ಕನ್ನಡಪ್ರಭ ವಾರ್ತೆ ಮೈಸೂರು
ಅಯೋಧ್ಯೆ ರಾಮಮಂದಿರದ ಬಾಲರಾಮನ ಸುಂದರ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕುಟುಂಬ ಸಮೇತ ಸುತ್ತೂರು ಮಠಕ್ಕೆ ತೆರಳಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದರು.ಶುಕ್ರವಾರ ಬೆಳಗ್ಗೆ ಸುತ್ತೂರು ಮಠಕ್ಕೆ ತಾಯಿ ಮತ್ತು ಪತ್ನಿಯೊಡನೆ ತೆರಳಿದ ಅರುಣ್ ಅವರು ಶ್ರೀಗಳ ಆಶೀರ್ವಾದ ಪಡೆದು, ಫಲತಾಂಬೂಲ ಸ್ವೀಕರಿಸಿದರು.
ಶ್ರೀಗಳು, ಯೋಗಿರಾಜ್ ಮತ್ತು ಅವರ ಪತ್ನಿಗೆ ಮೈಸೂರು ಪೇಟೆ, ಮಲ್ಲಿಗೆ ಹಾರ ಹಾಕಿ, ಅವರ ತಾಯಿಗೆ ಶಾಲು ಹೊದಿಸಿ, ಮಲ್ಲಿಗೆ ಹಾರ ಹಾಕಿ ಅಭಿನಂದಿಸಿದರು.ಈ ವೇಳೆ ಶ್ರೀಗಳು ಯೋಗಿರಾಜ್ ಅವರ ಕುಶಲೋಪಹರಿ ವಿಚಾರಿಸಿದರು. ಅಲ್ಲದೆ ರಾಮನ ಮೂರ್ತಿ ನಿರ್ಮಾಣದ ಕುರಿತು ತಿಳಿದುಕೊಂಡರು.
ಶ್ರೀಗಳಿಗೆ ಯೋಗಿರಾಜ್ ಅವರು, ಶ್ರೀರಾಮಲಲ್ಲಾ ಮೂರ್ತಿಯ ಭಾವಚಿತ್ರವನ್ನು ತೋರಿಸಿ ಮೂರ್ತಿ ಮೂಡಿಬಂದಿರುವ ರೀತಿ ಮತ್ತು ವಿಗ್ರಹದಲ್ಲಿನ ವೈಶಿಷ್ಟ್ಯತೆ ಕುರಿತು ಮಾಹಿತಿ ನೀಡಿದರು. ಅಲ್ಲದೆ ಶ್ರೀಗಳು ವಿಗ್ರಹ ಮೂಡಿಬಂದಿರುವ ಮಾದರಿಯನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು.ಈ ವೇಳೆ ಜೆಎಸ್ಎಸ್ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ. ಬೆಟಸೂರಮಠ್, ಕಾರ್ಯದರ್ಶಿ ಎಚ್.ಪಿ. ಮಂಜುನಾಥ್ ಮೊದಲಾವದರು ಇದ್ದರು.
ಶ್ರದ್ಧೆಯಿಂದ ಬಾಲರಾಮ ಮೂರ್ತಿ ಕೆತ್ತಿದ್ದಾರೆ:ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲು ಶ್ರೀರಾಮನ ಮೂರ್ತಿಯನ್ನು ಮೂವರು ಕಲಾವಿದರು ಸ್ಪರ್ಧೆಯಿಂದ ಮಾಡಿಲ್ಲ. ಶ್ರದ್ಧೆಯಿಂದ ಮಾಡಿದ್ದಾರೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಸುದ್ದಿಗಾರರೊಡನೆ ಮಾತನಾಡಿದ ಅವರು, ರಾಮನ ಮೂರ್ತಿಯನ್ನು ಮೂವರು ಕಲಾವಿದರು ಕೆತ್ತಿದ್ದಾರೆ. ಈ ಮೂರ್ತಿಗಳನ್ನು ಅವರು ಸ್ಪರ್ಧೆಯಿಂದ ಮಾಡಿಲ್ಲ. ಬದಲಿಗೆ ಶ್ರದ್ಧೆಯಿಂದ ಮಾಡಿದ್ದಾರೆ ಎಂದರು.ಶ್ರೀರಾಮ ಎಲ್ಲರೂ ಇಷ್ಟಪಡುವ ವ್ಯಕ್ತಿ. ರಾಮಮಂದಿರವನ್ನು ದಕ್ಷಿಣ ಹಾಗೂ ಉತ್ತರ ಭಾರತದ ವಾಸ್ತುಶಿಲ್ಪದ ಸಮ್ಮಿಲನವಾಗಿ ರೂಪಿಸಲಾಗಿದೆ. ನಾನು ಅಯೋಧ್ಯೆಗೆ ಹೋದರೂ ರಾಮಮಂದಿರ ನೋಡಲು ಸಾಧ್ಯವಾಗಲಿಲ್ಲ. ರಾಮಮಂದಿರ ಪ್ರವೇಶಿಸಿದರೆ ರಾಮಾಯಣ, ಮಹಾಭಾರತದ ಸನ್ನಿವೇಶಗಳು ನೋಡಲು ಸಿಗುತ್ತವೆ. ಅಲ್ಲಿನ ಶೇ. 30ರಷ್ಟು ಕೆಲಸ ಮುಗಿದಿದೆ. ಶೇ.7೦ರಷ್ಟು ಕಾಮಗಾರಿ ಬಾಕಿ ಇದೆ. ಆದರೂ ಮಂದಿರ ಸುಂದರವಾಗಿದೆ ಎಂದರು.
ಅರುಣ್ ಯೋಗಿರಾಜ್ ಅದ್ಭುತ ಕಲಾವಿದ. ಅರುಣ್ ಗೂ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಅರುಣ್ ಜೆಎಸ್ಎಸ್ ಸಂಸ್ಥೆಯಲ್ಲೇ ಪ್ರಾಥಮಿಕ, ಪದವಿ ವ್ಯಾಸಂಗ ಮಾಡಿದ್ದಾರೆ. ಅರುಣ್ ಕೆತ್ತಿರುವ ಮೂರ್ತಿಗೆ ಜನಮನ್ನಣೆ ಸಿಗುತ್ತಿರುವುದು ಸಂತೋಷದ ಸಂಗತಿ ಎಂದು ಅವರು ಹೇಳಿದರು.