ಬೀದಿ ನಾಯಿಗಳ ದಾಳಿಯಿಂದ ಯುವತಿ ಮಹಾದೇವಿ (20) ಸಾವನಪ್ಪಿರುವ ಘಟನೆಯಿಂದ ಎಚ್ಚೆತ್ತುಕೊಂಡ ನಗರಸಭೆ ಆಡಳಿತ ಗುರುವಾರ ಕಾರ್ಯಾಚರಣೆ ನಡೆಸಿ ನಾಯಿಗಳನ್ನು ಹಿಡಿಯುವ ಕೆಲಸಕ್ಕೆ ಮುಂದಾಗಿದೆ.
ರಾಯಚೂರು : ಬೀದಿ ನಾಯಿಗಳ ದಾಳಿಯಿಂದ ಯುವತಿ ಮಹಾದೇವಿ (20) ಸಾವನಪ್ಪಿರುವ ಘಟನೆಯಿಂದ ಎಚ್ಚೆತ್ತುಕೊಂಡ ನಗರಸಭೆ ಆಡಳಿತ ಗುರುವಾರ ಕಾರ್ಯಾಚರಣೆ ನಡೆಸಿ ನಾಯಿಗಳನ್ನು ಹಿಡಿಯುವ ಕೆಲಸಕ್ಕೆ ಮುಂದಾಗಿದೆ.
ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದ್ದು, ಅಲ್ಲಲ್ಲಿ ಘಟಿಸುತ್ತಿದ್ದ ಮಕ್ಕಳ ಮೇಲಿನ ದಾಳಿಯ ಪ್ರಕರಣಗಳ ಜೊತೆಗೆ ಯುವತಿ ಮಹಾದೇವಿಯ ಸಾವಿನ ಘಟನೆಯಿಂದ ಜಿಲ್ಲಾಡಳಿತ ಮತ್ತು ನಗರಸಭೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಇದರಿಂದ ಎಚ್ಚೆತ್ತ ನಗರಸಭೆ ಅಧಿಕಾರಿ, ಸಿಬ್ಬಂದಿ ನಗರದ ವಿವಿಧ ಬಡಾವಣೆಗಳಲ್ಲಿ ಕಾರ್ಯಾಚರಣೆ ನಡೆಸಿ ಬೀದಿ ನಾಯಿಗಳನ್ನು ಹಿಡಿಯುತ್ತಿದ್ದಾರೆ.
ಕಳೆದ ಡಿ.7ರಂದು ಬೆಳಗ್ಗೆ ಮನೆಯ ಮುಂದೆ ನಿಂತಾಗ ಬೀದಿ ನಾಯಿಗಳ ದಂಡು ಜಗಳ ಆಡುತ್ತಾ ಬಂದು ಯುವತಿಯ ಮೇಲೆ ದಾಳಿ ಮಾಡಿದ ಪರಿಣಾಮ ಆಕೆ ಕೋಮಾಕ್ಕೆ ಹೋಗಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮಹಾದೇವಿ ಮೃತಪಟ್ಟಿದ್ದಾರೆ. ನಗರದಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿ ಹಾಗೂ ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.
ಕಳೆದ ಎರೆಡು ವರ್ಷಗಳಿಂದ ನಗರದಲ್ಲಿ ಅನೇಕ ಚಿಕ್ಕ ಮಕ್ಕಳು, ಮಹಿಳೆಯರು ಮೇಲೆ ಬೀದಿ ನಾಯಿಗಳು ಕಚ್ಚಿದ ಪರಿಣಾಮ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಮಡ್ಡಿಪೇಟೆ ಬಡಾವಣೆಯಲ್ಲಿ ಯುವತಿ ಸಾವನ್ನಿಪ್ಪಿದ್ದು, ದುರಾದೃಷ್ಠಕರ ಸಂಗತಿ. ಈ ಸಾವಿಗೆ ನಗರಸಭೆ ಆಯುಕ್ತರ ಆಡಳಿತ ವಿಫಲತೆಯೇ ಕಾರಣವಾಗಿದೆ.
