ಉದ್ಯೋಗಕ್ಕಾಗಿ ಯುವಕರು ವಲಸೆ ಹೋಗದಿರಿ: ಚಿರಂಜೀವಿ ಸಿಂಗ್

KannadaprabhaNewsNetwork |  
Published : Aug 11, 2024, 01:37 AM IST
೧೦ಕೆಎಂಎನ್‌ಡಿ-೧ಮಂಡ್ಯದ ರೈತಸಭಾಂಗಣದಲ್ಲಿ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದಿಂದ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಆರ್.ಲತಾ ಅವರಿಗೆ ಜನಮುಖಿ ಅಧಿಕಾರಿ ಹಾಗೂ ಮಳವಳ್ಳಿ ಪ್ರಗತಿಪರ ಕಷಿಕ ಎಂ.ಎನ್.ಮಹೇಶ್‌ಕುಮಾರ್ ಅವರಿಗೆ  ಲಿಂಗಮ್ಮ ದೊಡ್ಡಿ ತಿಮ್ಮೇಗೌಡ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಮಹಾನಗರಗಳಿಗೆ ವಲಸೆ ಹೋದವರು ಕಡಿಮೆ ಸಂಪಾದನೆ ಮಾಡಿ ಸ್ಲಂಗಳಲ್ಲಿ ವಾಸ ಮಾಡುವಂತಹ ಪರಿಸ್ಥಿತಿ ಇದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಕಡೆಗೆ ಎಲ್ಲರೂ ಚಿಂತನೆ ನಡೆಸಬೇಕು. ಜನರು ಇಲ್ಲೇ ಇದ್ದು ಏನಾದರೂ ಸಾಧನೆ ಮಾಡುವ ಮನಸ್ಸು ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಸುಂದರವಾದ ಜಿಲ್ಲೆ, ಸಂಪದ್ಭರಿತವಾದ ಜಿಲ್ಲೆ. ಪ್ರತಿಭೆಗಳ ಆಗರವೇ ಇಲ್ಲಿದೆ. ಇಲ್ಲಿನ ಫಲವತ್ತಾದ ಮಣ್ಣನ್ನು ಬಿಟ್ಟು ಕಡಿಮೆ ಆದಾಯದ ಉದ್ಯೋಗವನ್ನರಸಿಕೊಂಡು ಮಹಾನಗರಗಳಿಗೆ ಯುವಕರು ವಲಸೆ ಹೋಗುತ್ತಿರುವುದು ದುರದೃಷ್ಟಕರ ಎಂದು ವಿಶ್ರಾಂತ ಅಪರ ಕಾರ್ಯದರ್ಶಿ ಡಾ.ಚಿರಂಜೀವಿ ಸಿಂಗ್ ಹೇಳಿದರು.

ನಗರದ ಕೆ.ವಿ.ಶಂಕರಗೌಡ ರೈತ ಸಭಾಂಗಣದಲ್ಲಿ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದ ಉದ್ಘಾಟನೆ, ಜನಮುಖಿ ಅಧಿಕಾರಿ, ಪ್ರಗತಿಪರ ಕೃಷಿಕ, ವಿದ್ಯಾರ್ಥಿ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾನಗರಗಳಿಗೆ ವಲಸೆ ಹೋದವರು ಕಡಿಮೆ ಸಂಪಾದನೆ ಮಾಡಿ ಸ್ಲಂಗಳಲ್ಲಿ ವಾಸ ಮಾಡುವಂತಹ ಪರಿಸ್ಥಿತಿ ಇದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಕಡೆಗೆ ಎಲ್ಲರೂ ಚಿಂತನೆ ನಡೆಸಬೇಕು. ಜನರು ಇಲ್ಲೇ ಇದ್ದು ಏನಾದರೂ ಸಾಧನೆ ಮಾಡುವ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.

ಮಂಡ್ಯ ಜಿಲ್ಲೆಯ ಪರಂಪರೆ ಸಮೃಧ್ಧವಾಗಿದೆ. ಪ್ರತಿಭಾವಂತರಿಗೆ ಕೊರತೆ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಹಿಂದೆ ಕೆಳಗಿನಿಂದ ಎರಡನೇ ಸ್ಥಾನದಲ್ಲಿತ್ತು. ಎಸ್.ಎಂ.ಕೃಷ್ಣ, ಶಂಕರಗೌಡ, ಜಿ.ಮಾದೇಗೌಡ ಅವರೆಲ್ಲರೂ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಶ್ರೀಮಠದ ಪಾತ್ರವೂ ಇದರಲ್ಲಿ ದೊಡ್ಡದಿದೆ. ಪರಿಣಾಮ ಶಿಕ್ಷಣ ಕ್ಷೇತ್ರದಲ್ಲಿ ಈಗ ಮೊದಲಿನ ಪರಿಸ್ಥಿತಿ ಇಲ್ಲ ಎಂದು ಹೇಳಿದರು.

