ಯಲಹಂಕದ ಕಸ ಸಮಸ್ಯೆಗೆ ಹೆಚ್ಚು ವಾಹನಕ್ಕೆ ಸೂಚನೆ

KannadaprabhaNewsNetwork |  
Published : Jul 12, 2025, 01:48 AM ISTUpdated : Jul 12, 2025, 10:29 AM IST
BBMP 5 | Kannada Prabha

ಸಾರಾಂಶ

ಯಲಹಂಕದಲ್ಲಿ ಕಸದ ಸಮಸ್ಯೆ ನಿವಾರಣೆಗೆ ಹೆಚ್ಚುವರಿ ವಾಹನ ನಿಯೋಜನೆ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.

  ಬೆಂಗಳೂರು :  ಯಲಹಂಕದಲ್ಲಿ ಕಸದ ಸಮಸ್ಯೆ ನಿವಾರಣೆಗೆ ಹೆಚ್ಚುವರಿ ವಾಹನ ನಿಯೋಜನೆ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಯಲಹಂಕದ ಮಿನಿ ವಿಧಾನಸೌಧದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಯಲಹಂಕದಲ್ಲಿ ಕಸ ಸಂಗ್ರಹಿಸಲು 50 ಆಟೋ ಟಿಪ್ಪರ್‌ಗಳು ಹಾಗೂ 7 ಕಾಂಪ್ಯಾಕ್ಟರ್ ಗಳನ್ನು ಹೆಚ್ಚುವರಿ ನಿಯೋಜನೆಗೆ ಸೂಚಿಸಿದರು. ಪ್ರಾಣಿಗಳ ಚಿಕಿತ್ಸೆಗಾಗಿ ದೊಡ್ಡ ಬೆಟ್ಟಹಳ್ಳಿಯಲ್ಲಿ ಪಶು ಚಿಕಿತ್ಸಾಲಯಕ್ಕೆ ಜಾಗ ಮೀಸಲಿರಿಸಿದ್ದು, ಶೀಘ್ರ ಪಶು ಚಿಕಿತ್ಸಾಲಯ ಪ್ರಾರಂಭಿಸಲು ತಿಳಿಸಿದರು.

ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಲು ತಿಂಗಳಿಗೊಮ್ಮೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜತೆ ಸಭೆ ನಡೆಸಿ, ಸ್ಥಳೀಯವಾಗಿ ಇರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಎಂದು ಕಾರ್ಯಪಾಲಕ ಎಂಜಿನಿಯರ್‌ಗೆ ನಿರ್ದೇಶಿಸಿದರು.

ಯಲಹಂಕ ರೈಲ್ವೇ ಸ್ಟೇಷನ್ ಬಳಿಯ ಕೆಳಸೇತುವೆ ಕಾಮಗಾರಿಯು ಭೂಸ್ವಾಧೀನ ಪ್ರಕ್ರಿಯೆಯ ಪರಿಣಾಮ ಪೂರ್ಣಗೊಂಡಿರುವುದಿಲ್ಲ. ಅಗತ್ಯ ಜಾಗ ಭೂ ಸ್ವಾಧೀನಪಡಿಸಿಕೊಂಡು ಕಾಲಮಿತಿಯೊಳಗಾಗಿ ರೈಲ್ವೆ ಕೆಳಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರಿಂದ 23 ಅಹವಾಲುಗಳು ಸ್ವೀಕರಿಸಿದರು. ಪ್ರಮುಖವಾಗಿ ಹೆಗಡೆನಗರ ಮುಖ್ಯ ರಸ್ತೆಯಲ್ಲಿ ಬಸ್ ತಂಗುದಾಣ, ಕೆರೆ ಒತ್ತುವರಿ ತೆರವು, ಡಾಂಬರೀಕರಣ, ಚರಂಡಿ ನಿರ್ಮಾಣ ಸೇರಿದಂತೆ ಮೊದಲಾದ ಮನವಿಗಳಿದ್ದವು.

ಸಭೆಗೂ ಮೊದಲು ಯಲಹಂಕ ಕೆರೆ ಪರಿಶೀಲನೆ, ಕೇಂದ್ರೀಯ ವಿಹಾರ ಅಪಾರ್ಟ್ ಮೆಂಟ್‌ನ ರಾಜಕಾಲುವೆ ಕಾಮಗಾರಿ, ನಿಟ್ಟೆ ಮೀನಾಕ್ಷಿ ಕಾಲೇಜು ರಸ್ತೆಯ ಅಗಲೀಕರಣ ಕಾಮಗಾರಿ ಪರಿಶೀಲಿಸಿದರು. ಮಲ್ಲೇಶ್ವರದ ಸುಬ್ರಮಣ್ಯ ನಗರದಿಂದ 8ನೇ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಲೆವೆಲ್ ಕ್ರಾಸಿಂಗ್ (ಎಲ್‌ಸಿ2), ಕೆ-ರೈಡ್ ನಿಂದ ಸಬ್ ಅರ್ಬನ್ ಲೈನ್ ಕೆಳಸೇತುವೆ ನಿರ್ಮಿಸುವ ಕುರಿತು ಹೊಸದಾಗಿ ವಿನ್ಯಾಸ ಸಿದ್ಧಪಡಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಶಾಸಕ ಎಸ್‌.ಆರ್‌. ವಿಶ್ವನಾಥ್‌, ವಲಯ ಆಯುಕ್ತ ಕರೀಗೌಡ, ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಉಪ ಆಯುಕ್ತೆ ಮಮತಾ, ಮುಖ್ಯ ಎಂಜಿನಿಯರ್‌ ರಂಗನಾಥ್ ಇದ್ದರು.

PREV
Read more Articles on

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