ಯರಗೋಳ್ ಡ್ಯಾಂ ಜಲ ವಿವಾದ: ಸ್ಥಳಕ್ಕೆ ಸಮಿತಿ ಭೇಟಿ

KannadaprabhaNewsNetwork | Published : Jun 9, 2024 1:39 AM

ಸಾರಾಂಶ

ಯರಗೋಳ್ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಹಾಗೂ ಮಾರ್ಕಂಡೇಯ ಡ್ಯಾಂ ತುಂಬಿ ಹರಿಯುವ ಮಳೆ ನೀರು ವ್ಯರ್ಥವಾಗಿ ತಮಿಳುನಾಡುಗೆ ಹರಿಯುತ್ತಿದನ್ನು ತಡೆದು ಡ್ಯಾಂ ನಿರ್ಮಿಸಿ ಕುಡಿಯುವ ನೀರು ಪೂರೈಸಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ದಕ್ಷಿಣ ಪಿನಾಕಿನಿ ಅಂತರ ರಾಜ್ಯ ಜಲವಿವಾದಕ್ಕೆ ಸಂಬಂಧಿಸದಂತೆ ಅಂತರ ರಾಜ್ಯ ಜಲ ವಿವಾದ ಪರಿಶೀಲನಾ ಸಮಿತಿಯು ಶನಿವಾರ ನಾಲ್ಕು ತಾಲೂಕಿನ ಜನರ ಕುಡಿಯುವ ನೀರಾವರಿ ಯೋಜನೆಯಾದ ಯರಗೋಳ್ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ತಾಲೂಕಿನ ಬಲಮಂದೆ ಗ್ರಾಪಂ ಪ್ಯಾಪ್ತಿಯ ಯರಗೋಳ್ ಗ್ರಾಮದಲ್ಲಿ ಬಂಗಾರಪೇಟೆ, ಮಾಲೂರು, ಕೋಲಾರ ಮತ್ತು ಮಾರ್ಗ ಮಧ್ಯ ಸಿಗುವ ೪೫ ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ ಯರಗೋಳ್ ಗ್ರಾಮದ ಬಳಿ ನಿರ್ಮಾಣ ಮಾಡಿರುವ ೫೦೦ ಎಂಸಿಎಫ್‌ಟಿ ಸಾಮರ್ಥ್ಯದ ಡ್ಯಾಂ ನಿರ್ಮಾಣ ಮಾಡಲಾಗಿದೆ.

ತಮಿಳುನಾಡು ಸರ್ಕಾರದ ಅಡ್ಡಿ

ಕಳೆದ ವರ್ಷ ಡ್ಯಾಂ ಉದ್ಘಾಟನೆಯನ್ನೂ ನೆರವೇರಿಸಲಾಗಿದೆ. ಆದರೆ ಇದು ಪಕ್ಕದ ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿ ಕಾಮಗಾರಿ ಜಾರಿ ಮಾಡದಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಯೋಜನೆಗೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿತ್ತು. ಆದರೆ ಸುಪ್ರೀಂಕೋರ್ಟ್ ಯೋಜನೆಗೆ ತಡೆಯಾಜ್ಙೆ ನೀಡದೆ ಎರಡೂ ರಾಜ್ಯಗಳು ಪರಸ್ಪರ ಮಾತುಕಡೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿತ್ತು.

ಅಲ್ಲದೆ ಸುಪ್ರೀಂ ಕೋರ್ಟ್‌ ಕೇಂದ್ರ ಜಲ ಆಯುಕ್ತರ ಅಧ್ಯಕ್ಷತೆಯಲ್ಲಿ ಮಾತುಕತೆಗೆ ಸಮಿತಿ ರಚಿಸಿತ್ತು. ಈ ಸಮಿತಿಯು ಈಗಾಗಲೇ ಎರಡು ಸಲ ಪರಸ್ಪರ ಮಾತುಕತೆ ನಡೆಸಿತ್ತು. ವಾಸ್ತವಾಂಶವನ್ನು ತಿಳಿಯಲು ಈ ಸಮಿತಿ ಶನಿವಾರ ಯರಗೋಳ್ ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿತು.

