ಲಕ್ಷ್ಮೇಶ್ವರ ತಾಲೂಕಲ್ಲಿ ಹೆಸರು ಬೆಳೆಗೆ ಹಳದಿ ರೋಗ ಬಾಧೆ, ಅನ್ನದಾತರು ಕಂಗಾಲು

KannadaprabhaNewsNetwork | Published : Jul 3, 2025 11:48 PM
ಪೊಟೋ- ಲಕ್ಷ್ಮೇಶ್ವರ ಸಮೀಪದ ಹೊಲದಲ್ಲಿ ಕಾಣಿಸಿಕೊಂಡಿರುವ ಎಲೆ ಹಳದಿ ರೋಗ ಬಾದೆಯು | Kannada Prabha

ಸಾರಾಂಶ

ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಹೆಸರು ಬೆಳೆಗೆ ಈಗ ಎಲೆ ಹಳದಿ ರೋಗ ಹಾಗೂ ಸೀರು ರೋಗದ ಬಾಧೆ ಕಾಣಿಸಿಕೊಳ್ಳುವ ಮೂಲಕ ರೈತರ ನಿದ್ದೆಗೆಡಿಸಿವೆ.

ಅಶೋಕ ಡಿ. ಸೊರಟೂರ

ಲಕ್ಷ್ಮೇಶ್ವರ:ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಹೆಸರು ಬೆಳೆಗೆ ಈಗ ಎಲೆ ಹಳದಿ ರೋಗ ಹಾಗೂ ಸೀರು ರೋಗದ ಬಾಧೆ ಕಾಣಿಸಿಕೊಳ್ಳುವ ಮೂಲಕ ರೈತರ ನಿದ್ದೆಗೆಡಿಸಿವೆ.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆ ಪ್ರಮುಖವಾಗಿ ಬೆಳೆಯುತ್ತಾರೆ. ಕಡಿಮೆ ಅವಧಿಯಲ್ಲಿ ಬರುವ ಹೆಸರು ಬೆಳೆಯು ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತಂದು ಕೊಡುವ ಬೆಳೆಯಾಗಿದೆ. ಇದು 70-80 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಅಲ್ಲದೆ ಕಪ್ಪು ಮಣ್ಣಿನಲ್ಲಿ ಹಿಂಗಾರು ಹಂಗಾಮಿಗೆ ಮತ್ತೊಂದು ಬೆಳೆಯನ್ನು ಬೆಳೆಯುವ ಅವಕಾಶ ರೈತರಿಗೆ ಸಿಗುತ್ತದೆ. ಹೀಗಾಗಿ ಕಪ್ಪು ಜಮೀನಿನಲ್ಲಿ ಹೆಸರು ಬೆಳೆಯನ್ನು ಪ್ರಮುಖವಾಗಿ ಬೆಳೆಯುತ್ತಾರೆ.

