ದೇಶದ ಅಭಿವೃದ್ಧಿಗೆ ಯುವ ಜನತೆಯೇ ಆಧಾರ ಸ್ತಂಭ: ಡಾ.ಗೋಪಾಲಕೃಷ್ಣ

KannadaprabhaNewsNetwork | Published : Mar 14, 2024 2:01 AM

ಸಾರಾಂಶ

ಚಿಕ್ಕಮಗಳೂರಿನ ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮವನ್ನು ಜಿಪಂ ಸಿಇಓ ಡಾ. ಗೋಪಾಲಕೃಷ್ಣ ಅವರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದೇಶದ ಅಭಿವೃದ್ಧಿಗೆ ಯುವ ಜನತೆಯೇ ಆಧಾರ ಸ್ತಂಭ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಹೇಳಿದರು. ನಗರದ ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುವ ಜನತೆ, ದೇಶದ ಸಂಪತ್ತು ದೇಶದ ಅಭಿವೃದ್ಧಿಯಲ್ಲಿ ಆಧಾರ ಸ್ತಂಭವಾಗಿದ್ದಾರೆ. ವಿದ್ಯಾರ್ಥಿ ದಿನಗಳಲ್ಲಿ ದೇಶಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಆದರ್ಶ, ವಿಚಾರಧಾರೆ ಮೈಗೂಡಿಸಿಕೊಂಡು ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದರು.ಸಂವಿಧಾನದ ವಿಚಾರ ಅರಿತು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಬೇಕು, ಯುವಶಕ್ತಿಯು ಅಣುಶಕ್ತಿ ಇದ್ದಂತೆ, ಅಷ್ಟು ಶ್ರೇಷ್ಠತೆ ಹೊಂದಿದೆ ಎಂದ ಅವರು, ತಮ್ಮ ಶಕ್ತಿಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ದೇಶದ ಅಭಿವೃದ್ಧಿಗೆ ಸಹಕಾರಿಯಾಗಿ ಆಗಬೇಕೆಂದು ತಿಳಿಸಿದರು. ಸಾಹಿತಿ ಬಿ.ತಿಪ್ಪೇರುದ್ರಪ್ಪ ಉಪನ್ಯಾಸ ನೀಡಿ, ಯುವ ಜನತೆಯಲ್ಲಿ ದೇಶ ಪ್ರೇಮವು ಕುಂಠಿತವಾಗುತ್ತಿದೆ, ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ, ಭಾರತ ದೇಶದ ಸಂಸ್ಕೃತಿಯು ಶ್ರೀಮಂತಯುತವಾದದ್ದು ದೇಶದ ಸಂಸ್ಕೃತಿ, ಆಚಾರ ವಿಚಾರ ತಮ್ಮಲ್ಲಿ ಅಳವಡಿಸಿಕೊಂಡು ಇತರರಿಗೆ ಪರಿಚಯಿಸಬೇಕು ಎಂದರು.ಯುವ ಜನತೆಯು ನಿಂತ ನೀರಾಗದೆ ಹರಿಯುವ ನದಿಯಂತೆ ಸದಾ ಚಲನಶೀಲರಾಗಿರಬೇಕು. ಯುವಶಕ್ತಿಗಿಂತ ದೊಡ್ಡ ಶಕ್ತಿ ದೇಶದಲ್ಲಿ ಮತ್ತೊಂದಿಲ್ಲ, ವಿದ್ಯಾರ್ಥಿ ಜೀವನದಲ್ಲಿ ವಿಚಲಿತರಾಗದೆ ತಮ್ಮ ಗುರಿಯತ್ತ ಮುಖ ಮಾಡಿ ನಡೆದರೆ ದೇಶವು ಅಭಿವೃದ್ಧಿಯತ್ತ ಸಾಗುತ್ತದೆ. ಸರ್ವರನ್ನು ಗೌರವಿಸುತ್ತಾ ವಿವಿಧತೆಯಲ್ಲಿ ಏಕತೆ ಕಾಣುತ್ತಾ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವುದು ಯುವಜನತೆಯ ಪಾತ್ರವಾಗಿದೆ ಎಂದು ಅವರು ಹೇಳಿದರು. ಪ್ರಾದೇಶಿಕ ನಿರ್ದೇಶಕರು ದಕ್ಷಿಣ ರಾಜ್ಯಗಳು ಎನ್.ಎಸ್.ಕೆ.ಎಸ್ ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವಾಲಯದ ಎಂ.ಎನ್.ನಟರಾಜ್ ಮಾತನಾಡಿ, ಯುವಕರು ಯುವ ಸಂಸತ್ ಬಗ್ಗೆ ತಿಳಿದುಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಯುವ ಶಕ್ತಿಯೇ ದೇಶದ ಶಕ್ತಿ, ಯುವಕರು ಜಾಗರೂಕರಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ದೇಶದ ಭದ್ರತೆ ಬಗ್ಗೆ ಗಮನ ಹರಿಸಬೇಕು ಎಂದರು. ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ಅಭಿಷೇಕ್ ಚವರೆ ಪ್ರಾಸ್ತವಿಕವಾಗಿ ಮಾತನಾಡಿದರು.ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ಎಂ.ಪುಟ್ಟಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು .ಎಲೆಕ್ಟ್ರಿಕಲ್ ಆ್ಯಂಡ್‌ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಹೆಚ್.ಆರ್. ಶ್ರೀಧರ್, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟಗಳ ಜಿಲ್ಲಾಧ್ಯಕ್ಷ ಇಮ್ರಾನ್ ಅಹಮ್ಮದ್ ಬೇಗ್, ಹಾಸನ ಎ.ವಿ. ಕಾಂತಮ್ಮ ಮಹಿಳಾ ಕಾಲೇಜಿನ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕ ಡಾ. ಎಸ್.ಸಿ. ಯತೀಶ್ವರ, ತಾಪಂ ಕಾರ್ಯನಿರ್ವಹಕ ಅಧಿಕಾರಿ ತಾರಾನಾಥ್‌ ಉಪಸ್ಥಿತರಿದ್ದರು.

Share this article