ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯುವಜನೋತ್ಸವ ಬಲಿ

KannadaprabhaNewsNetwork |  
Published : Dec 03, 2024, 12:32 AM IST
ಬಳ್ಳಾರಿಯ ಬಿಡಿಎಎ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಯುವಜನೋತ್ಸವದಲ್ಲಿ ಬೆರಳೆಣಿಕೆಯಷ್ಟು ಯುವಕರು ಪಾಲ್ಗೊಂಡಿರಲಿಲ್ಲ.  | Kannada Prabha

ಸಾರಾಂಶ

ಯಾವುದೇ ಪೂರ್ವ ತಯಾರಿಯಿಲ್ಲದೇ ನಡೆದ ಉತ್ಸವದ ವಿವಿಧ ಸ್ಪರ್ಧೆಗಳಲ್ಲಿ ಬೆರಳಿಕೆಯಷ್ಟು ಯುವಕರಷ್ಟೇ ಪಾಲ್ಗೊಂಡಿದ್ದರು.

ಬಳ್ಳಾರಿ: ಯುವ ಜನಾಂಗವನ್ನು ಪ್ರೇರೇಪಿಸುವ, ರಾಷ್ಟ್ರ ನಿರ್ಮಾಣದ ಕಡೆಗೆ ಯುವಕರನ್ನು ಏಕೀಕರಿಸುವ ಉದ್ದೇಶದಿಂದ ನಗರದ ಬಿಡಿಎಎ ಮೈದಾನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಕ್ರೀಡಾ ಇಲಾಖೆ, ನೆಹರು ಯುವಕೇಂದ್ರದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಯಿತು. ಬಳ್ಳಾರಿಯಲ್ಲಿ ಯಾರು ಏನು ಮಾಡಿದರೂ ಕೇಳೋರಿಲ್ಲ. ಅಧಿಕಾರಿಗಳು ತಾವು ಆಡಿದ್ದೇ ಆಟ ಎಂಬುದಕ್ಕೆ ಯುವಜನೋತ್ಸವದ ಅವ್ಯವಸ್ಥೆ ಸಾಕ್ಷೀಕರಿಸಿದಂತಿತ್ತು.

ಯಾವುದೇ ಪೂರ್ವ ತಯಾರಿಯಿಲ್ಲದೇ ನಡೆದ ಉತ್ಸವದ ವಿವಿಧ ಸ್ಪರ್ಧೆಗಳಲ್ಲಿ ಬೆರಳಿಕೆಯಷ್ಟು ಯುವಕರಷ್ಟೇ ಪಾಲ್ಗೊಂಡಿದ್ದರು. ಬೆಳಗ್ಗೆ 9.30ಕ್ಕೆ ಉದ್ಘಾಟನೆಗೊಳ್ಳಬೇಕಿದ್ದ ಯುವಜನೋತ್ಸವ 11.30 ಸಮಯ ದಾಟಿದರೂ ಚಾಲನೆ ಸಿಗಲಿಲ್ಲ. ಪ್ರೇಕ್ಷಕರ ಕೊರತೆ ನೀಗಿಸಲು ನಗರದ ಮುನ್ಸಿಪಲ್ ಕಾಲೇಜು, ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳನ್ನು ಕರೆತರಲಾಯಿತು.

ಬೆಳಿಗ್ಗೆ 9ಗಂಟೆಯಿಂದ ಸಭಾಂಗಣದಲ್ಲಿ ಹಾಜರಿದ್ದ ನಿರ್ಣಾಯಕರಿಗೆ 11.30 ಸಮಯವಾದರೂ ಅವರ ಕೆಲಸ ಏನು ? ಎಂಬುದು ಗೊತ್ತಿರಲಿಲ್ಲ. ಯಾವ ವಿಭಾಗಕ್ಕೆ ನಿರ್ಣಾಯಕರಾಗಿ ನೇಮಿಸಲಾಗಿದೆ. ಸ್ಪರ್ಧೆಗಳು ಶುರುಗೊಳ್ಳುವುದು ಯಾವಾಗ ? ಎಂಬಿತ್ಯಾದಿ ಯಾವುದೇ ಮಾಹಿತಿ ಇಲ್ಲದೆ ಕುಳಿತಿದ್ದರು.

ಬಳ್ಳಾರಿ ನಗರಕ್ಕೆ ಸೀಮಿತ ಜಿಲ್ಲಾ ಉತ್ಸವ:

ಜಿಲ್ಲಾ ಮಟ್ಟದ ಯುವಜನೋತ್ಸವ ನಗರಕ್ಕಷ್ಟೇ ಸೀಮಿತಗೊಳಿಸಿದಂತಿತ್ತು. ಬೆಳಗ್ಗೆ 11.30 ಸಮಯ ದಾಟಿದರೂ ಬರೀ 62 ಜನರಷ್ಟೇ ನೋಂದಣಿಯಾಗಿದ್ದರು. ಬಳ್ಳಾರಿ ನಗರದ ಕೆಲ ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ಸ್ಪರ್ಧೆಯಲ್ಲಿ ಕಾಣಿಸಿಕೊಂಡರು. ಜಾನಪದ ನೃತ್ಯ, ಜಾನಪದಗೀತೆ, ಕವಿತೆ ಬರೆಯುವುದು, ಕಥೆ ಬರೆಯುವುದು, ಚಿತ್ರಕಲೆ, ಗುಡಿಕೈಗಾರಿಕೆ ಕಲಾ ಪ್ರಕಾರ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಆದರೆ, ನಿರ್ದಿಷ್ಟ ಪ್ರಕಾರಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆ ಬೆರಳೆಣಿಕೆಯಷ್ಟಿತ್ತು.