ಯುವತಿಯ ಸಾವಿನ ಬಳಿಕವಾದರೂ ಪೌರಾಯುಕ್ತ ಗುರುಸಿದ್ದಯ್ಯನವರು ಕುಂಭಕರಣ ನಿದ್ದೆಯಿಂದ ಹೊರಬರಲಿ ಎಂದು ಸಾಮಾಜಿಕ ಕಾರ್ಯಕರ್ತ ಅಂಬಾಜಿ ರಾವ್ ಒತ್ತಾಯಿಸಿದ್ದಾರೆ.
ಬೀದಿ ನಾಯಿಗಳ ದಾಳಿಗೆ ಅಮಾಯಕ ಬಡ ಜೀವವೊಂದು ಬಲಿಯಾಗಿರುವುದನ್ನು ನಗರಸಭೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹಾಗೂ ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು ಈಗಲಾದರೂ ಎಚ್ಚೆತ್ತು ಸಾರ್ವಜನಕರ ರಕ್ಷಣೆಗೆ ಮುಂದಾಗಬೇಕು ಎಂದು ರೈಲ್ವೆ ಮಂಡಳಿ ಸಲಹಾ ಸಮಿತಿ ಮಾಜಿ ಸದಸ್ಯ ಬಾಬುರಾವ್ ಆಗ್ರಹಿಸಿದ್ದಾರೆ.
ಯುವತಿ ಕುಟುಂಬಕ್ಕೆ ಪರಿಹಾರ,ಶೀಘ್ರ ಸಭೆ
ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟ ಯುವತಿ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ತಿಳಿಸಿದ್ದಾರೆ.
ಈ ಕುರಿತು ನಗರಸಭೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ಪರಿಹಾರ ಕಲ್ಪಿಸಿಕೊಡುವ ಪ್ರಯತ್ನ ಮಾಡಲಾಗುವುದು. ಅಲ್ಲದೇ ನಗರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಈ ಮುಂಚೆ ಕಾರ್ಯಾಚರಣೆ ನಡೆಸಿ ಬೀದಿ ನಾಯಿಗಳನ್ನು ಹಿಡಿದು ದೂರದ ಪ್ರದೇಶಗಳಿಗೆ ಕಳುಹಿಸಿಕೊಟ್ಟರು ಮತ್ತೆ ಅವರು ನಗರಕ್ಕೆ ಬಂದಿವೆ ಎನ್ನುವ ಮಾಹಿತಿಯಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಲ್ಲಿ ನಡೆಸಿದ ಕಾರ್ಯಾಚರಣೆ ಪರಿಣಾಮಕಾರಿಯಾಗಿಲ್ಲ ಎನ್ನುವ ದೂರುಗಳು ಬಂದಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಶೀಘ್ರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಡಿಸಿ ಅವರು ತಿಳಿಸಿದ್ದಾರೆ.
ತಿಂಗಳ ಹಿಂದೆ ನಾಯಿಗಳ ದಾಳಿಯಿಂದ ಬಾಲಕಿ ಸಾವು
ತಾಲೂಕಿನ ಚಂದ್ರಬಂಡಾ ಗ್ರಾಪಂ ವ್ಯಾಪ್ತಿಯ ಕಟ್ಲಟ್ಕೂರು ಗ್ರಾಮದಲ್ಲಿ ತಿಂಗಳ ಹಿಂದೆಯೇ ನಾಯಿಗಳ ದಾಳಿಯಿಂದ ಬಾಲಕಿ ಸರೀತಾ (8) ಸಾವನಪ್ಪಿದ್ದಂತ ಘಟನೆ ಇದೀಗ ಬೆಳಕಿಗೆ ಬಂದಿದೆ. ಬಾಲಕಿ ಸರೀತಾ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ನಾಯಿಗಳ ಹಿಂಡು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿತ್ತು. ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಳು. ಇದೀಗ ಬೀದಿನಾಯಿ ದಾಳಿಯಲ್ಲಿ ಯುವತಿ ಸಾವನಪ್ಪಿರುವ ಘಟನೆ ನಡೆಯುತ್ತಿದ್ದಂತೆ ಬಾಲಕಿ ಪ್ರಕರಣವು ಮುನ್ನೋಟಕ್ಕೆ ಬಂದಿದ್ದು, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಜಿಪಂ ಸೂಕ್ತ ಕ್ರಮ ವಹಿಸಬೇಕು ಎನ್ನುವ ಒತ್ತಾಯಗಳು ಎಲ್ಲೆಡೆ ಕೇಳಿಬರುತ್ತಿವೆ.