ಎಲ್ಲವೂ ಇದ್ದು ಏನೂ ಇಲ್ಲದಂತಿರುವ ಜೋಯಿಡಾ

KannadaprabhaNewsNetwork |  
Published : Oct 22, 2025, 01:03 AM IST
ಎಲ್ಲವೂ ಇದ್ದು ಏನೂ ಇಲ್ಲದ  ಜೋಯಿಡಾ | Kannada Prabha

ಸಾರಾಂಶ

ಜೋಯಿಡಾ ಎಂದ ಕೂಡಲೇ ಏನೋ ವಿಶೇಷತೆ ಇದೆ ಎಂದು ಅನಿಸಿದರೆ ತಪ್ಪಿಲ್ಲ. ಇಲ್ಲಿ ಎಲ್ಲವೂ ಇದೆ ಆದರೆ ಏನೂ ಇಲ್ಲ. ಇದೇನು ಹೀಗೆ. ಅಂತೀರಾ ಒಮ್ಮೆ ಜೋಯಿಡಾಕ್ಕೆ ಬನ್ನಿ ನೀವು ಹೌಹಾರಿ ಬಿಡುತ್ತೀರಿ.

ಎಲ್ಲ ಕೆಲಸ ಕಾರ್ಯಗಳಿಗೆ ಜನರು ದಾಂಡೇಲಿ, ಹಳಿಯಾಳಗಳಿಗೆ ಓಡಬೇಕು

ಕನ್ನಡಪ್ರಭ ವಾರ್ತೆ ಜೋಯಿಡಾ

ಜೋಯಿಡಾ ಎಂದ ಕೂಡಲೇ ಏನೋ ವಿಶೇಷತೆ ಇದೆ ಎಂದು ಅನಿಸಿದರೆ ತಪ್ಪಿಲ್ಲ. ಇಲ್ಲಿ ಎಲ್ಲವೂ ಇದೆ ಆದರೆ ಏನೂ ಇಲ್ಲ. ಇದೇನು ಹೀಗೆ. ಅಂತೀರಾ ಒಮ್ಮೆ ಜೋಯಿಡಾಕ್ಕೆ ಬನ್ನಿ ನೀವು ಹೌಹಾರಿ ಬಿಡುತ್ತೀರಿ, ನಿಮ್ಮ ಮೊಬೈಲ್ ಸಿಮ್ ಇಲ್ಲಿ ಕೆಲಸ ಮಾಡೋದಿಲ್ಲ, ನೀವು ಯಾರನ್ನೋ ಸಂಪರ್ಕಿಸಲು ಯಾರದೋ ಮೊಬೈಲ್ ಪಡೆದು ಸಂಪರ್ಕಿಸಬೇಕು. ಕೇವಲ ಬಿಎಸ್ಎನ್ಎಲ್ ಆಗಾಗ ವಿದ್ಯುತ್ ಇದ್ದಾಗ ಕೆಲಸ ಮಾಡುತ್ತದೆ. ಬಸ್ಸಿಗೆ ಬಂದರೆ ದಾರಿಯಲ್ಲಿ ಬಸ್ ಏನಾದರೂ ಕೆಟ್ಟರೆ ಇಲ್ಲಿ ಡಿಪೋ ಇಲ್ಲ, ಬದಲಿ ವ್ಯವಸ್ಥೆಗೆ ದಾಂಡೇಲಿ ಡಿಪೋದವರು ಬಸ್ ಇದ್ದರೆ ಕಳಿಸಿಕೊಟ್ಟಾಗ ಮಾತ್ರ ವ್ಯವಸ್ಥೆ ಇಲ್ಲ ಎಂದಾದರೆ ದಿನವಿಡೀ ಕಾಯ್ದು ಕಂಡವರ ಕಾಲು ಹಿಡಿದು ಸೇರಬೇಕಾದಲ್ಲಿ ಸೇರುವ ಸ್ಥಿತಿ ಇದೆ.

ತಾಲೂಕಿನವರಿಗೆ ಏನೋ ನೊಂದಣಿ ಕೆಲಸವಿದೆ ಎಂದರೆ, ಸಬ್ ರಜಿಸ್ಟ್ರಾರ್‌ ಕಚೇರಿ ಇಲ್ಲ. ದಾಂಡೇಲಿ ದಾಟಿ ಹಳಿಯಾಳ ತಾಲೂಕಿಗೆ ಹೋಗಬೇಕು, ಏನೋ ಸಮಸ್ಯೆಗೆ ಪರಿಹಾರಕ್ಕೆ ಕೋರ್ಟ್‌ಗೆ ಹೋಗೋಣ ಎಂದರೆ ಇಲ್ಲಿ ಕೋರ್ಟ್‌ ಕೂಡ ಇಲ್ಲ ಎಂದರೆ ನಿಮಗೆ ಅಚ್ಚರಿ ಆಗಬಹುದು ಆದರೆ ಇದು ನಿಜ. ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸುವ ಕೌಂಟರ್ ಕೂಡ ಇಲ್ಲ ಎಂದರೆ ಇದು ತಾಲೂಕಾ ಕೇಂದ್ರವೇ ಎಂದು ನಿಮಗೆ ಅನ್ನಿಸಬಹುದು. ಆದರೂ ಇದು ತಾಲೂಕಾ ಕೇಂದ್ರವೇ ಹೌದು. ಎಲ್ಲ ಕೆಲಸ ಕಾರ್ಯಗಳಿಗೆ ದಾಂಡೇಲಿ, ಹಳಿಯಾಳಗಳಿಗೆ ಓಡಬೇಕಾಗಿದೆ. ಅಷ್ಟೇ ಅಲ್ಲ ಇಲ್ಲಿ ಇರುವ ಗ್ರಾಮ ಒನ್‌ಗಳೂ ಕೂಡ ಕೆಲಸ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳೂ ಇವೆ. ಸದ್ಯದ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು, ಒಂದೇ ಒಂದು ಬಾರಿ ಇಲ್ಲಿ ಬಂದು ಅಭಿವೃದ್ಧಿ ಸಭೆ ನಡೆಸಿಲ್ಲ, ಶಾಸಕರೂ ಕೂಡ ಕಳೆದ ಏಪ್ರಿಲ್‌ನಲ್ಲಿ ಸಭೆ ನಡೆಸಿದ ಮೇಲೆ ಈಗ ಆರು ತಿಂಗಳು ಕಳೆದರೂ ಅಭಿವೃದ್ಧಿ ಸಭೆ ನಡೆಸಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಚಿಂತೆ ಮಾಡಿದಂತೆ ಕಂಡು ಬರುತ್ತಿಲ್ಲ. ಇಷ್ಟೇ ಅಲ್ಲ ತಾಲೂಕಿನ ಇನ್ನೂ ಹಲವಾರು ಸಮಸ್ಯೆಗಳಿದ್ದು ಆಸಕ್ತಿಯಿಂದ ಕೆಲಸ ಮಾಡುವ ಅಧಿಕಾರಿಗಳ ಕೊರತೆ ಕೂಡ ಇರುವುದು ಕಂಡು ಬರುತ್ತಿದೆ. ಒಟ್ಟಾರೆ ಯಾರಿಗೆ ಹೇಳೋಣ ನಮ್ಮ ಕಷ್ಟ ಎಂಬ ಚಿಂತೆಯಲ್ಲಿಯೇ ವರ್ಷಗಳು ಉರುಳುತ್ತಿವೆ.

PREV

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