ಉಪನಿಷತ್ತು, ವೇದ, ಇತಿಹಾಸ, ಪುರಾಣ, ಅಷ್ಟಾದಶ ವಿದ್ಯೆ, ಕಲೆಯಲ್ಲಿ ಯೋಗದ ಅನ್ವಯವಿದೆ

KannadaprabhaNewsNetwork | Published : Jun 23, 2024 2:03 AM

ಸಾರಾಂಶ

ಯೋಗಶಾಸ್ತ್ರವು ಇತರ ಶಾಸ್ತ್ರಗಳಂತೆ ಅತ್ಯಂತ ಗಹನವಾಗಿದೆ. ಭೌತಿಕ ದೈವಿಕ ಅಧ್ಯಾತ್ಮಿಕ ಕ್ಷೇತ್ರದ ಹಲವಾರು ಸತ್ಯಗಳನ್ನು ಒಳಗೊಂಡಿದೆ. ಅಲ್ಲಿ ಬರುವ ಎಲ್ಲ ಮಾತುಗಳನ್ನೂ ಭೌತಿಕ ಸ್ತರದಲ್ಲಿ ನಿಂತು ಅರಿತುಕೊಳ್ಳಲಾಗದು, ವಿವರಿಸಲು ಸಾಧ್ಯವಾಗದು. ಕೇವಲ ಅನುಭವಕ್ಕೆ ಲಭಿಸುವ ವಿಷಯಗಳು ಎಷ್ಟೋ ಇವೆ. ಇದೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಚಿಂತನೆಯು ಸಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಭಾರತದ ಪರಮ ಶ್ರೇಷ್ಠವಾದ ಸಾಹಿತ್ಯ ಉಪನಿಷತ್ತು. ಅಲ್ಲಿಂದ ಆರಂಭಿಸಿ ವೇದ, ಇತಿಹಾಸ, ಪುರಾಣ, ಅಷ್ಟಾದಶ ವಿದ್ಯೆಗಳು, ಕಲೆಗಳು ಈ ಎಲ್ಲದರಲ್ಲೂ ಒಂದು ವ್ಯಾಪಕವಾದ ಅರ್ಥದಲ್ಲಿ ಯೋಗದ ಅನ್ವಯವಿದೆ ಎಂದು ಭಾರತೀ ಯೋಗಧಾಮದ ಸಂಸ್ಥಾಪಕ ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸ್ ಹೇಳಿದರು.

ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟವು ಕಲಾಮಂದಿರದಲ್ಲಿ ಏರ್ಪಡಿಸಿರುವ ಎರಡು ದಿನಗಳ ರಾಜ್ಯ ಮಟ್ಟದ ಪ್ರಥಮ ಯೋಗ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಮಾತನಾಡಿದ ಅವರು, ಇವೆಲ್ಲದರಲ್ಲೂ ಪರಸ್ಪರ ವಿರೋಧವಿಲ್ಲದಂತೆ ನಾನಾ ರೂಪದಲ್ಲಿ ಯೋಗದ ಅಂಗೋಪಾಂಗಗಳು ಹಾಸುಹೊಕ್ಕಾಗಿ ಹೆಣೆದುಕೊಂಡಿವೆ ಎಂದರು.

ಯೋಗಶಾಸ್ತ್ರವು ಇತರ ಶಾಸ್ತ್ರಗಳಂತೆ ಅತ್ಯಂತ ಗಹನವಾಗಿದೆ. ಭೌತಿಕ ದೈವಿಕ ಅಧ್ಯಾತ್ಮಿಕ ಕ್ಷೇತ್ರದ ಹಲವಾರು ಸತ್ಯಗಳನ್ನು ಒಳಗೊಂಡಿದೆ. ಅಲ್ಲಿ ಬರುವ ಎಲ್ಲ ಮಾತುಗಳನ್ನೂ ಭೌತಿಕ ಸ್ತರದಲ್ಲಿ ನಿಂತು ಅರಿತುಕೊಳ್ಳಲಾಗದು, ವಿವರಿಸಲು ಸಾಧ್ಯವಾಗದು. ಕೇವಲ ಅನುಭವಕ್ಕೆ ಲಭಿಸುವ ವಿಷಯಗಳು ಎಷ್ಟೋ ಇವೆ. ಇದೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಚಿಂತನೆಯು ಸಾಗಬೇಕು ಎಂದರು.

ಆಧುನಿಕ ವಿಜ್ಞಾನದ ಮಾನದಂಡಕ್ಕೆ ಎಟುಕುವ ಭೌತಿಕವಾದ ವಿಷಯಗಳನ್ನು ಅಗತ್ಯವಾಗಿ ಗೌರವದಿಂದ ಭಾವಿಸಬೇಕು ಎಂದು ಅವರು ಸಲಹೆ ಮಾಡಿದರು.

