ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸಿದವರು ಗುತ್ತಿಗೆದಾರರು, ಅಧಿಕಾರಿಗಳೇ ಹೊರತು ಜನರಲ್ಲ ಎಂದು ಆರ್.ಅಶೋಕ್ ಫಲಿತಾಂಶವನ್ನು ವಿಶ್ಲೇಷಿಸಿದರು.
ಮಂಡ್ಯ : ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸಿದವರು ಗುತ್ತಿಗೆದಾರರು, ಅಧಿಕಾರಿಗಳೇ ಹೊರತು ಜನರಲ್ಲ ಎಂದು ಆರ್.ಅಶೋಕ್ ಫಲಿತಾಂಶವನ್ನು ವಿಶ್ಲೇಷಿಸಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ತಗ್ಗಹಳ್ಳಿ ಜಿಪಂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಉಪ ಚುನಾವಣೆಯಲ್ಲಿ ಬಿಜೆಪಿಗೆ ಒಳ್ಳೆಯ ಫಲಿತಾಂಶ ಬಂದಿಲ್ಲ. ಕಾಂಗ್ರೆಸ್‌ನವರು ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಮೂರು ಸೀಟ್ ಗೆದ್ದಿದ್ದಕ್ಕೇ ಥಕ ಥಕ ಅಂತ ಕುಣಿಯುತ್ತಿದ್ದಾರೆ. ಹಿಂದೆ ನಾವು 18 ಕ್ಷೇತ್ರಗಳಲ್ಲಿ ಗೆದ್ದಿದ್ದೆವು ಅನ್ನೋದನ್ನ ಮರೆತಿದ್ದಾರೆ. 2028 ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಈ ಸಿಕ್ಕಿರೋ ಮೂರು ತಿರುಪತಿ ನಾಮವೇ ಗತಿ ಎಂದು ವ್ಯಂಗ್ಯವಾಡಿದರು.
ಜನರ ತೀರ್ಪು ಕಾಂಗ್ರೆಸ್ ಪರವಾಗಿಲ್ಲ. ಭಯಕ್ಕೆ ಚುನಾವಣೆ ಆಗಿದೆ. ಜನರು ನಮಗೆ ಕ್ಲೀನ್‌ಚಿಟ್ ನೀಡಿದ್ದಾರೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಕ್ಲೀನ್ ಚಿಟ್ ನೀಡಬೇಕಿರುವುದು ನ್ಯಾಯಾಲಯವೇ ಹೊರತು ಜನರಲ್ಲ ಎಂದು ಟೀಕಿಸಿದರು.
ತೆರೆದ ಪುಸ್ತಕದಲ್ಲಿ ಕಾಣೊದೆಲ್ಲಾ ಅಕ್ರಮವೇ..!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಜೀವನ ತೆರೆದ ಪುಸ್ತಕ ಅಂತಾರೆ. ಅದನ್ನು ತೆರೆದರೆ ಕಾಣೋದು ಹ್ಯೂಬ್ಲೆಟ್ ವಾಚು, ಮುಡಾ ಸೈಟುಗಳು, ವಾಲ್ಮೀಕಿ, ದಲಿತರ ಹಣವನ್ನು ನುಂಗಿರುವ ಅಕ್ರಮಗಳೇ ಕಾಣಿಸುತ್ತವೆ. ಬೆಂಗಳೂರು, ಮೈಸೂರಿನಲ್ಲಿ ಮನೆ ಇದೆ. ಸಿದ್ದರಾಮಯ್ಯನ ಹುಂಡಿಯಲ್ಲಿ ಜಮೀನು ಇದೆ. ಓಡಾಡುವುದಕ್ಕೆ ಕಾರು ಎಲ್ಲಾ ಇದ್ದರೂ ಸಿದ್ದರಾಮಯ್ಯಗೆ 14 ಸೈಟ್ ಬೇಕಿತ್ತಾ ಎಂದು ಪ್ರಶ್ನಿಸಿದ ಅಶೋಕ್, ನ್ಯಾಯಾಲಯ ಕ್ಲೀನ್‌ಚಿಟ್ ನೀಡೋವರೆಗೂ ನೀವು ಲೂಟಿ ರಾಮಯ್ಯನೇ ಎಂದು ವಾಗ್ದಾಳಿ ನಡೆಸಿದರು.
ನದಿ ನೀರಿಗೂ ತೆರಿಗೆ ಹಾಕ್ತಿದ್ದಾರೆ..!
