ಕನ್ನಡಪ್ರಭ ವಾರ್ತೆ ರಾಮನಗರ
ಕೃಷಿ ಆಧಾರಿತ ಕಿರು ಉದ್ದಿಮೆಗಳು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ. ಆದ್ದರಿಂದ ರೈತ ಕುಟುಂಬದ ಯುವಕರು ಉದ್ಯೋಗಕ್ಕಾಗಿ ಅಲೆದಾಡದೆ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಿ ಉದ್ಯಮಿಗಳಾಗುವಂತೆ ರಾಜ್ಯ ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಸಲಹೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ ಆಯೋಜಿಸಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪಿಎಂಎಫ್‌ಎಂಇ ಯೋಜನೆಯಡಿ ಪ್ರತಿ ಆಹಾರ ಸಂಸ್ಕರಣಾ ಉದ್ದಿಮೆಗೆ ಗರಿಷ್ಠ 15 ಲಕ್ಷ ರುಪಾಯಿ ಸಬ್ಸಿಡಿ ಕೇಂದ್ರ ಶೇ.60 ರಷ್ಟು ಮತ್ತು ರಾಜ್ಯ ಸರ್ಕಾರ ಶೇ.50ರ ಅನುಪಾತದಲ್ಲಿ ನೀಡಲಾಗುತ್ತಿದೆ. ಆದರೆ, ರಾಜ್ಯಸರ್ಕಾರ ಕಿರು ಉದ್ದಿಮೆ ನಡೆಸುವ ರೈತರಿಗೆ ದೊಡ್ಡ ಪ್ರಮಾಣದಲ್ಲಿಯೇ ಸಬ್ಸಿಡಿ ನೀಡುತ್ತಿದೆ. ಒಟ್ಟು 15 ಲಕ್ಷ ರು. ಸಬ್ಸಿಡಿಯಲ್ಲಿ 9 ಲಕ್ಷ ರು.ಗಳನ್ನು ರಾಜ್ಯ ಸರ್ಕಾರವೇ ಭರಿಸಿದರೆ, 6 ಲಕ್ಷ ರು.ಮಾತ್ರ ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಹೇಳಿದರು.206 ಕೋಟಿ ಅನುದಾನ ಲಭ್ಯ :
ಈಗ ರಾಜ್ಯದಲ್ಲಿ ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಕಿರು ಉದ್ದಿಮೆಯನ್ನು ಆರಂಭಿಸಲು ಹೆಚ್ಚಿನ ಅವಕಾಶವಿದ್ದು, ಪ್ರಸ್ತುತ ಇರುವ 206 ಕೋಟಿ ರು. ಅನುದಾನವನ್ನು ಬಳಕೆ ಮಾಡಿಕೊಳ್ಳಲು ಮುಂದಿನ ಮಾಚ್ 31ವರೆಗೆ ಅವಕಾಶವಿದೆ. ಒಂದು ವೇಳೆ ಇಂತಹ ಅವಕಾಶವನ್ನು ಬಳಕೆ ಮಾಡಿಕೊಳ್ಳಲು ವಿಫಲವಾದರೆ ಅನುದಾನ ವಾಪಾಸ್ ಹೋಗಲಿದೆ. ಈ ಹಿನ್ನೆಲೆಯಲ್ಲಿ ಯುವ ಸಮುದಾಯ ಮತ್ತು ಆಸಕ್ತರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದರ ಲಾಭವನ್ನು ಪಡೆದುಕೊಂಡು ಹೆಚ್ಚು ಹೆಚ್ಚು ಜನರು ಉದ್ದಿಮೆಗಳನ್ನು ಆರಂಭಿಸಬೇಕು ಎಂದು ಮನವಿ ಮಾಡಿದರು.ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 6500 ಮಂದಿ ತಲಾ 15 ಲಕ್ಷ ರು.ವರೆಗೂ ಸಬ್ಸಿಡಿಯನ್ನು ಪಡೆದು ಫಲಾನುಭವಿಗಳಾಗಿದ್ದಾರೆ. ಸುಮಾರು 200 ವಿವಿಧ ಉತ್ಪನ್ನಗಳನ್ನು ಸಿದ್ದಗೊಂಡು 500 ಕೋಟಿ ರು.ವರೆಗೂ ವ್ಯವಹಾರ ನಡೆಯುತ್ತಿದೆ. ಈ ವರ್ಷದಲ್ಲಿ 5 ಸಾವಿರ ಫಲಾನುಭವಿಗಳ ಗುರಿ ಹೊಂದಲಾಗಿದೆ ಎಂದು ಶಿವಪ್ರಕಾಶ್ ತಿಳಿಸಿದರು.
