ಯುವ ಜನತೆ ಒಂದು ರಾಷ್ಟ್ರದ ಭರವಸೆಯ ಪ್ರತೀಕ-ಗೊಲ್ಲರ

KannadaprabhaNewsNetwork | Published : Jun 4, 2024 12:30 AM

ಸಾರಾಂಶ

ಬಿಸಿ ರಕ್ತದ ಯುವ ಪೀಳಿಗೆ ಎಚ್ಚೆತ್ತಿದೆ, ಎಂತಹ ಕಠಿಣ ಸಮಸ್ಯೆಗಳಿಗೂ ಸುಲಭ ಪರಿಹಾರ ಸಾಧ್ಯ. ಒಂದು ರಾಷ್ಟ್ರದ ಉತ್ತಮ ಶಕ್ತಿ, ಭರವಸೆಯ ಪ್ರತೀಕ ಆ ದೇಶದ ಯುವ ಜನಾಂಗ. ಯುವಜನರ ಭವಿಷ್ಯವನ್ನು ನಿರ್ಮಿಸಲು ಆಗದಿದ್ದರೂ ಭವಿಷ್ಯವನ್ನು ನಿರ್ಮಿಸಲು ಯುವಜನರನ್ನು ಸಜ್ಜುಗೊಳಿಸಬೇಕಿದೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.

ಹಾವೇರಿ: ಬಿಸಿ ರಕ್ತದ ಯುವ ಪೀಳಿಗೆ ಎಚ್ಚೆತ್ತಿದೆ, ಎಂತಹ ಕಠಿಣ ಸಮಸ್ಯೆಗಳಿಗೂ ಸುಲಭ ಪರಿಹಾರ ಸಾಧ್ಯ. ಒಂದು ರಾಷ್ಟ್ರದ ಉತ್ತಮ ಶಕ್ತಿ, ಭರವಸೆಯ ಪ್ರತೀಕ ಆ ದೇಶದ ಯುವ ಜನಾಂಗ. ಯುವಜನರ ಭವಿಷ್ಯವನ್ನು ನಿರ್ಮಿಸಲು ಆಗದಿದ್ದರೂ ಭವಿಷ್ಯವನ್ನು ನಿರ್ಮಿಸಲು ಯುವಜನರನ್ನು ಸಜ್ಜುಗೊಳಿಸಬೇಕಿದೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.ತಾಲೂಕಿನ ಅಗಡಿ ಗ್ರಾಮದಲ್ಲಿ ಗಾಂಧಿಪುರದ ಸರ್ಕಾರಿ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದಿರುವ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಘಟಕ-೨ರ ಯುವಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಯೌವ್ವನದಲ್ಲಿ ಉತ್ಸಾಹವಿದೆ, ಧೈರ್ಯವಿದೆ, ದೈಹಿಕ ಬಲವಿದೆ, ಏನನ್ನಾದರೂ ಸಾಧಿಸುವ ಛಲವಿದೆ, ಈ ಶಕ್ತಿಯನ್ನು ರಚನಾತ್ಮಕ ಕಾರ್ಯಗಳಿಗೆ ಉಪಯೋಗಿಸಿದರೆ ಅಭಿವೃದ್ಧಿ ಸಮೃದ್ಧಿ, ಇಲ್ಲವಾದರೆ ವಿಪರ್ಯಾಸ. ಯಾರು ಕೇವಲ ತಮಗೋಸ್ಕರ ಬದುಕುತ್ತಾರೋ ಅವರನ್ನು ಪ್ರಪಂಚ ಮರೆತುಬಿಡುತ್ತದೆ. ಯಾರು ಮತ್ತೊಬ್ಬರಿಗೋಸ್ಕರ ಬದುಕುತ್ತಾರೋ ಅವರನ್ನು ಪ್ರಪಂಚ ಎಂದಿಗೂ ಮರೆಯುವುದಿಲ್ಲ. ಸಮಾಜ ಸೇವೆ ಪ್ರದರ್ಶನಕ್ಕೆ ಅಲ್ಲ, ಆತ್ಮವಿಶ್ವಾಸವಿಕಾಸಕ್ಕಾಗಿ ಎಂದರು. ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗೆಣ್ಣಿ ಮಾತನಾಡಿ, ಒಂದು ಕಾಲದಲ್ಲಿ ಕೇವಲ ಬಡವರ ಆಹಾರ ಸಿರಿಧಾನ್ಯಗಳಾಗಿದ್ದವು. ಆದರೆ ಈಗ ಅದರ ಮಹತ್ವ ತಿಳಿದು ಉತ್ತಮ ಆರೋಗ್ಯಕ್ಕಾಗಿ ಅವುಗಳನ್ನು ಸಿರಿವಂತರು ಬಳಸುತ್ತಿದ್ದಾರೆ. ಯುವಕರಿಗೆ ಶ್ರಮದ ದಿನದ ಮಹತ್ವ ತಿಳಿಸಬೇಕಿದೆ ಎಂದರು.ಪ್ರೊ. ಎಂ. ಎಚ್. ಹೆಬ್ಬಾಳ ಮಾತನಾಡಿ, ಶೇ.೬೦ರಷ್ಟು ಯುವಕರಿಂದ ಕೂಡಿರುವ ನಮ್ಮ ದೇಶದ ಯುವಕರಿಗೆ ಸೂಕ್ತ ಮಾರ್ಗದರ್ಶನ ಕೊರತೆ ಇದೆ. ಹೊಸತನ ಆಕರ್ಷಣೆಗೆ ಒಳಗಾದ ಯವ್ವನ ಅನೇಕ ವೇಳೆ ವಿಕೃತಿಗೆ ಬಲಿಯಾಗುವುದುಂಟು. ಈ ದೃಷ್ಟಿಯಿಂದ ಯುವ ಜನಾಂಗಕ್ಕೆ ಜೀವನ ಪ್ರಜ್ಞೆಯ ಅಗತ್ಯವಿದೆ ಎಂದರು. ಮುಖ್ಯಶಿಕ್ಷಕ ಶಿವಮೂರ್ತೆಪ್ಪ ಪಟ್ಟಣಶೆಟ್ಟಿ ಮಾತನಾಡಿ, ಯುವಕರು ಶಿಸ್ತಿನ ಸಿಪಾಯಿಗಳಾಗಬೇಕು, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ವ್ಯಕ್ತಿತ್ವ ವಿಕಾಸನ ಮಾಡಿಕೊಳ್ಳಬೇಕು ಎಂದರು. ಜಯಶ್ರೀ ತಿರುಕಣ್ಣವರ್ ತಮ್ಮ ಅನಿಸಿಕೆ ಹಂಚಿಕೊಂಡರು. ಈಶಪ್ಪ ಭೀಮಕ್ಕನವರ್, ವೈ ಮದ್ದಾನಸ್ವಾಮಿ, ಶಂಕ್ರಪ್ಪ ಅಗಸನಕಟ್ಟಿ, ರಮೇಶ್ ನಾಯಕ್, ಸಂತೋಷ್, ರಾಜು ಪಿ ಉಪಸ್ಥಿತಿರಿದ್ದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ವೀಣಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮಹೇಶ್ ಅಳಲಗೇರಿ ಸ್ವಾಗತಿಸಿದರು. ದೀಪಾ ಲಮಾಣಿ ಅತಿಥಿಗಳ ಪರಿಚಯಿಸಿದರು. ಶ್ವೇತಾ ಬ್ಯಾಡಗಿ ನಿರೂಪಿಸಿದರು. ಅಭಿಷೇಕ ಹಡಪದ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

Share this article