ಪ್ರಾಚೀನವಾದದ್ದು ಹಿರಿದಾದದ್ದು ಎಂಬ ಅಭಿಮಾನವು ಹುಟ್ಟಲವಕಾಶವಿದೆಯೋ ಅದೇ ರೀತಿ ಆಧುನಿಕ ವಿಜ್ಞಾನವೆಂದೊಡನೆ ಕಣ್ಣುಮುಚ್ಚಿಕೊಂಡು ಮೆಚ್ಚುವ ದುರಭಿಮಾನವೂ ಹುಟ್ಟಲಾವಕಾಶವಿದೆ. ಆ ವಿಷಯದಲ್ಲೊಂದು ಸಾವಧಾನತೆ ಅತ್ಯಂತ ಅಗತ್ಯ. ಎಷ್ಟೆಷ್ಟೋ ಆಧುನಿಕ ವಿಜ್ಞಾನದ ನಿರ್ಣಯಗಳು ತಲೆಕೆಳಗಾಗಿವೆ. ಎಷ್ಟೆಷ್ಟೋ ಸೃಷ್ಟಿಯ ಮರ್ಮಗಳಿಗೆ ಉತ್ತರ ಲಭಿಸಿಲ್ಲ.ವಿಜ್ಞಾನದ ಆವಿಷ್ಕಾರಗಳಿಗೂ ಪ್ರಾಚೀನ ಋಷಿ ಮಹರ್ಷಿಗಳ ಚಿಂತನೆಗೂ ವಿರೋಧ ತೋರಿಬಂದರೆ, ಪ್ರಾಚೀನ ಋಷಿ ಮಹರ್ಷಿಗಳ ಮಾತಿನ ಆಳ ಅಗಲಗಳನ್ನೇ ಮರುಪರಿಶೀಲಿಸಿ ಸತ್ಯಾರ್ಥವನ್ನು ಗ್ರಹಿಸಲು ಯತ್ನಿಸಬೇಕು ಎಂದು ಅವರು ಹೇಳಿದರು.

ಆಧುನಿಕ ವಿಜ್ಞಾನದ ಒಂದೊಂದು ಪ್ರಯೋಗಗಳೂ ದಾರಿ ತಪ್ಪಿರಲು ಅವಕಾಶವಿದೆ. ಉದಾಹರಣೆಗೆ ಯೋಗ ಸಂಸ್ಥೆಯೊಂದು ಪಶ್ಚಿಮತಾನಾಸನದ ಬಗ್ಗೆ ಮಾಡಿರುವ ಪ್ರಯೋಗ ಮತ್ತು ಅದರ ಫಲಿತಾಂಶದ ಬಗ್ಗೆ ಒಂದೆಡೆ ಕಂಡೆ. ಖಾಲಿ ಹೊಟ್ಟೆಯಲ್ಲಿ ಆಸನ ಮಾಡುವುದರಿಂದ ಚಿಕ್ಕ ಕರುಳಿನ ಮೇಲೆ ಒತ್ತಡವಾಗುತ್ತೆ ಎಂಬ ಕಾರಣದಿಂದ ಒಂದು ಲೋಟ ಕಾಫಿ ಕುಡಿಸಿ ಅನಂತರ ಯೋಗಾಸನ ಮಾಡಿಸಿದೆವು, ಎಂದು. ಇದು ಯೋಗದ ಸಿದ್ಧಾಂತಕ್ಕೆ ತೀರ ವಿರುದ್ಧವಾದದ್ದು. ಇಂತಹ ಪ್ರಯೋಗಗಳ ಮೇಲೆ ನಿಂತ ನಿರ್ಣಯಗಳು ಸಮರ್ಪಕವಾಗಲಾರವು ಎಂದು ಅವರು ಅಭಿಪ್ರಾಯಪಟ್ಟರು.

ಈ ಸಮ್ಮೇಳನದ ಆಯೋಜನೆಯಲ್ಲಿ ಹಿರಿದಾದ ಉದ್ದೇಶವಿದೆ. ಇದು ಹಲವರಿಗೆ ಯೋಗದ ವಿವಿಧ ಮುಖಗಳ ಬಗ್ಗೆ ಹೊಸ ನೋಟವನ್ನು ಖಂಡಿತವಾಗಿಯೂ ಉಂಟುಮಾಡಬಲ್ಲದು. ತಜ್ಞರಲ್ಲೂ ವಿಚಾರ ವಿನಿಮಯಕ್ಕೆ ಎಡೆಮಾಡಿಕೊಡುತ್ತದೆ, ಹಾಗೂ ಲಾಭವಿದೆ ಎಂದರು.

Share this article