ಈ ಮೊದಲು ಒಂದು ಜಿಲ್ಲೆ ಒಂದು ಉತ್ಪನ್ನದಲ್ಲಿ ರಾಮನಗರದಿಂದ ತೆಂಗನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೀಗ ಯಾವುದೇ ಜಿಲ್ಲೆಗೆ ಇಂತಹುದ್ದೇ ಉತ್ಪನ್ನದ ಕಿರು ಉದ್ದಿಮೆ ಮಾಡಬೇಕು ಎನ್ನುವ ನಿಯಮವಿಲ್ಲ. ತಮಗೆ ಆಸಕ್ತಿ ಇರುವ ಉದ್ದಿಮೆ ಮಾಹಿತಿ ನೀಡಿದರೆ ಜಿಲ್ಲಾ ಸಂಪನ್ಮೂಲ ಅಧಿಕಾರಿ ನಿಮಗೆ ಕ್ರಿಯಾ ಯೋಜನೆ ಸಿದ್ದಪಡಿಸಿಕೊಡುವ ಹಂತದಿಂದ ಸಾಲ, ಸಬ್ಸಿಡಿ ಕೊಡಿಸುವ ಹಂತದವರೆಗು ನಿಮ್ಮ ನೆರವಿಗೆ ನಿಲ್ಲಲಿದ್ದಾರೆ ಎಂದು ಹೇಳಿದರು.ಅರ್ಜಿ ಸಲ್ಲಿಕೆಯಾದ 15 ದಿನಗಳ ಒಳಗೆ ವಿಲೇವಾರಿ ಮಾಡಿ ಸಾಲ ಮಂಜೂರು ಮಾಡಲು ಸೂಚನೆ ನೀಡಲಾಗಿದೆ. ನಂತರ 5 ತಿಂಗಳಲ್ಲಿ ಸಹಾಯಧನ ಬಿಡುಗಡೆ ಆಗಲಿದೆ. ಸಕಾರಣವಿಲ್ಲದೆ ಯಾವುದೇ ಅರ್ಜಿಯನ್ನು ವಿಲೇವಾರಿ ಮಾಡದೇ ಇಡಬಾರದು ಎನ್ನುವ ಕಟ್ಟುನಿಟ್ಟಿನಲ್ಲಿ ಸೂಚನೆ ನೀಡಲಾಗಿದೆ. ಪ್ರಸ್ತುತ ಸಾಲಿನಲ್ಲಿ 5 ಸಾವಿರ ಮಂದಿಗೆ ಸಾಲ ಸೌಲಭ್ಯ ದೊರೆಯುವಂತೆ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಮೊದಲು ಸಂತೆ, ಜಾತ್ರೆಗಳಲ್ಲಿ ಮಾರಾಟವಾಗುತ್ತಿದ್ದ ಉತ್ಪನ್ನಗಳು ಇಂದು ತಾಲೂಕು, ಜಿಲ್ಲೆ, ರಾಜ್ಯ, ದೇಶ ಹೊರದೇಶಗಳಿಗೆ ರಫ್ತಾಗುತ್ತಿದೆ. ಪ್ರಸ್ತುತ ಬೆಲ್ಲ, ಪೇಡ, ತುಪ್ಪ, ಜೇನುತುಪ್ಪ, ರಾಗಿ, ಅಕ್ಕಿ, ರಾಜಮುಡಿ ಅಕ್ಕಿ, ಹಪ್ಪಳ, ಉಪ್ಪಿನ ಕಾಯಿ ಸೇರಿದಂತೆ 200 ಬಗೆಯ ಪದಾರ್ಥಗಳು ಹೆಚ್ಚಾಗಿ ರಫ್ತು ಹೊಂದಿವೆ. ಬೆಲ್ಲ ಮತ್ತು ಗಾಣದ ಎಣ್ಣೆ ಹೆಚ್ಚಾಗಿ ಉತ್ತೇಜಿಸಬೇಕು.ಇವುಗಳು ಆರೋಗ್ಯಕ್ಕೆ ಒಳ್ಳೆಯದು, ರೈತರು ಉತ್ಪಾದಿಸುವ ಪದಾರ್ಥಗಳಿಗೆ ಉತ್ತೇಜನ ನೀಡಬೇಕು. ಉದ್ಯೋಗ ಹುಡುಕುತ್ತಿರುವ ಯುವ ರೈತರು ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆಯನ್ನು ಅಳವಡಿಸಿಕೊಂಡು ತಾವೇ ಖುದ್ದು ಉದ್ಯೋಗ ಸೃಷ್ಠಿಸಬಹುದು ಮತ್ತು ಹೆಣ್ಣು ಮಕ್ಕಳು ರೈತೋದ್ಯಮಕ್ಕೆ ಬರಬೇಕು. ಆಗ ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಸಿಕ್ಕಿ ರೈತರು ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯವಾಗುತ್ತದೆ ಎಂದು ಶಿವಪ್ರಕಾಶ್ ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು ಮಾತನಾಡಿ, ರೈತರು ಆರ್ಥಿಕವಾಗಿ ಬಲಗೊಳ್ಳಲು ಉದ್ಯಮಿಗಳಾಗಬೇಕು. ಈ ಯೋಜನೆಯಡಿ 15 ಲಕ್ಷ ರು.