ಹೂವಿನಹಡಗಲಿ: ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿರುಚಿಯಿಂದ ಯುವಕರು ವಿಮುಖರಾಗಬಾರದು ಎಂದು ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಎಚ್.ಎಂ.ಬೆಟ್ಟಯ್ಯ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಮಲ್ಲಿಗೆ ಪ್ರಕಾಶನ 33ನೇ ವರ್ಷದ ಅಂಗವಾಗಿ ಮಲ್ಲಿಗೆ ಕಲಾ ಸಂಸ್ಥೆ, ಸರ್ಕಾರಿ ನೌಕರರ ಸಂಘ, ಕಸಾಪ ಸಹಯೋಗದಲ್ಲಿ 156ನೇ ಮಹಾತ್ಮ ಗಾಂಧೀಜಿ ದಿನಾಚರಣೆ ಹಾಗೂ ದಸರಾ ಪ್ರಯುಕ್ತ ವಿಚಾರ ಸಂಕಿರಣ, ಕವಿಗೋಷ್ಠಿ, ದತ್ತಿನಿಧಿ ಸ್ವೀಕಾರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಶಾಲಾ ಕಾಲೇಜುಗಳಲ್ಲಿ ಕನ್ನಡದ ಹೆಸರಾಂತ ಸಾಹಿತಿಗಳು ಮತ್ತು ಲೇಖಕರ ಪರಿಚಯಿಸುವಂತಹ ಕೆಲಸ ನಿರಂತರ ನಡೆಯಬೇಕಿದೆ. ಸಾಹಿತ್ಯದ ಓದು ಮನುಷ್ಯನ ವ್ಯಕ್ತಿತ್ವವನ್ನೇ ಬದಲಾವಣೆ ಮಾಡುವ ಶಕ್ತಿ ಇದೆ ಎಂದರು.
ಸಾಹಿತಿ ತೋಮ ಶಂಕ್ರಯ್ಯ ಮಲ್ಲಿಗೆ ನಾಡಿನ ವಿವಿಧ ಪ್ರಕಾಶಕರ ಪುಸ್ತಕ ಸೇವೆ ಸ್ಮರಿಸಿದರು.ಕವಿ ಶಂಕರ್ ಬೆಟಗೇರಿ ಬಾಪೂಜಿಗೆ ಋಣಿ ಹನಿಗವನಗಳ ಕೃತಿ ಕುರಿತು ಮಾಹಿತಿ ಹಂಚಿಕೊಂಡರು.
ಕಸಾಪ ಅಧ್ಯಕ್ಷ ಟಿ.ಪಿ.ವೀರೇಂದ್ರ, ಲೇಖಕ ಕರಿವೀರನಗೌಡ ಪಾಟೀಲ್ ಇತರರಿದ್ದರು.ಪ್ರಾಚಾರ್ಯ ಡಾ.ಕೆ.ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಎಲ್.ಖಾದರ ಭಾಷಾ ಮಲ್ಲಿಗೆ ಪ್ರಕಾಶನದ ಕಾರ್ಯ ಚಟುವಟಿಕೆಗಳಿಗೆ ₹25,000 ದತ್ತಿನಿಧಿ ಕೊಡುಗೆ ನೀಡಿದರು.
ಇದೇ ಸಂದರ್ಭದಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ಕವಿಗಳು ಇಂತಹ ಗಂಭೀರ ವಿಷಯಗಳನ್ನು ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ನಿವೃತ್ತ ಪ್ರಾಂಶುಪಾಲ ಶಾಂತಮೂರ್ತಿ ಕುಲಕರ್ಣಿ ಅಭಿಪ್ರಾಯ ವ್ಯಕ್ತಪಡಿಸಿದರು.ದಸರಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ನೂರು ವರ್ಷ ಪೂರೈಸಿರುವ ಸಂಸ್ಥೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಆದರ್ಶಗಳನ್ನು ಪಾಲಿಸದೆ ಬೇರೆಯವರ ಓಲೈಸುತ್ತಿರುವುದು ವಿಪರ್ಯಾಸ ಎಂದರು.
ನೆಲ್ಸನ್ ಮಂಡೇಲಾ ಗಾಂಧೀಜಿ ಅವರ ಒಡನಾಟ ಅಪ್ರತಿಮ ಹೋರಾಟ, ದೇಶಭಕ್ತಿ ಇಂದಿನ ಯುವಪೀಳಿಗೆ ಅನುಸರಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಸುರೇಶ ಅಂಗಡಿ, ಕವಯಿತ್ರಿ ಸವಿತಾ ನಾಗಭೂಷಣ ರವರ ಗಾಂಧಿ ಕುರಿತಾದ ಕರ್ಮಯೋಗಿ ಕವಿತೆ ಓದಿ ಕವಿಗೋಷ್ಠಿಗೆ ಚಾಲನೆ ನೀಡಿದರು.
ನಾಗಮಂಜುಳಾ ಜೈನ್ ನಾಗರಾಜ್ ಮಲ್ಕಿಒಡೆಯರ್ ತುಳಜಾನಾಯ್ಕ, ಪದ್ಮರಾಜ್ ಜೈನ್, ರೋಷನ್, ಜಮೀರ್, ತಾರಾಸಿಂಗ್ ಕವಿತೆ ವಾಚಿಸಿದರು.ಮಲ್ಲಿಗೆ ಪ್ರಕಾಶನದ ಎಲ್.ಖಾದರ ಬಾಷಾ ಪ್ರಕಾಶನದ 33 ಸಂವತ್ಸರ ನಡೆದು ಬಂದ ಹಾದಿ ಕುರಿತು ಮಾಹಿತಿ ನೀಡಿದರು.
ಚಿತ್ತಾರ ಕಲಾಬಳಗದ ಶಿಕ್ಷಕಿ ಚಾಂದಿನಿ ನಿರ್ದೇಶನದಲ್ಲಿ ಮನ್ವಿತಾ ನಂದಿ, ಎಂ ಸಿರಿ ಮನಮೋಹಕ ಭರತನಾಟ್ಯ ಪ್ರದರ್ಶಿಸಿದರು. ಸಂಗೀತ ಶಿಕ್ಷಕ ಯುವರಾಜ್ ಗೌಡ ಸಂಗಡಿಗರು ಪ್ರಾರ್ಥಿಸಿದರು.ಸಿ.ಸೋಮಶೇಖರ್, ಡಿ.ಜಾವೇದ್ ಬಾಷಾ, ಬನ್ನೆಪ್ಪ ಕೆ, ಟಿ. ಎಂ.ನಾಗಭೂಷಣ ನಿರ್ವಹಿಸಿದರು.