ಎಲೆ ಹಳದಿ ರೋಗ ಒಮ್ಮೆ ಕಂಡು ಬಂದರೆ ಅದರ ನಿಯಂತ್ರಣ ಅಸಾಧ್ಯ. ಗಿಡವನ್ನು ಕಿತ್ತು ಹಾಕುವುದೊಂದೆ ಅದಕ್ಕಿರುವ ಪರಿಹಾರ. ಹಳದಿ ರೋಗ ಬಂದರೆ ಹೆಸರು ಕಾಯಿ ಕೂಡಾ ಹಳದಿಯಾಗುವ ಮೂಲಕ ಕಾಳು ಕಟ್ಟುವುದಿಲ್ಲ. ಇದರಿಂದ ಇಳುವರಿ ಕುಂಠಿತವಾಗುತ್ತದೆ. ಸಾವಿರಾರು ರುಪಾಯಿಗಳನ್ನು ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಯು ಹೀಗೆ ಮಧ್ಯದಲ್ಲಿ ಬರುವ ರೋಗ ಬಾಧೆಯು ರೈತರಿಗೆ ನುಂಗಲಾರದ ತುತ್ತಾಗಿ ಆದಾಯಕ್ಕೆ ಕೊಡಲಿ ಪೆಟ್ಟು ನೀಡುತ್ತದೆ ಎನ್ನುತ್ತದೆ ರೈತ ಸಮೂಹ.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಮಾಡಳ್ಳಿ, ಯಳವತ್ತಿ, ಯತ್ತಿನಹಳ್ಳಿ, ಮಾಗಡಿ, ಗೊಜನೂರ, ರಾಮಗೇರಿ, ಬಸಾಪೂರ, ಬಟ್ಟೂರ, ಗೋವನಾಳ, ಶಿಗ್ಲಿ, ಪು.ಬಡ್ನಿ, ಗುಲಗಂಜಿಕೊಪ್ಪ, ಒಡೆಯರ ಮಲ್ಲಾಪೂರ, ಸೂರಣಗಿ, ದೊಡ್ಡೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಸುಮಾರು 5850 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಹೆಸರು ಬೆಳೆಗೆ ಪ್ರಮುಖವಾಗಿ ಕಂಡು ಬರುವ ಹಳದಿ ಎಲೆ ರೋಗವು ಎಲ್ಲೋ ಮುಸಾಯಿಕ್ ವೈರಸ್ ಎಂಬ ರಸ ಹೀರುವ ಕೀಟದಿಂದ ಬರುತ್ತದೆ. ತಂಪು ವಾತಾವರಣವು ಇದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ಹೆಸರು ಬೆಳೆಯಲ್ಲಿ ಕಂಡು ಬರುವ ರಸ ಹೀರುವ ಸಣ್ಣ ಕೀಟಗಳಿಂದ ರೋಗವು ವೇಗವಾಗಿ ಹರಡುತ್ತದೆ. ಹೆಸರು ಬೆಳೆಗೆ ಕಂಡು ಬರುವ ಹಳದಿ ರೋಗ ನಿಯಂತ್ರಣ ಮಾಡಲು ಎಲೆ ಹಳದಿ ರೋಗ ಬಂದ ಗಿಡಗಳನ್ನು ಕಿತ್ತು ಮಣ್ಣಿನಲ್ಲಿ ಹೂತು ಹಾಕುವುದು ಮೊದಲ ಹಂತವಾಗಿದೆ.

ಹೆಸರು ಬೆಳೆಯುವ ರೈತರು ಪ್ರತಿ ವರ್ಷ ಬಿತ್ತನೆ ಮಾಡುವ ಪೂರ್ವದಲ್ಲಿ ಬೀಜೋಪಚಾರ ಮಾಡುವುದು ರೋಗ ಬರದಂತೆ ತಡೆಯುವಲ್ಲಿ ಶೇ 99ರಷ್ಟು ಪ್ರಮುಖ ಅಂಶವಾಗಿದೆ. ಎಲೆ ಹಳದಿ ರೋಗ ನಿಯಂತ್ರಣಕ್ಕೆ ಥೈಯೋಮಿತಾಕ್ಸಂ ಅಥವಾ ಅಸೀಫೇಟ್ ಎನ್ನುವ ದ್ರಾವಣವನ್ನು 15 ಲೀಟರ್ ನೀರಿಗೆ 8-10 ಗ್ರಾಂ ಹಾಕಿ ಸಿಂಪರಣೆ ಮಾಡಬೇಕು ಎಂದು ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಹೇಳಿದರು.

ಹೆಸರು ಬಿತ್ತನೆ ಮಾಡಲು ಬೀಜ, ಗೊಬ್ಬರ ಸೇರಿದಂತೆ ಪ್ರತಿ ಎಕರೆಗೆ ಸುಮಾರು 3-4 ಸಾವಿರ ಖರ್ಚಾಗುತ್ತದೆ. ಅಲ್ಲದೆ ಈಗ ಕಂಡು ಬರುತ್ತಿರುವ ಸೀರು ರೋಗ ಹಾಗೂ ಎಲೆ ಹಳದಿ ರೋಗ ಬಾಧೆಯು ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟು ಮಾಡುತ್ತದೆ. ಇದರಿಂದ ರೈತರು ಸಾಲದ ಸುಳಿಗೆ ಸಿಲುಕಿ ನರಳುವಂತೆ ಮಾಡುತ್ತದೆ ಎಂದು ಲಕ್ಷ್ಮೇಶ್ವರದ ಸೋಮಲಿಂಗಪ್ಪ ಮೇವುಂಡಿ ಹಾಗೂ ಪ್ರಕಾಶ ಮೇವುಂಡಿ ಹೇಳಿದರು.

PREV