ಜಿಲ್ಲೆಯ ಯುವಕರು ವಲಸೆ ಹೋಗುವುದು ಬೇಡ. ಫಲವತ್ತಾದ ಮಣ್ಣಿನಲ್ಲಿ ಕಷ್ಟಪಟ್ಟು ದುಡಿದು ಜೀವನವನ್ನು ರೂಪಿಸಿಕೊಳ್ಳಬೇಕು. ಈ ನೆಲದ ಋಣವನ್ನು ತೀರಿಸಬೇಕು ಎಂದ ಅವರು, ಟಿ.ತಿಮ್ಮೇಗೌಡ ಪ್ರತಿಷ್ಠಾನ ಆರೋಗ್ಯ, ಶಿಕ್ಷಣ ಕ್ಷೇತ್ರದ ಸುಧಾರಣೆ ಹಾಗೂ ಉದ್ಯೋಗ ಸೃಷ್ಟಿಸುವುದಕ್ಕೆ ಮಹತ್ವ ನೀಡುವಂತೆ ಸಲಹೆ ನೀಡಿದರು.

ಕೆ.ವಿ.ಶಂಕರಗೌಡರು ದಕ್ಷ, ಧೀಮಂತ ನಾಯಕರಲ್ಲೊಬ್ಬರು. ವರುಣಾ ನಾಲಾ ಚಳವಳಿ ಆರಂಭವಾದಾಗ ಅದರ ನೇತೃತ್ವ ವಹಿಸುವ ನಾಯಕರೇ ಇರಲಿಲ್ಲ. ವಿದ್ಯಾರ್ಥಿಗಳೇ ಚಳವಳಿಯ ನೇತೃತ್ವ ವಹಿಸಿದ್ದರು. ಚಳವಳಿ ಹಿಂಸಾತ್ಮಕ ರೂಪ ಪಡೆದುಕೊಳ್ಳುವ ಸಾಧ್ಯತೆಗಳಿತ್ತು. ಆಗ ನಾನು ಮಂಡ್ಯ ಜಿಲ್ಲಾಧಿಕಾರಿಯಾಗಿದ್ದೆ. ಕೆ.ವಿ.ಶಂಕರಗೌಡರ ಮನೆಗೆ ತೆರಳಿ ಚಳವಳಿ ನೇತೃತ್ವ ವಹಿಸುವಂತೆ ಮನವಿ ಮಾಡಿದೆ. ಆರಂಭದಲ್ಲಿ ಹಿಂಜರಿದ ಶಂಕರಗೌಡರು ಕೊನೆಗೆ ಒಪ್ಪಿದರು. ಚಳವಳಿಯ ನೇತೃತ್ವ ವಹಿಸಿ ಅಹಿಂಸಾತ್ಮಕವಾಗಿ ಮುನ್ನಡೆಸಿದರು ಎಂದರು.

ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಆರ್.ಲತಾ ಅವರಿಗೆ ಜನಮುಖಿ ಅಧಿಕಾರಿ ಹಾಗೂ ಮಳವಳ್ಳಿ ಪ್ರಗತಿಪರ ಕೃಷಿಕ ಎಂ.ಎನ್.ಮಹೇಶ್‌ಕುಮಾರ್ ಅವರಿಗೆ ಲಿಂಗಮ್ಮ ದೊಡ್ಡಿ ತಿಮ್ಮೇಗೌಡ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹನಿಯಂಬಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಚ್.ಎಂ.ಅನುಷಾ ಮತ್ತು ಮಂಗಲ ಸರ್ಕಾರಿ ಪ್ರೌಢಶಾಲೆಯ ಪ್ರಮೋದಿನಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಟಿ.ತಿಮ್ಮೇಗೌಡ, ಎಂ.ಆರ್.ಶಶಿಕಲಾ, ಬೆಂಗಳೂರು ಕಣ್ವ ಡಯಾಗ್ನೋಸ್ಟಿಕ್ ಸೆಂಟರ್ ಮಾಲೀಕ ಡಾ.ಎಚ್.ಎಂ.ವೆಂಕಟಪ್ಪ, ಟಿ.ತಿಮ್ಮೇಗೌಡ ಪ್ರತಿಷ್ಠಾನದ ಅಧ್ಯಕ್ಷ ಎ.ಸಿ.ರಮೇಶ್, ಕಾರ್ಯದರ್ಶಿ ಕೆ.ಎಂ.ಕೃಷ್ಣೇಗೌಡ, ಕಾರಸವಾಡಿ ಮಹದೇವು, ಕೆ.ಜೆ.ಸುರೇಶ್, ಎಂ.ಸಿ.ಲಂಕೇಶ್, ಎಚ್.ಆರ್.ಕನ್ನಿಕಾ ಇತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