ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿ : ‘ಗೋ ಬ್ಯಾಕ್‌ ಗೌರ್ನರ್‌’ ಕಾಂಗ್ರೆಸ್‌ ಕಾರ್ಯಕರ್ತರ ಘೋಷಣೆ

KannadaprabhaNewsNetwork |  
Published : Aug 20, 2024, 12:55 AM ISTUpdated : Aug 20, 2024, 04:19 AM IST
ಪ್ರತಿ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೋಲೀಸರು ತನಿಖೆಗೆ ಅನುಮತಿ ಕೇಳದಿದ್ದರೂ ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರ ನಡೆ ಸಂವಿಧಾನ ವಿರೋಧಿಯಾಗಿದ್ದು, ತಕ್ಷಣ ಅನುಮತಿಯನ್ನು ವಾಪಸ್ ಪಡೆಯಬೇಕೆಂಬುದು ಕಾಂಗ್ರೆಸ್‌ ಆಗ್ರಹ.

  ಚಿಂತಾಮಣಿ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯಪಾಲರು ಹಾಗೂ ಬಿಜೆಪಿ-ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಡಾ. ಎಂ ಸಿ ಸುಧಾಕರ್ ನಿವಾಸದ ಬಳಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ಹಾಗೂ ಬಿಜೆಪಿ-ಜೆಡಿಎಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬೆಂಗಳೂರು ವೃತ್ತಕ್ಕೆ ಬಂದು ಗೋ ಬ್ಯಾಕ್ ಗೌರ್ನರ್‌ ಎಂದು ಧಿಕ್ಕಾರ ಕೂಗಿದರು.

ಸಂವಿಧಾನ ವಿರೋಧಿ ಕ್ರಮ

ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೋಲೀಸರು ತನಿಖೆಗೆ ಅನುಮತಿ ಕೇಳದಿದ್ದರೂ ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರ ನಡೆ ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು ತಕ್ಷಣವೇ ಅನುಮತಿಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಬಹುಮತ ಪಡೆದ ಕಾಂಗ್ರೆಸ್ ಸರ್ಕಾರವನ್ನು ಅಭದ್ರ ಮತ್ತು ಅಸ್ಥಿರತೆಗೊಳಿಸುವ ಹುನ್ನಾರ ನಡೆದಿದೆ. ಯಾವುದೇ ಕಪ್ಪು ಚುಕ್ಕೆ ಇಲ್ಲದ ಸಿದ್ದರಾಮಯ್ಯರ ವಿರುದ್ಧ ವಿನಾಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರ ಪರವಾಗಿ ಹೈಕಮಾಂಡ್ ಸಚಿವರು, ಶಾಸಕರು, ಜನಪ್ರತಿನಿಧಿಗಳು ಮತ್ತು ರಾಜ್ಯದ ಜನತೆ ಇದ್ದಾರೆಂದರು.

ಇಂದು ಬೃಹತ್‌ ಪ್ರತಿಭಟನೆ

ಐದು ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯರವರು ಸಮರ್ಪಕವಾಗಿ ಜಾರಿಗೊಳಿಸಿರುವುದನ್ನು ಸಹಿಸಿಕೊಳ್ಳಲು ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ. ಅವರ ಜನಪ್ರಿಯತೆಗೆ ಕುಂದು ತರುವ ದುರುದ್ದೇಶದಿಂದಲೇ ಪ್ರತಿಪಕ್ಷಗಳು ರಾಜಭವನದ ಮೂಲಕ ಷಡ್ಯಂತ್ರ ನಡೆಸಿದ್ದಾರೆಂದು ಆರೋಪಿಸಿದರು. ಸೋಮವಾರದಂದು ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದ ಮುಂಭಾಗದಿಂದ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆಯಿತ್ತರು.

ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮುರುಗಮಲ್ಲ ಲಕ್ಷ್ಮೀನಾರಾಯಣರೆಡ್ಡಿ, ಡಾಬಾ ನಾಗರಾಜ್, ಮುಖಂಡ ಡಾ. ಬಾಲಾಜಿರೆಡ್ಡಿ. ಅಶ್ವಥ್ ನಾರಾಯಣ ಬಾಬು. ಕೆಪಿಸಿಸಿ ಸದಸ್ಯರಾದ ಸೈಯದ್ ಎಜಾಜ್, ಕೃಷ್ಣಮೂರ್ತಿ, ಪಕ್ಷದ ಕಾರ್ಯಕರ್ತರು ಇದ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