮೇಳದ ಕಲಾತಂಡಗಳು ಇದರಲ್ಲಿ ಭಾಗವಹಿಸುತ್ತವೆ.ಯರಗುಪ್ಪಿಯಲ್ಲಿ ಬಂದು ಸೇರುವ 6 ಡೋಲಿಗಳು ಒಂದೇ ಊರಿನವಲ್ಲ. ಪಕ್ಕದ ಚಿಕ್ಕನರ್ತಿ, ಯರಿನಾರಾಯಣಪುರ ಗ್ರಾಮವೂ ಸೇರಿ ಯರಗುಪ್ಪಿಯಲ್ಲಿ ನಡೆಯುವ ಕೊನೆ ದಿನದ ಜಾತ್ರೆಯಲ್ಲಿ 6 ಡೋಲಿಗಳು ಒಂದೆಡೆ ಸೇರುವುದು ವಿಶೇಷ. ಈ ಪದ್ಧತೆ ಕಳೆದ ನೂರಾರು ವರ್ಷಗಳಿಂದ ಇಂದಿಗೂ ಮುಂದುವರಿಸಿಕೊಂಡು ಬಂದಿರುವುದು ಗ್ರಾಮಸ್ಥರಲ್ಲಿ ಹಿಡಿದ ಭಾವೈಕ್ಯತೆಯ ಕೈಗನ್ನಡಿಯಾಗಿದೆ.