ಕ್ಷೇತ್ರದ ಕಾಂಗ್ರೆಸ್‌ ಶಾಸಕರೇ ಅಭಿವೃದ್ಧಿ ಕಾರ್ಯಕ್ಕಾಗಿ ಸಂಸದರ ನಿಧಿ ಕೇಳುತ್ತಿದ್ದಾರೆ

KannadaprabhaNewsNetwork |  
Published : Jan 15, 2025, 12:46 AM ISTUpdated : Jan 15, 2025, 07:45 AM IST
೧೪ಕೆ.ಎಂ.ಎಲ್.ಆರ್.‌೨- ಮಾಲೂರು ತಾಲ್ಲೂಕಿನ ಚೊಕ್ಕಂಡಹಳ್ಳಿ ಗೇಟ್ ಬಳಿಯ ಸ್ವಾಭಿಮಾನಿ ಜನತಾ ಪಕ್ಷದ ಕಛೇರಿಯಲ್ಲಿ ಸಂಸದ ಮಲ್ಲೇಶ್ ಬಾಬು ಅವರಿಗೆ ಎಸ್‌ಜೆಪಿ ಪಕ್ಷದ ವತಿಯಿಂದ ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಕ್ಷೇತ್ರದ ಕಾಂಗ್ರೆಸ್‌ ಶಾಸಕರೇ ಅಭಿವೃದ್ಧಿ ಕಾರ್ಯಕ್ಕಾಗಿ ಕೇಂದ್ರ ಸರ್ಕಾರದ ಅನುದಾನ ಕೇಳುತ್ತಿದ್ದರೆ ಎಂದರೆ ರಾಜ್ಯ ಸರ್ಕಾರದ ಆಡಳಿತ ಯಾವ ಪರಿಸ್ಥಿತಿಯಲ್ಲಿದೆ ಎಂಬುದು ಗೊತ್ತಾಗುತ್ತಿದೆ ಎಂದು ಲೋಕಸಭೆ ಸದಸ್ಯ ಮಲ್ಲೇಶ್‌ ಬಾಬು ಹೇಳಿದರು.

  ಮಾಲೂರು : ಕ್ಷೇತ್ರದ ಕಾಂಗ್ರೆಸ್‌ ಶಾಸಕರೇ ಅಭಿವೃದ್ಧಿ ಕಾರ್ಯಕ್ಕಾಗಿ ಕೇಂದ್ರ ಸರ್ಕಾರದ ಅನುದಾನ ಕೇಳುತ್ತಿದ್ದರೆ ಎಂದರೆ ರಾಜ್ಯ ಸರ್ಕಾರದ ಆಡಳಿತ ಯಾವ ಪರಿಸ್ಥಿತಿಯಲ್ಲಿದೆ ಎಂಬುದು ಗೊತ್ತಾಗುತ್ತಿದೆ ಎಂದು ಲೋಕಸಭೆ ಸದಸ್ಯ ಮಲ್ಲೇಶ್‌ ಬಾಬು ಹೇಳಿದರು. ಅವರು ಪಟ್ಟಣದ ಹೂರವಲಯದ ಚೊಕ್ಕಂಡಹಳ್ಳಿ ಗೇಟ್ ಬಳಿಯ ಸ್ವಾಭಿಮಾನಿ ಜನತಾ ಪಕ್ಷದ ಕಚೇರಿಯಲ್ಲಿ ಎಸ್‌ಜೆಪಿ ವತಿಯಿಂದ ತಮಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಗ್ಯಾರಂಟಿಯಿಂದಾಗಿ ಹಣ ಖಾಲಿ

ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರಗಳ ಆಭಿವೃದ್ಧಿಗೆ ಅನುದಾನವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಅದ್ದರಿಂದ ಕೆಲ ಕಾಂಗ್ರೆಸ್ ಶಾಸಕರೇ ನಮ್ಮನ್ನ ಅನುದಾನ ಕೇಳುತ್ತಿದ್ದಾರೆ. ಆ ಪರಿಸ್ಥಿತಿ ಬಂದಿದೆ. ಆಡಳಿತ ಪಕ್ಷದವರು ಪ್ಲೆಕ್ಸ್‌ ಹಾಗೂ ಬ್ಯಾನರ್‌ ಗಳಲ್ಲಿ ಹಾಕುವ ಅಭಿವೃದ್ಧಿ ಕಾರ‍್ಯಗಳು ಅನುಷ್ಠಾನಗೊಂಡಾಗ ಮಾತ್ರ ಅವರ ಬಗ್ಗೆ ಜನರಿಗೆ ನಂಬಿಕೆ ಬರಲಿದೆ ಎಂದರು.

ತಾವು ಸಂಸದರಾದ ಮೇಲೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದೇನೆ. ನಾನು ಕೆಲ ರಾಜಕಾರಣಿಗಳ ಹಾಗೇ ದ್ವೇಷದ ರಾಜಕೀಯ ಮಾಡಲ್ಲ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ತಾಲೂಕುಗಳಿಂದ ಯಾರೇ ಬಂದರೂ ಪಕ್ಷಾತೀತವಾಗಿ ಅವರ ಕೆಲಸ ಮಾಡುತ್ತಿದ್ದೇನೆ ಎಂದರು.