ಗಳವರೆಗೆ ಸಹಾಯಧನ ದೊರಕಲಿದೆ. ಆದ್ದರಿಂದ ರೈತರು ಈ ಯೋಜನೆಯ ಪ್ರಯೋಜನೆ ಪಡೆದುಕೊಳ್ಳಬೇಕು, ಜಿಲ್ಲೆಯಲ್ಲಿ ಈ ಯೋಜನೆಯಡಿ 80 ಫಲಾನುಭವಿಗಳಿದ್ದು ಇನ್ನು ಹೆಚ್ಚಿನ ಜನರು ಇದರ ಪ್ರಯೋಜನ ಪಡೆದುಕೊಂಡು, ಆರ್ಥಿಕವಾಗಿ ಮುಂದೆ ಬರಲು ಪ್ರಯತ್ನಿಸಬೇಕು ಎಂದರು.ಕೆಪೆಕ್ ನ ತಾಂತ್ರಿಕ ಸಹಾಯಕರಾದ ಪನ್ನಾಗ ಅವರು ಪಿಎಂಎಫ್‌ಎಂಇ ಯೋಜನೆಯ ಕುರಿತು ಮಾಹಿತಿ ನೀಡಿದರು.
ರೈತರ ಆಕ್ರೋಶ ತಣಿಸಿದ ಶಿವಪ್ರಕಾಶ್:ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಗೈರು ಹಾಜರಾಗಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟವರೇ ಬಾರದಿದ್ದರೆ ಏಕೆ ಆಯೋಜನೆ ಮಾಡಬೇಕು. ಅವರು ಬಂದ ನಂತರವೇ ಸಭೆ ನಡೆಸೋಣ ಈಗ ರದ್ದು ಮಾಡಿ ಎಂದು ಕೃಷಿ ಇಲಾಖೆ ಅಧಿಕಾರಿಗಳನ್ನು ರೈತ ಮುಖಂಡರು ತರಾಟೆ ತೆಗೆದುಕೊಂಡರು.ಈ ವೇಳೆ ಸಭೆಗೆ ಆಗಮಿಸಿದ ರಾಜ್ಯ ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್, ತುರ್ತು ಕ್ಯಾಬಿನೆಟ್ ಸಭೆ ಕಾರಣ ಜಿಲ್ಲಾ ಉಸ್ತುವಾರಿ ಸಚಿವರು ಬರಲು ಆಗಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿ, ನಂತರ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಗೈರಾಗಿದ್ದಕ್ಕೆ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಹಿಂದೆ ಪಡೆದ ಸಾಲಗಳಿಗೆ ಇನ್ನೂ ಸಬ್ಸಿಡಿ ಬಿಡುಗಡೆ ಮಾಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದಾಗ ಶಿವಪ್ರಕಾಶ್ ರವರು, ಮೊನ್ನೆ ತಾನೆ 25 ಕೋಟಿ ರುಪಾಯಿ ಬಾಕಿ ಸಬ್ಸಿಡಿ ಹಣವನ್ನು ಮಂಜೂರು ಮಾಡಲಾಗಿದೆ, ಮುಂದೆಯೂ ಸಹ ಸಬ್ಸಿಡಿ ಹಣ ವಿಳಂಭವಾಗದಂತೆ ಕ್ರಮವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.ಸಾಲದ ಅವಧಿ ಮುಗಿಯುತ್ತಾ ಬಂದಿದ್ದರೂ ಇನ್ನು ನಮಗೆ ಸಬ್ಸಿಡಿ ಹಣ ಬಿಡುಗಡೆಯಾಗಿಲ್ಲ, ಈಗಲೂ ನಾವು ಬಡ್ಡಿ ಕಟ್ಟುತ್ತಿದ್ದೇವೆ. ಸಬ್ಸಿಡಿ ಕೊಟ್ಟರಷ್ಟೇ ನಮ್ಮ ಯೋಜನೆಗಳನ್ನು ಮುಂದುವರಿಸಲು ಸಾಧ್ಯ. ಆದರೆ ಇದ್ಯಾವುದರ ಬಗ್ಗೆಯೂ ಅರಿವಿಲ್ಲದ ಅಧಿಕಾರಿಗಳು ನಮಗೆ ಸ್ಪಂದಿಸುತ್ತಿಲ್ಲ. ನಮಗೆ ನಿಮ್ಮ ಸಬ್ಸಿಡಿ ಬೇಡ, ನಾವು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಕೊಟ್ಟರೆ ನಿಮಗೆ ತೆರಿಗೆಯನ್ನೂ ಕಟ್ಟುತ್ತೇವೆ ಎಂದು ರೈತರು ಹೇಳಿದರು.
