ಬೆಂಗಳೂರು : ಆರ್.ವಿ. ರಸ್ತೆ - ಬೊಮ್ಮಸಂದ್ರ ಸಂಪರ್ಕಿಸುವ ನಮ್ಮ ಮೆಟ್ರೋದ ಹಳದಿ ಮಾರ್ಗದ ಜನಸಂಚಾರಕ್ಕಾಗಿ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್‌ಎಸ್) ಅಕ್ಟೋಬರ್ ಅಂತ್ಯದ ವೇಳೆಗೆ ತಪಾಸಣೆ ಕೈಗೊಳ್ಳುವ ನಿರೀಕ್ಷೆಯಿದೆ. ಮುಂದುವರಿದು, ಡಿಸೆಂಬರ್ ಒಳಗಾಗಿ ತೀತಾಘರ್ ರೈಲ್ ಸಿಸ್ಟಮ್ಸ್ ಲಿ. ಕಂಪನಿಯು ಆರು ರೈಲನ್ನು ಪೂರೈಸಲಿದ್ದು, ಜನಸಂಚಾರ ಸಾಧ್ಯವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ವಿಶ್ವಾಸದಲ್ಲಿದೆ.
ಎಲೆಕ್ಟ್ರಾನಿಕ್ ಸಿಟಿ ಟೆಕ್ ಹಬ್‌ಗೆ ಸಂಪರ್ಕ ಕಲ್ಪಿಸುವ ಈ ಮಾರ್ಗಕ್ಕೆ ಅಗತ್ಯವಾದ ಚಾಲಕ ರಹಿತ ರೈಲೊಂದನ್ನು ಕಳೆದ ಫೆಬ್ರವರಿಯಲ್ಲಿ ಚೀನಾದ ಸಿಆರ್‌ಆರ್‌ಸಿ ಕಂಪನಿ ಪೂರೈಸಿದೆ. ಈಗ ಸಿಆರ್‌ಆರ್‌ಸಿಯ ಪಾಲುದಾರಿಕಾ ಸಂಸ್ಥೆಯಾದ ಕೊಲ್ಕತ್ತಾದ ತೀತಾಘರ್ ಹಂತಹಂತವಾಗಿ ರೈಲುಗಳನ್ನು ಒದಗಿಸಬೇಕಿದೆ. ಬಿಎಂಆರ್‌ಸಿಎಲ್‌ಗೆ ಮೂರು ರೈಲುಗಳು ಲಭ್ಯವಾಗಿ ವಿವಿಧ ತಪಾಸಣೆಗೆ ಒಳಪಟ್ಟ ಬಳಿಕ ಸಿಎಂಆರ್‌ಎಸ್ ತಪಾಸಣೆಗೆ ಆಹ್ವಾನಿಸಲು ಯೋಜಿಸಲಾಗಿದೆ.
ಆಗಸ್ಟ್‌ನಲ್ಲಿ ಮೊದಲ ರೈಲು:
ತೀತಾಘರ್ ಕಂಪನಿಯು ಹಳದಿ ಮಾರ್ಗಕ್ಕೆ ಕಮ್ಯೂನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್ ಮಾದರಿಯ ಒಟ್ಟಾರೆ 14 ಸೆಟ್ ರೈಲುಗಳನ್ನು (84 ಬೋಗಿಗಳು) ಒದಗಿಸಬೇಕಿದೆ. ಇದೇ ಆಗಸ್ಟ್‌ಗೆ ಮೊದಲ ರೈಲನ್ನು ಕಂಪನಿಯು ಒದಗಿಸಲಿದೆ. ಮುಂದಿನ ಏಳು ತಿಂಗಳಲ್ಲಿ ಎಲ್ಲ ರೈಲುಗಳು ಬಿಎಂಆರ್‌ಸಿಎಲ್‌ಗೆ ಪೂರೈಕೆಯಾಗಲಿವೆ ಎಂದು ನಮ್ಮ ಮೆಟ್ರೋ ರೈಲು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಮೇನಲ್ಲಿ ಸಿಆರ್‌ಆರ್‌ಸಿ ಕಂಪನಿಯು ಚಾಲಕ ರಹಿತ ರೈಲಿನ ಮೂಲ ಮಾದರಿಯ ಎರಡು ಬೋಗಿಗಳನ್ನು ಕಳುಹಿಸಿತ್ತು. ಈ ರೈಲುಗಳ ಮಾದರಿಯಲ್ಲಿ, ಚೀನಾ ಕಂಪನಿಯ ಮಾರ್ಗದರ್ಶನದಲ್ಲಿ ತೀತಾಘರ್ ಕಂಪನಿ ಉಳಿದ ರೈಲುಗಳನ್ನು ಭಾರತದಲ್ಲಿ ರೂಪಿಸುತ್ತಿದೆ. ಆಗಸ್ಟ್‌ನಲ್ಲಿ ಒಂದು ಹಾಗೂ ಸೆಪ್ಟೆಂಬರ್‌ನಲ್ಲಿ ಎರಡನೇ ರೈಲು ಬರಲಿದ್ದು, ಬಳಿಕ ಪ್ರತಿ ತಿಂಗಳು ಎರಡು ರೈಲುಗಳು ಪೂರೈಕೆ ಆಗುತ್ತವೆ.ಪರೀಕ್ಷೆಗೆ ಬೇಕು ಇನ್ನೆರಡು ರೈಲು