ದುಡ್ಡಿಲ್ಲದೆ ಕೆಲಸ ಆಗೋಲ್ಲ

ಎಸ್‌ಜೆಪಿ ಪಕ್ಷದ ಸಂಸ್ಥಾಪಕ ಹೂಡಿ ವಿಜಯ ಕುಮಾರ್ ಮಾತನಾಡಿ, ತಾಲೂಕಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಸ್ಥಳಿಯ ಶಾಸಕರು ಕಳೆದ ಅಯವ್ಯಯದಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಇಲ್ಲ. ನಮ್ಮ ಕೈಯಲ್ಲಿ ಅಧಿಕಾರಿಗಳನ್ನು ತರಲು ಮತ್ತು ವರ್ಗಾಯಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು. ಈಗ ಅವರದೇ ಸರ್ಕಾರ ಅವರದೇ ಆಡಳಿತವಿದ್ದರೂ ಈಗಲು ಸಾಮಾನ್ಯ ಬಡ ಜನತೆಯ ಕೆಲಸಗಳು ದುಡ್ಡಿಲ್ಲದೆ ತಾಲ್ಲೂಕು ಕಛೇರಿಯಲ್ಲಿ ನಡೆಯುತ್ತಿಲ್ಲ ಎಂದು ಟೀಕಿಸಿದರು.

ಮತ ಹಾಕಿದವರು ಹೊರಗಿನವರೇ?

ಪ್ರತಿದಿನ ಸಾರ್ವಜನಿಕರು ತಾಲೂಕು ಕಚೇರಿ ಮುಂದೆ ತಮ್ಮ ಕೆಲಸ ಕಾರ್ಯಗಳು ಸಕಾಲಕ್ಕೆ ಆಗದೇ ಅಲೆದಾಡುತ್ತಾ ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಹೊಣೆ ಯಾರು. ನನಗೂ ಕಳೆದ ಚುನಾವಣೆಯಲ್ಲಿ ತಾಲೂಕಿನ 50 ಸಾವಿರ ಮಂದಿ ಮತ ನೀಡಿ ಆಶೀರ್ವದಿಸಿದ್ದಾರೆ. ಅವರ ಪರವಾಗಿ ಮಾತನಾಡಿದರೆ ಶಾಸಕರು ಉತ್ತರ ನೀಡದೆ ಹೂರಗಿನವರಿಗೆ ಉತ್ತರ ಕೊಡಲ್ಲ ಎನ್ನುತ್ತಾರೆ. ಹಾಗಾದರೆ ನನ್ನನ್ನು ಆಶೀರ್ವದಿಸಿದ ತಾಲೂಕಿನ ೫೦ ಸಾವಿರ ಮಂದಿ ಹೊರಗಿನವರೇ ಎಂದು ಪ್ರಶ್ನಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಇ ರಾಮೇಗೌಡ, ಮಾತನಾಡಿ ಮಾಲೂರು-ಹೊಸೂರು ಮುಖ್ಯ ರಸ್ತೆಯಲ್ಲಂತೂ ವಾಹನ ಸವಾರರಿಗೆ ನರಕ ಕಾಣುತ್ತಿದೆ. ಇದುವವರೆಗೆ ಹಲವಾರು ಅಪಘಾತಗಳಾಗಿವೆ. ಈಗಿರುವಾಗ ಮಾಲೂರು ಕೆರೆ ಅಭಿವೃದ್ಧಿಯನ್ನು 35 ಕೋಟಿ ರೂಗಳಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದು ಅದೇ ೩೪ ಕೋಟಿ ರೂಗಳನ್ನು ಹದಗೆಟ್ಟ ರಸ್ತೆಗಳ ಅಭಿವೃದ್ಧಿಗೆ ಬಳಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು ಎಂದರು.

ಕೆರೆಗೆ ಸಿಎಸ್‌ಆರ್‌ ಹಣ ಬಳಸಿ

ಕೆರೆ ಅಭಿವೃದ್ಧಿಯು ಮುಖ್ಯ. ಆದರೆ ಅದಕ್ಕೆ ಸ್ಥಳಿಯ ಕೈಗಾರಿಕ ಪ್ರದೇಶದ ಕಾರ್ಖಾನೆಗಳ ಸಿಎಸ್‌ಆರ್ ಅನುದಾನಗಳನ್ನು ಬಳಸಿಕೊಂಡು ಮಾಡಬಹುದಿತ್ತು. ಏನೇ ಇರಲಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟಚಾರವನ್ನು ತಡೆಗಟ್ಟಲು ಜನತೆ ಒಂದಾಗಿ ಪ್ರಶ್ನಿಸಬೇಕಿದೆ ಎಂದರು. ಈ ಸಂದರ್ಭದಲ್ಲಿ ಎಸ್‌ಜೆಪಿ ಪಕ್ಷದ ಅಧ್ಯಕ್ಷ ಆರ್. ಪ್ರಬಾಕರ್, ಬಿ.ಆರ್ ವೆಂಕಟೇಶ್, ಹನುಮಂತಪ್ಪ, ಪುರಸಭೆ ಸದಸ್ಯ ಭಾನುತೇಜ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಕುಟ್ಟಿ, ಬೋರ್ ಮಂಜು, ಸಂಪತ್, ಕೂರಿ ಮಂಜು, ಸೇರಿದಂತೆ ಇನ್ನಿತರರು ಇದ್ದರು.

PREV

Recommended Stories

ಭಯಪಟ್ಟು ಮಾಡಿರುವ ಪಾತ್ರ ನನ್ನದು : ಪ್ರಜ್ವಲ್ ದೇವರಾಜ್
ಸ್ಪೀಕರ್ ವಿರುದ್ಧ ಹೊರಟ್ಟಿ ಸಿಟ್ಟು : ಅಸಮಾಧಾನಕ್ಕೆ ಪತ್ರದಲ್ಲಿ ಖಾದರ್‌ ಸ್ಪಷ್ಟನೆ