ಸೀಮ್ಸ್ ಡೀನ್ ಡಾ. ಮಂಜುನಾಥ್ ಸುದ್ದಿಗೋಷ್ಠಿ । ಅಕ್ರಮ ಹೊರಗುತ್ತಿಗೆದಾರರ ವಿರುದ್ದ ಕ್ರಮ ಸಹಿಸದ ಹಲವರಿಂದ ಆರೋಪ ಕನ್ನಡಪ್ರಭ ವಾರ್ತೆ ಚಾಮರಾಜನಗರ ನಕಲಿ ಪ್ರಮಾಣಪತ್ರ ಹೊಂದಿರುವ ಅನೇಕರು ಸಿಮ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಅಂತಹವರ ವಿರುದ್ಧ ಕ್ರಮ ಜರುಗಿಸಲು ಮುಂದಾಗಿರುವುದರಿಂದ ಹಲವರು ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು ಎಂದು ಸಿಮ್ಸ್ ನ ಡೀನ್ ಹಾಗೂ ನಿರ್ದೇಶಕ ಡಾ.ಎಚ್.ಜಿ. ಮಂಜುನಾಥ್ ದೂರಿದರು. ನಗರದ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕರರ ಸತ್ಯಾಸತ್ಯತೆ ತಿಳಿಯಲು ನೇಮಕಾತಿ ಆದೇಶ ಕೇಳಲಾಗುತ್ತಿದೆ. ಅನೇಕ ಅನಧಿಕೃತ ವ್ಯಕ್ತಿಗಳು ಸಿಮ್ಸ್‌ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕೆಲವರನ್ನು ಗುರುತಿಸಲಾಗಿದೆ. ಇದನ್ನು ಸಹಿಸಿಕೊಳ್ಳದ ಅನೇಕರು ಸಿಮ್ಸ್ ಹೆಸರು ಕೆಡಿಸಲು ಹೊರಟಿದ್ದಾರೆ ಎಂದು ಹೇಳಿದರು. ಸಿಮ್ಸ್ ನೌಕರರ ಜೊತೆ ಆಗಾಗ್ಗೆ ಸಭೆ ಕರೆದು ಅವರ ಸಮಸ್ಯೆ ಗಳನ್ನು ಕೇಳಿ ಅದನ್ನು ಬಗೆಹ ರಿಸುವ ಕೆಲಸ ಮಾಡತ್ತಿದ್ದೇವೆ. ಸಚಿವರನ್ನು ಭೇಟಿ ಮಾಡಿ ದೂರು ನೀಡಿರುವವರು ಸಿಮ್ಸ್‌ನ ಹೊರಗುತ್ತಿಗೆ ನೌಕರರಲ್ಲ. ಸಂಘಟನೆ ಸೃಷ್ಟಿ ಮಾಡಿಕೊಂಡು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಮೂರನೇಯವರಿಂದ ನಮಗೆ ತೊಂದರೆಯಾಗುತ್ತಿದ್ದು, ಕೆಲಸ ಮಾಡಲು ಆಗುತ್ತಿಲ್ಲ. ಸಿಮ್ಸ್ ನ ಹೊರಗುತ್ತಿಗೆ ನೌಕರರು ನಮ್ಮ ಜೊತೆಗಿದ್ದಾರೆ ಎಂದು ಸ್ಪಷ್ಟಪಡಿಸಿದರು. ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್ ಮಾತನಾಡಿ, ನಕಲಿ ಸರ್ಟಿಫಿಕೇಟ್ ಹೊಂದಿರುವ ಅನೇಕರು ಸಿಮ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹವರನ್ನು ಗುರುತಿಸಸಲು ನೇಮಕಾತಿ ಆದೇಶ ನೀಡುವಂತೆ ಹೇಳಿದ್ದೇವೆ. ಏಜೆನ್ಸಿಯವರು ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂಬ ದೂರಿನ ಬಗ್ಗೆ ನಮಗೆ ಸಂಬಂಧವಿಲ್ಲ. ಆದರೂ ಯಾರಿಗೂ ಹಣ ಕೊಡುವ ಅಗತ್ಯವಿಲ್ಲ. ಈ ಸಂಬಂಧ ಈಗಾಗಲೇ ಹೊರಗುತ್ತಿಗೆ ನೌಕರರನ್ನು ಕರೆಸಿ ಹಣ ಕೊಡದಂತೆ ತಿಳಿಸಿದ್ದೇವೆ ಎಂದರು. ಸಿಮ್ಸ್ ನಲ್ಲಿ ಯಾವುದೇ ಸಂಘಗಗಳಿಲ್ಲ. ಶೇ.೯೦ ರಷ್ಟು ನೌಕರರು ನೇಮಕಾತಿ ಆದೇಶ ನೀಡಿದ್ದಾರೆ. ಪ್ರತಿ ತಿಂಗಳು ಸಂಬಳದಲ್ಲಿ ೩-೪ ಸಾವಿರ ಹಿಡಿಯುತ್ತಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಪ್ರತಿ ತಿಂಗಳ ನೌಕರರ ಖಾತೆ ಪರಿಶೀಲಿಸಲಾಗುತ್ತಿದೆ. ಇಎಸ್‌ಐ, ಪಿಎಫ್‌ಗೆ ೩-೪ ಸಾವಿರ ಹೋಗುತ್ತದೆ. ಉಳಿದ ಹಣ ಖಾತೆಗೆ ಹೋಗುತ್ತದೆ. ಕಡ್ಡಾಯವಾಗಿ ಏಜೆನ್ಸಿಯವರು ಪಿಎಫ್ ಹಣ ಕಟ್ಟಬೇಕು. ಇಲ್ಲದಿದ್ದರೆ ಏಜೆನ್ಸಿಗೆ ತೊಂದರೆಯಾಗುತ್ತದೆ. ಅಲ್ಲದೆ ನೌಕರರಿಗೆ ಸಮವಸ್ತ್ರ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಡಾ.ಕೃಷ್ಣಪ್ರಸಾದ್, ಡಾ.ಮಾರುತಿ, ಡಾ.ನವೀನ್‌ಚಂದ್ರ ಸೇರಿದಂತೆ ಇತರರಿದ್ದರು. ------------ 3ಸಿಎಚ್‌ಎನ್8 ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಿಮ್ಸ್ ಡೀನ್ ಹಾಗೂ ನಿರ್ದೇಶಕ ಡಾ.ಎಚ್.ಜಿ. ಮಂಜುನಾಥ್ ಮಾತನಾಡಿದರು. ಡಾ. ಮಹೇಶ್, ಡಾ. ಕೃಷ್ಣಪ್ರಸಾದ್ ಇದ್ದಾರೆ.