ಬೆಂಗಳೂರು : ವಕ್ಫ್‌ ಹೋರಾಟಕ್ಕೆ ಮತ್ತೆ ಬಿಜೆಪಿಯ ಭಿನ್ನ ಮತೀಯ ಯತ್ನಾಳ ಟೀಂ ರೆಡಿ

KannadaprabhaNewsNetwork | Updated : Dec 27 2024, 06:22 AM IST

ಸಾರಾಂಶ

ಬೆಂಗಳೂರಿನಲ್ಲಿ ಗುರುವಾರ ಸಭೆ ನಡೆಸಿದ ಬಿಜೆಪಿಯ ಭಿನ್ನ ಮತೀಯರು ಮತ್ತೆ ವಕ್ಫ್‌ ವಿರುದ್ಧ್ ಹೋರಾಟ ಮಾಡಲು ಮುಂದಾಗಿದ್ದಾರೆ.

 ಬೆಂಗಳೂರು : ಬಿಜೆಪಿಯ ಅಸಮಾಧಾನಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಮುಖಂಡರ ತಂಡ ವಕ್ಫ್ ಆಸ್ತಿ ವಿವಾದ ಸಂಬಂಧ ತನ್ನ ಎರಡನೇ ಹಂತದ ಹೋರಾಟವನ್ನು ಜನವರಿ ಮೊದಲ ವಾರದಿಂದ ಆರಂಭಿಸಲು ನಿರ್ಧರಿಸಿದೆ. ಅಲ್ಲದೆ, ಬೆಳಗಾವಿ ಅಥವಾ ದಾವಣಗೆರೆಯಲ್ಲಿ ವಕ್ಫ್ ಬಾಧಿತರ ಸಮಾವೇಶ ನಡೆಸುವ ಉದ್ದೇಶವನ್ನೂ ಈ ಬಣ ಹೊಂದಿದೆ.

ಈ ಮೊದಲು ಇದೇ ತಿಂಗಳ 27ರ ಬಳಿಕ ಹೋರಾಟ ನಡೆಸಲು ನಿರ್ಧರಿಸಲಾಗಿತ್ತು. ಆದರೆ ವಕ್ಫ್ ಆಸ್ತಿ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಜನವರಿ ಮೊದಲ ವಾರಕ್ಕೆ ಮುಂದೂಡಿದೆ ಎಂದು ತಿಳಿದು ಬಂದಿದೆ.

ಗುರುವಾರ ನಗರದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಿದ ಯತ್ನಾಳ ಬಣದ ಮುಖಂಡರು ಸುದೀರ್ಘ ಸಮಾಲೋಚನೆ ನಡೆಸಿದರು. ಯತ್ನಾಳ ಸೇರಿ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಬಿ.ಪಿ.ಹರೀಶ್‌, ಮುಖಂಡ ಎನ್‌.ಆರ್‌.ಸಂತೋಷ್ ಅವರು ಉಪಸ್ಥಿತರಿದ್ದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಿಂಬಾವಳಿ, ವಕ್ಫ್ ಆಸ್ತಿ ವಿವಾದದ ಹೋರಾಟ ಮುಂದುವರೆದಿದೆ. ಈಗಾಗಲೇ ಒಂದು ಸುತ್ತಿನ ಹೋರಾಟ ನಡೆಸಿದ್ದೇವೆ. ಅದರ ಎಲ್ಲ ವಿವರಗಳನ್ನು ದೆಹಲಿಗೆ ತೆರಳಿ ವಕ್ಫ್ ಆಸ್ತಿ ಕುರಿತ ಸಂಸತ್ತಿನ ಜಂಟಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ಅವರಿಗೆ ನೀಡಿದ್ದೇವೆ. ಅವರು ಇನ್ನಷ್ಟು ಮಾಹಿತಿ ಕೊಡಲು ನಮಗೆ ಸೂಚಿಸಿದ್ದಾರೆ ಎಂದರು.

ಸರ್ಕಾರ ತೃಪ್ತಿಕರ ಉತ್ತರ ಕೊಟ್ಟಿಲ್ಲ: ವಕ್ಫ್ ವಿವಾದ ಕುರಿತು ವಿಧಾನಮಂಡಲದ ಅಧಿವೇಶನದಲ್ಲಿ ಸರ್ಕಾರ ಕೊಟ್ಟ ಉತ್ತರ ನಮಗೆ ತೃಪ್ತಿ ತಂದಿಲ್ಲ. ಸರ್ಕಾರದ ಉತ್ತರದಿಂದ ನಮಗೆ ನಿರಾಸೆಯಾಗಿದೆ. ಹೀಗಾಗಿ ಹೋರಾಟ ಮುಂದುವರಿಸಲು ನಿರ್ಧರಿಸಿದ್ದೇವೆ. ಹೊಸ ವರ್ಷದ ಜನವರಿಯಲ್ಲಿ ನಾವು ಪ್ರವಾಸ ಮಾಡುತ್ತೇವೆ. ಬೆಳಗಾವಿ ಅಥವಾ ದಾವಣಗೆರೆಯಲ್ಲಿ ವಕ್ಫ್ ಭಾದಿತರ ಸಮಾವೇಶ ನಡೆಸುವ ಉದ್ದೇಶವಿದೆ ಎಂದು ತಿಳಿಸಿದರು.ಸದನದಲ್ಲಿನ ಬಿಜೆಪಿ ಹೋರಾಟದ ಬಗ್ಗೆ ಅತೃಪ್ತಿ

ವಕ್ಫ್ ಆಸ್ತಿ ವಿವಾದ ಕುರಿತು ಪ್ರತಿಪಕ್ಷವಾಗಿ ಬಿಜೆಪಿ ನಡೆಸಿದ ಹೋರಾಟದ ಬಗ್ಗೆ ಯತ್ನಾಳ ಬಣ ಅತೃಪ್ತಿ ವ್ಯಕ್ತಪಡಿಸಿದೆ.

ಈ ಬಗ್ಗೆ ಬಣದ ಮುಖಂಡರ ಸಭೆಯಲ್ಲಿ ಚರ್ಚೆ ನಡೆದಿದ್ದು, ಪರಿಣಾಮಕಾರಿ ಹೋರಾಟ ನಡೆಸುವ ಅವಕಾಶ ಇದ್ದರೂ ಬಿಜೆಪಿ ನಾಯಕರು ಕೈಚೆಲ್ಲಿದರು. ಒಂದು ರೀತಿಯಲ್ಲಿ ನಮ್ಮ ಪಕ್ಷದ ನಾಯಕರೇ ಹೊಂದಾಣಿಕೆ ಮಾಡಿಕೊಂಡಿದ್ದರು ಎಂಬ ಆರೋಪ ಪ್ರಸ್ತಾಪವಾಗಿದೆ ಎಂದು ಮೂಲಗಳು ತಿಳಿಸಿವೆ.

Share this article