ಅಲ್ಲದೆ, ಬ್ಯಾಂಕ್ ಅಧಿಕಾರಿಗಳ ವಿರುದ್ಧವೂ ತಮ್ಮ ಆಕ್ರೋಶ ಹೊರಹಾಕಿದ ರೈತರು, ಸಬ್ಸಿಡಿ ಸಾಲ ಎಂದರೆ ರೈತರನ್ನು ಬ್ಯಾಂಕ್ ಒಳಗೂ ಅಧಿಕಾರಿಗಳು ಬಿಟ್ಟುಕೊಳ್ಳುವುದಿಲ್ಲ. ಇದರ ಜೊತೆಗೆ ಕನ್ನಡವನ್ನೂ ಮಾತನಾಡಲ್ಲ ಎಂದು ಟೀಕಿಸಿದರು. ಇದಕ್ಕೆ ಶಿವಪ್ರಕಾಶ್ ರವರು, ಯಾವುದೇ ಕಾರಣಕ್ಕೂ ರೈತರಿಗೆ ಸಾಲ ನೀಡಲಾಗುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿ ಹೇಳುವಂತೆಯೇ ಇಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಬ್ಯಾಂಕ್‌ನ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಈ ಸಂಬಂಧ ಕಟ್ಟು ನಿಟ್ಟಿನ ಸೂಚನೆಯೂ ಸಹ ಅವರಿಂದ ಬಂದಿದೆ ಎಂದು ತಿಳಿಸಿದರು.ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷ ನಟರಾಜು ಗಾಣಕಲ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎನ್. ರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಅಂಬಿಕಾ, ಸಹಾಯಕ ನಿರ್ದೇಶಕಿ ಉಷಾ, ರೈತ ಮುಖಂಡರಾದ ಪುಟ್ಟಸ್ವಾಮಿ, ಪ್ರೇಮ್ , ನಿಂಗಪ್ಪ, ಕೃಷಿಕ ಸಮಾಜ ಅಧ್ಯಕ್ಷ ಗೋಪಾಲ್ ಸೇರಿದಂತೆ ಅನೇಕ ರೈತ ಮುಖಂಡರು, ರೈತರು, ರೈತ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಉಪಸ್ಥಿತರಿದ್ದರು.
‘ರೈತರು ತಾವು ಬೆಳೆದ ಬೆಳೆಯನ್ನು ತಕ್ಷಣಕ್ಕೆ ಮಾರದೆ ಅದನ್ನು ಸಂಸ್ಕರಣೆ ಮಾಡಿ ಬ್ರ್ಯಾಂಡ್ ರೂಪ ಕೊಡಬೇಕು. ವೈವಿಧ್ಯಮಯ, ನಾವೀನ್ಯತೆಯ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ನೀಡಿದರೆ ಅಧಿಕ ಲಾಭ ಗಳಿಸಬಹುದು. ಬ್ಯಾಂಕಿನಿಂದ ಸಿಗುವ ಸಾಲಸೌಲಭ್ಯವನ್ನು ಬಳಸಿಕೊಂಡು ಜಿಲ್ಲೆಯ ಪ್ರತಿಯೊಂದು ಕುಟುಂಬವೂ ಸ್ವಾವಂಬಿಯಾಗಿ ಬದುಕಬೇಕು. ಅಲ್ಲದೆ, ಹಲವಾರು ಜನರಿಗೆ ಉದ್ಯೋಗದಾತರಾಗಬಹುದು’.- ಸಿ.ಎನ್.ಶಿವಪ್ರಕಾಶ್, ವ್ಯವಸ್ಥಾಪಕ ನಿರ್ದೇಶಕರು, ರಾಜ್ಯ ಕೆಪೆಕ್ ಸಂಸ್ಥೆ