ಬೊಮ್ಮನಹಳ್ಳಿಯಲ್ಲಿ ‘ಬಾಗಿಲಿಗೆ ಸರ್ಕಾರ’ ಯಶಸ್ವಿ

KannadaprabhaNewsNetwork |  
Published : Jan 12, 2024, 01:46 AM ISTUpdated : Jan 12, 2024, 11:28 AM IST
ಡಿಕೆಶಿ | Kannada Prabha

ಸಾರಾಂಶ

ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಕಾರ್ಯಕ್ರಮ ಜರಗನಹಳ್ಳಿಯಲ್ಲಿ ಯಶಸ್ವಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ/ ಬೊಮ್ಮನಹಳ್ಳಿ

ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಘೋಷ ವಾಕ್ಯದಡಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಕಾರ್ಯಕ್ರಮ ಜರಗನಹಳ್ಳಿ ಸರ್ಕಾರಿ ಆಟದ ಮೈದಾನದಲ್ಲಿ ಯಶಸ್ವಿಯಾಗಿ ನಡೆಯಿತು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿ.ಕೆ.ಸುರೇಶ್, ಸ್ಥಳೀಯ ಶಾಸಕ ಎಂ.ಕೃಷ್ಣಪ್ಪ, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಅಜಿತ್, ಕಾಂಗ್ರೆಸ್ ಮುಖಂಡರಾದ ಉಗ್ರಪ್ಪ, ಆರ್.ಕೆ.ರಮೇಶ್, ಜಿಲ್ಲಾಧ್ಯಕ್ಷ ಓ.ಮಂಜುನಾಥ್, ಬೆಂಗಳೂರು ನಗರ ವ್ಯಾಪ್ತಿಯ ಬಿಡಿಎ, ಬಿಬಿಎಂಪಿ, ಬಿಎಂಟಿಸಿ, ಬಿಎಂಆರ್‌ಸಿಎಲ್, ಬಿಎಂಆರ್‌ಡಿಎ, ಕಂದಾಯ, ಬೆಸ್ಕಾಂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಸಮಸ್ಯೆಗಳನ್ನು ಹೊತ್ತು ತಂದಿದ್ದರು. ವಿವಿಧ ಇಲಾಖೆಗಳ 25ಕ್ಕೂ ಹೆಚ್ಚಿನ ಕೌಂಟರ್ ತೆರೆಯಲಾಗಿದ್ದು, ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕವಾಗಿ ಮಾಡಲಾಗಿರುವ ಆಸನದ ವ್ಯವಸ್ಥೆ ಬಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವಯಂ ತೆರಳಿ ಅಹವಾಲು ಸ್ವೀಕರಿಸಿದರು. ಅಲ್ಲದೆ ನೋಂದಣಿ ಮಾಡಿಸಿಕೊಂಡ ಪ್ರತಿಯೊಬ್ಬರಿಂದ ಸಮಸ್ಯೆ ಆಲಿಸಿ ಕೆಲವಕ್ಕೆ ಸ್ಥಳದಲ್ಲೇ ಪರಿಹಾರ ಒದಗಿಸಿದರು.

ಇದೇ ಸಂದರ್ಭದಲ್ಲಿ ಸಾವಿರಾರು ಜನರು ವಾಸಕ್ಕೆ ಮನೆಯಿಲ್ಲ, ಉದ್ಯೋಗವಿಲ್ಲ, ಚಿಕಿತ್ಸೆಗಾಗಿ, ಮೂಲ ಸೌಲಭ್ಯ ಕೊರೆತೆ, ಬಹುಮಹಡಿ ಕಟ್ಟಡಕ್ಕೆ ₹1 ಲಕ್ಷ ನೀಡಿ 6 ವರ್ಷವಾದರೂ ಪ್ಲಾಟ್ ಸಿಕ್ಕಿಲ್ಲ, ವಿಧವಾ ವೇತನ, ವೃದ್ಧಾಪ್ಯ ವೇತನ, ಪಿಂಚಣಿ, ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನ, ಅನೇಕ ಸಮಸ್ಯೆಗಳನ್ನು ಡಿಕೆಶಿ ಅವರ ಮುಂದೆ ತೋಡಿಕೊಂಡರು.

ನಮ್ಮ ಸರ್ಕಾರ ಜನಪರ: ಡಿಕೆಶಿ
ಈ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಜನಸೇವೆಯೇ ಜನಾರ್ದನ ಸೇವೆ ಎಂದು ನಂಬಿ ನಾವು ಕೆಲಸ ನಿರ್ವಹಿಸುತ್ತಿದ್ದೇವೆ.

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ದೊಡ್ಡವನಾಗಲು ಪ್ರಯತ್ನಿಸಬೇಡ, ಒಳ್ಳೆಯವನಾಗಲು ಪ್ರಯತ್ನಿಸು, ಆಗ ತಂತಾನೇ ದೊಡ್ಡವನಾಗುತ್ತೀಯಾ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಜನಪರ ಸರ್ಕಾರವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ಜನರ ಸಮಸ್ಯೆಗಳಿಗೆ ಪರಿಹಾರ ಕೊಟ್ಟು ಅವರಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದವರೇ ಇಂದು ಗ್ಯಾರಂಟಿ ಹೆಸರಲ್ಲಿ ಪ್ರಚಾರ ಪಡೆಯುತ್ತಿದ್ದಾರೆ ಎಂದರು.

ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರಗೌಡ, ಎಚ್.ಎಸ್.ಆರ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಾಸುದೇವ ರೆಡ್ಡಿ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

ರಸ್ತೆ ಸಮಸ್ಯೆ ಬಗೆಹರಿಸಿ: ಶಾಸಕ ಕೃಷ್ಣಪ್ಪ
ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಬನ್ನೇರುಘಟ್ಟ ರಸ್ತೆಯ ಅಂಜನಾಪುರ ರಸ್ತೆ ಸಮಸ್ಯೆ ಬಗೆಹರಿಸಿ ಕೊಡಿ, ಪಶು ವೈದ್ಯಕೀಯ ಆಸ್ಪತ್ರೆಗಳನ್ನು ಸ್ಥಳಾಂತರಿಸಬೇಡಿ, ಕೋಣನಕುಂಟೆ ಸಿಗ್ನಲ್ ಬಳಿ ಮೆಟ್ರೋದವರು ಅಳವಡಿಸಿರುವ ತಂತಿ ಬೇಲಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ, ನಮ್ಮ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಕೂಡ ಹೆಚ್ಚಾಗಿದೆ ದಯವಿಟ್ಟು ನಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನಹರಿಸಿ ಪರಿಹಾರ ನೀಡಿ, ನಮ್ಮ ರಾಜಕೀಯದ ಎಲೆ ಉದುರುತ್ತೆ, ಅರಳುತ್ತೆ ಸದಾ ಜನರ ಸೇವೆ ಮಾಡಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು