ಕನ್ನಡಪ್ರಭ ವಾರ್ತೆ ಶಹಾಪುರ
ಯುವಜನರಲ್ಲಿನ ಕಲಾ ಪ್ರತಿಭೆ ಪ್ರದರ್ಶಿಸಲು ಯುವ ಜನೋತ್ಸವ ಸೂಕ್ತ ವೇದಿಕೆ, ಇದರ ಸದುಪಯೋಗ ಪಡೆದುಕೊಳ್ಳುವುದರ ಜತೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿ ಕ್ಷೇಮಾವೃದ್ಧಿ ಡೀನ್ ಡಾ. ಎಸ್.ಬಿ. ಗೌಡಪ್ಪ ಹೇಳಿದರು.ಸಮೀಪದ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ 14ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ವಿಶಿಷ್ಟ ಜ್ಞಾನ, ಕೌಶಲ್ಯ, ಕಲೆ, ಪ್ರತಿಭೆ, ಸಾಮರ್ಥ್ಯ ಮುಂತಾದವುಗಳ ಪ್ರದರ್ಶನಕ್ಕೆ ಯುವಜನೋತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ತುಂಬಾ ಮುಖ್ಯವಾಗುತ್ತವೆ ಎಂದರು.ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಕೇವಲ ಪಠ್ಯದ ಕಲಿಕೆಯಿಂದ ಮಾತ್ರ ಸಾಧ್ಯವಿಲ್ಲ. ಅವರ ಜ್ಞಾನ ವಿಕಾಸವು ಆಗುವುದಿಲ್ಲ. ಯುವ ಸಮುದಾಯಕ್ಕೆ ಒಳ್ಳೆಯ ಸಾಮಾಜಿಕ ಅಂತರ ಕ್ರೀಯೆಯನ್ನು ಮತ್ತು ಬದುಕಿನ ಮೌಲ್ಯಗಳನ್ನು ಕಲಿತುಕೊಳ್ಳಲು, ಸಾಮಾಜಿಕ ಬದುಕಿಗೆ ಮುಖಾಮುಖಿಯಾಗಲು ಯುವಜನೋತ್ಸವ ಸಹಕಾರಿ ಎಂದು ತಿಳಿಸಿದರು.
ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಪಿ.ಎಚ್. ಕುಚನೂರು, ಯುವಜನೋತ್ಸವ ಯಶಸ್ವಿಯಾಗಿ ಜರುಗುವುದಕ್ಕೆ ಕಾಲೇಜಿನ ವಿವಿಧ ವಿಭಾಗದ ಅಧ್ಯಾಪಕರು, ಸಿಬ್ಬಂದಿ ಸಹಕಾರ ನೀಡಿದ್ದಾರೆ. ಯುವಜನೋತ್ಸವದಿಂದ ನಮ್ಮ ಕಾಲೇಜಿನ ಗರಿಮೆ ಹೆಚ್ಚಿದೆ ಎಂದರು.ಯುವಜನೋತ್ಸವದಲ್ಲಿ ಪ್ರದರ್ಶನಗೊಂಡ ಪರಿಸರ ಸಂರಕ್ಷಣೆ ನಾಟಕ ಮತ್ತು ಟ್ಯಾಬಲೇಟ್ ಪ್ರಹಸನವು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾದವು. ಆಧುನೀಕರಣ, ಕೈಗಾರಿಕೀಕರಣ, ನಗರೀಕರಣ ಪ್ರಕ್ರಿಯೆಯಲ್ಲಿ ಪರಿಸರ ನಾಶದಿಂದ ಮಾನವ ಸಮಾಜದ ಮೇಲೆ ಹಾಗೂ ಜೀವ ಸಂಕುಲದ ಮೇಲೆ ಬೀರಿರುವ ಕೆಟ್ಟ ಪರಿಣಾಮಗಳು ಮತ್ತು ಪರಿಸರ ಸಂರಕ್ಷಣೆ ಅಗತ್ಯ ಕುರಿತು ವಿದ್ಯಾರ್ಥಿಗಳು ತಮ್ಮ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದರು.
ಮಂಗಳವಾರದಂದು ಜರುಗಿದ ಚರ್ಚಾಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಭಾಷಣ ಸ್ಪರ್ಧೆ, ಏಕಪಾತ್ರ ಅಭಿನಯ, ಮೂಕಾಭಿನಯ ಮುಂತಾದ ಸ್ಪರ್ಧೆಗಳಲ್ಲಿ ಪಾಲ್ಗೊಂಡ ರಾಯಚೂರ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ 7 ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ವಿದ್ವತ್‌ಪೂರ್ಣ ವಿಚಾರಗಳನ್ನು, ಪ್ರತಿಭೆಯನ್ನು ಪ್ರದರ್ಶಿಸಿದರು.