ಹಳದಿ ಮಾರ್ಗದ ಉದ್ದಕ್ಕೂ ಜೋಡಿ ಹಳಿಗಳ ಅಳವಡಿಕೆ, ಸಿಗ್ನಲಿಂಗ್ ಕಾರ್ಯ ಪೂರ್ಣಗೊಂಡಿದೆ. ಸದ್ಯ ಲಭ್ಯವಿರುವ ಒಂದು ರೈಲನ್ನು (ಸಿಆರ್‌ಆರ್‌ಸಿ ಕಳಿಸಿದ್ದು) ಬಳಸಿಕೊಂಡು ಇಡೀ ಹಳದಿ ಮಾರ್ಗದ ಪ್ರಾಯೋಗಿಕ ಚಾಲನೆ ಮಾಡಲಾಗುತ್ತಿದೆ. ಸಿಗ್ನಲಿಂಗ್, ಟ್ರ್ಯಾಕ್ ಸೇರಿ ಒಟ್ಟಾರೆ 36 ಬಗೆಯ ಪರೀಕ್ಷೆಗಳು ಆಗಬೇಕಿದೆ. ಇದಕ್ಕೆ ಕನಿಷ್ಠ ಇನ್ನೆರಡು ಅಂದರೆ ಒಟ್ಟಾರೆ ಮೂರು ರೈಲುಗಳ ಅಗತ್ಯವಿದೆ. ಎಲ್ಲ ಪರೀಕ್ಷೆಗಳನ್ನು ಸೆಪ್ಟೆಂಬರ್-ಅಕ್ಟೋಬರ್ ಹೊತ್ತಿಗೆ ಪೂರ್ಣಗೊಳಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.ಅಕ್ಟೋಬರ್‌ನಲ್ಲಿ ಸಿಎಂಆರ್‌ಎಸ್?
ರೈಲ್ವೆ ಮಂಡಳಿಯ ಒಪ್ಪಿಗೆ ದೊರೆತ ಬಳಿಕ ಅಕ್ಟೋಬರ್ ಅಂತ್ಯದ ವೇಳೆಗೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡವನ್ನು ತಪಾಸಣೆಗೆ ಆಹ್ವಾನಿಸಲು ಯೋಜಿಸಲಾಗಿದೆ. ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಈ ವರ್ಷ ಡಿಸೆಂಬರ್ ಅಂತ್ಯದ ವೇಳೆಗೆ ಆರು ರೈಲುಗಳ ಮೂಲಕ ಹಳದಿ ಮಾರ್ಗದಲ್ಲಿ ಮೆಟ್ರೋ ಸೇವೆ ಆರಂಭಿಸಲು ಯೋಜಿಸಲಾಗಿದೆ. ಒಂದು ರೈಲನ್ನು ಹೆಚ್ಚುವರಿಯಾಗಿ ಉಳಿಸಿಕೊಂಡು ಉಳಿದ ರೈಲುಗಳನ್ನು 15 ನಿಮಿಷಕ್ಕೆ ಒಂದರಂತೆ ವಾಣಿಜ್ಯ ಸೇವೆಗೆ ನಿಯೋಜನೆ ಮಾಡಲಾಗುತ್ತದೆ.2025ರೊಳಗೆ ಉಳಿದ ಬೋಗಿ
ಇನ್ನುಳಿದಂತೆ ರೈಲುಗಳ ಕೊರತೆಯು ಈಗಿನ ನೇರಳೆ, ಹಸಿರು ಮಾರ್ಗದ ಮೇಲೆ ವಿಪರೀತ ಪರಿಣಾಮ ಬೀರುತ್ತಿದೆ. ಪ್ರಯಾಣಿಕರು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ರೈಲಿಗಾಗಿ ಕಾದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೇ ಆಗಸ್ಟ್‌ನಲ್ಲಿ ಚೀನಾದ ಸಿಆರ್‌ಆರ್‌ಸಿ ಕಂಪನಿ ಡಿಟಿಜಿ (ಡಿಸ್ಟೆನ್ಸ್ ಟು ಗೋ) ತಂತ್ರಜ್ಞಾನ ಆಧಾರಿತ ಮೂಲ ಮಾದರಿಯ ರೈಲನ್ನು ಕಳಿಸಲಿದೆ. ತೀತಾಘರ್ ಕಂಪನಿಯು 2025ರ ನವೆಂಬರ್ ಒಳಗಾಗಿ ಉಳಿದ 20 ಡಿಟಿಜಿ ರೈಲನ್ನು ಇವೆರಡು ಮಾರ್ಗಕ್ಕಾಗಿ ಕಳಿಸಲಿದೆ ಎಂದು ಮೆಟ್ರೋ ರೈಲ್ವೆ ಅಧಿಕಾರಿಗಳು ತಿಳಿಸಿದರು.