ಕುಡಿಯುವ ನೀರಿನ ಯೋಜನೆ

ಯರಗೋಳ್ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಹಾಗೂ ಮಾರ್ಕಂಡೇಯ ಡ್ಯಾಂ ತುಂಬಿ ಹರಿಯುವ ಮಳೆ ನೀರು ವ್ಯರ್ಥವಾಗಿ ತಮಿಳುನಾಡುಗೆ ಹರಿಯುತ್ತಿದನ್ನು ತಡೆದು ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಮಾಡಿದರೆ ಜಿಲ್ಲೆಯ ನಾಲ್ಕು ತಾಲೂಕಿನ ಜನರಿಗೆ ಹಾಗೂ ದಾರಿ ಮಧ್ಯ ಸಿಗುವ ೪೫ಹಳ್ಳಿಗಳಿಗೆ ಶಾಶ್ವತವಾಗಿ ಕುಡಿಯುವ ನೀರಿನ ಭವಣೆ ನೀಗಿಸಬಹುದೆಂದು ರಾಜ್ಯ ಸರ್ಕಾರ ೨೦೦೭ರಲ್ಲಿ ಯೋಜನೆಗೆ ಅನುಮೋದನೆ ನೀಡಿತು. ಆದರೆ ಯರಗೋಳ್ ಬಳಿಯಿಂದ ವ್ಯರ್ಥವಾಗಿ ಹರಿಯುವ ಮಳೆ ನೀರನ್ನೆ ನಂಬಿ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ, ತಿರುವಣ್ಣಾಮಲೈ ಕುಡಲೂರ್ ವಿಲ್ಲಾಪುರಂ ಗ್ರಾಮದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ತಮಿಳುನಾಡು ಸರ್ಕಾರ ಯರಗೋಳ್ ಡ್ಯಾಂ ನಿರ್ಮಾಣ ವಿರುದ್ಧ ಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಯೋಜನೆಗೆ ತಡೆ ನೀಡುವಂತೆ ಕೋರಿತ್ತು.

ಸ್ಥಳ ಪರಿಶೀಲನೆಗೆ ಸಮಿತಿ

ಆದರೆ ನ್ಯಾಯಾಲಯ ಯೋಜನೆಗೆ ತಡೆ ನೀಡದೆ ಎರಡೂ ರಾಜ್ಯಗಳು ಪರಸ್ಪರ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಸೂಚಿಸಿತ್ತು. ಅಲ್ಲದೆ ಎರಡೂ ರಾಜ್ಯಗಳನ್ನೊಳ್ಳಗೊಂಡ ತಂಡ ರಚಿಸಿತ್ತು. ಈ ತಂಡವು ಶನಿವಾರ ಯೋಜನೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದೆ.ಸ್ಥಳ ಪರಿಶಾಲನೆ ಸಂಕರ್ಭದಲ್ಲಿ ಕೇಂದ್ರ ಜಲ ಆಯೋಗದ ಸಿಎಸ್‌ಆರ್‌ಒ ವಿಭಾಗದ ಮುಖ್ಯ ಎಂಜಿನಿಯರ್ ಆರ್.ತಂಗಮಣಿ, ಹೈಡ್ರೋಲಜಿ ದಕ್ಷಿಣ ವಿಭಾಗದ ನಿರ್ದೇಶಕರಾದ ಎನ್.ಎನ್.ರೈ. ಐಎಸ್‌ಎಂ-೧ ವಿಭಾಗದ ನಿರ್ದೇಶಕ ಮನೋಜ್ ಕುಮಾರ್, ಕೇಂದ್ರ ಅಂತರ ಜಲ ಮಂಡಳಿ ನೈಋತ್ಯ ಪ್ರಾದೇಶಿಕ ನಿರ್ದೇಶಕ ಎನ್.ಜೋತಿಕುಮಾರ್, ಐಎಸ್‌ಎಂ ಸಹಾಯಕ ನಿರ್ದೇಶಕ ಆಶಿಸಿ ಕುಮಾರ್ ಪಾಂಡೆ, ಕೋಲಾರ ಉಪವಿಭಾಗಾಧಿಕಾರಿ ವೆಂಕಟಕಲಕ್ಷ್ಮೀ, ತಹಸೀಲ್ದಾರ್ ರಶ್ಮಿ, ಪುರಸಭೆ ಮುಖ್ಯಾಧಿಕಾರಿ ಎಂ.ಮೀನಾಕ್ಷಿ, ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಎಂಜಿನಿಯರ್ ಚಂದ್ರಪ್ಪ ಮತ್ತಿತರರು ಇದ್ದರು.

Share this article