ಉತ್ಸವದ ಸ್ಪರ್ಧಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕೆಲ ಯುವಕ-ಯುವತಿಯರು ಅಲ್ಲಿನ ಅವ್ಯವಸ್ಥೆ ಕಂಡು ವಾಪಸ್ ಆಗುತ್ತಿರುವ ದೃಶ್ಯ ಕಂಡು ಬಂತು. ಜಿಲ್ಲಾಮಟ್ಟದ ಉತ್ಸವದ ಮಾಹಿತಿಯೇ ಇಲ್ಲ. ಬೆಳಗ್ಗೆ ಕಾಲೇಜಿಗೆ ಬಂದು ಹೇಳಿದ್ದಾರೆ. ನಾವು ಯಾವುದೇ ಪೂರ್ವ ತಯಾರಿ ಇಲ್ಲದೇ ಬಂದಿದ್ದೇವೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ ? ಎಂದು ಕೆಲ ವಿದ್ಯಾರ್ಥಿಗಳು ಪ್ರಶ್ನಿಸಿದರು.

ನಮ್ಮನ್ನು ನಿರ್ಣಾಯಕರಾಗಿ ಬನ್ನಿ ಎಂದು ಕರೆದಿದ್ದಾರೆ. ಆದರೆ, ಒಂದೇ ಒಂದು ಮಾಹಿತಿ ನೀಡುತ್ತಿಲ್ಲ. ಸುಮ್ಮನೆ ಕೂಡಿಸಿದ್ದಾರೆ. ಗ್ರೂಫ್ ಡ್ಯಾನ್ಸ್‌ನಲ್ಲಿ ಬರೀ ಎರಡು ತಂಡಗಳು ಮಾತ್ರ ಭಾಗವಹಿಸಿವೆ. ಹಾಡುಗಾರಿಕೆ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ನಿರ್ಣಾಯಕರಾಗಿ ಭಾಗವಹಿಸಿದ್ದ ಸತ್ಯಂ ಬಿಎಡ್ ಕಾಲೇಜಿನ ಪ್ರಾಂಶುಪಾಲ ಅಶ್ವರಾಮು ಕನ್ನಡಪ್ರಭಕ್ಕೆ ತಿಳಿಸಿದರು.

ಯುವಜನೋತ್ಸವದ ಅವ್ಯವಸ್ಥೆ ಕಂಡ ಮಹಾನಗರ ಪಾಲಿಕೆ ಸದಸ್ಯ ಹಾಗೂ ರಾಜ್ಯಯುವ ಪ್ರಶಸ್ತಿ ಪುರಸ್ಕೃತ ಪಿ.ಗಾದೆಪ್ಪ ಕ್ರೀಡಾ ಇಲಾಖೆ ಅಧಿಕಾರಿ ಕೆ.ಗ್ರೇಸಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಬೆಳಿಗ್ಗೆ 9ಗಂಟೆಯಿಂದ ಬಂದು ಕುಳಿತಿದ್ದೇವೆ. ನಮ್ಮ ಕೆಲಸ ಏನು ಅಂತಲೂ ಹೇಳಿಲ್ಲ. ನಿರ್ಣಾಕರು ಎಂದು ಕರೆಸಿ ನಮಗೆ ಯಾವ ಮಾಹಿತಿ ನೀಡುತ್ತಿಲ್ಲ ಎನ್ನುತ್ತಾರೆ ಲೇಖಕ, ನಿವೃತ್ತ ಶಿಕ್ಷಕ ಕೆ.ಬಿ.ಸಿದ್ದಲಿಂಗಪ್ಪ.

ಜಿಲ್ಲಾ ಯುವ ಜನೋತ್ಸವದ ಬಗ್ಗೆ ಎಲ್ಲೂ ಪ್ರಚಾರವಿಲ್ಲ. ಕಾಟಾಚಾರಕ್ಕೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದರಿಂದ ಯುವಜನೋತ್ಸವದ ಮುಖ್ಯ ಉದ್ದೇಶವೇ ವಿಮುಖವಾದಂತಾಗಿದೆ. ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕ್ರಮ ವಹಿಸಬೇಕು ಎನ್ನುತ್ತಾರೆ ಸಂಘಟಕಿ ಸುಮಾರೆಡ್ಡಿ.

ಎಲ್ಲ ಕಾಲೇಜುಗಳಿಗೆ ತಿಳಿಸಿದ್ದೇವೆ. ಪ್ರಚಾರ ಮಾಡಿದ್ದೇವೆ. ಆದರೆ, ಯುವಕರು ಬಂದಿಲ್ಲ. ನಾವೇನು ಮಾಡಬೇಕು? ಯುವಕರಿಗೆ ಯುವ ಜನೋತ್ಸವದಲ್ಲಿ ಪಾಲ್ಗೊಳ್ಳಲು ಆಸಕ್ತಿಯಿಲ್ಲ ಎನ್ನುತ್ತಾರೆ ಸಹಾಯಕ ನಿರ್ದೇಶಕ ಕೆ.ಗ್ರೇಸಿ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