ಬಿಜೆಪಿಯನ್ನು 40 ಪರ್ಸೆಂಟ್ ಸರ್ಕಾರ ಎಂದು ಜರಿದರು. ಲೋಕಾಯುಕ್ತ ತನಿಖೆಗೆ ಹೋಗಿದ್ದರೂ ಇದುವರೆಗೂ ಸಾಕ್ಷಿನೇ ಕೊಟ್ಟಿಲ್ಲ. ರಾಜ್ಯದ ಸಿಎಂ ಆಗಿ ಸಿದ್ದರಾಮಯ್ಯ ಲೂಟಿ ಹೊಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿಯ 40 ಪರ್ಸೆಂಟ್ ಹಣ ಸಾಕು ಎನ್ನುತ್ತಿದ್ದವರು ಈಗ ಹಾಲು, ಪೆಟ್ರೋಲ್, ಡಿಸೇಲ್, ವಿದ್ಯುತ್, ಮದ್ಯ, ಕುಡಿಯುವ ನೀರು ಹೀಗೆ ಸಿಕ್ಕ ಸಿಕ್ಕದರ ಮೇಲೆಲ್ಲಾ ತೆರಿಗೆ ಹಾಕುತ್ತಿದ್ದಾರೆ. ಕೊನೆಗೆ ಪ್ರಕೃತಿದತ್ತವಾಗಿ ಸಿಗುವ ನದಿ ನೀರಿಗೂ ತೆರಿಗೆ ಹಾಕಲು ಹೊರಟಿರುವ ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು ಎಂದು ದೂಷಿಸಿದರು.
ಬಜೆಟ್‌ಗೆ 1 ಲಕ್ಷ ಕೋಟಿ ರು.ಸಾಲ:
ಇನ್ನು ಮೂರು ತಿಂಗಳಲ್ಲಿ ಬಜೆಟ್ ಮಂಡಿಸಬೇಕಿರುವ ಸಿದ್ದರಾಮಯ್ಯ ೧ ಲಕ್ಷ ಕೋಟಿ ರು. ಸಾಲ ಮಾಡುತ್ತಿದ್ದಾರೆ. ಈ ಸಾಲ ಎಲ್ಲಾ ಜನರ ತಲೆಯ ಮೇಲೆ ಬರುತ್ತೆ. ನಿಮ್ಮ ಮೇಲೆ ಮತ್ತಷ್ಟು ತೆರಿಗೆ ಹಾಕುತ್ತಾರೆ. ಜನರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲಿದ್ದಾರೆ ಎಂದು ಕಿಡಿಕಾರಿದರು.
ನಾವು ಅನುಮತಿ ಕೊಡಿಸಬೇಕಂತೆ:
ನಾನು ಬಡವರ ಪರ, ರೈತರ ಪರ ಎನ್ನುವ ಸಿದ್ದರಾಮಯ್ಯ ಅವರಿಗಾಗಿ ಏನು ಮಾಡಿದ್ದಾರೆ. ಮೈಸೂರು ಸಂಸ್ಥಾನದವರು ತಮ್ಮ ಮನೆಯವರ ಚಿನ್ನಾಭರಣವನ್ನೆಲ್ಲಾ ಅಡವಿಟ್ಟು ಕೆಆರ್‌ಎಸ್ ಅಣೆಕಟ್ಟು ಕಟ್ಟಿಸಿದರು. ಮಂಡ್ಯ, ಮೈಸೂರು, ಬೆಂಗಳೂರಿನ ಜನರಿಗೆ ನೀರು ಕೊಟ್ಟರು. ಸಿದ್ದರಾಮಯ್ಯ ಯಾವ ಡ್ಯಾಮ್ ಕಟ್ಟಿಸಿದ್ದಾರೆ. ಯಾವ ಕಾರ್ಖಾನೆ ಕಟ್ಟಿದ್ದಾರೆ, ಒಂದು ಆಸ್ಪತ್ರೆಯನ್ನೂ ಕಟ್ಟಿಸಲು ಅವರಿಂದ ಸಾಧ್ಯವಾಗಿಲ್ಲ ಎಂದು ಕುಟುಕಿದ ಅಶೋಕ್, ಮೇಕೆದಾಟಿಗೆ ನಾವು ಅನುಮತಿ ಕೊಡಿಸಬೇಕಂತೆ. ತಮಿಳುನಾಡಿನವರು ಕಾಂಗ್ರೆಸ್‌ನವರ ಸ್ನೇಹಿತರಲ್ಲವೇ. ಅವರು ಕೇಳಿದರೆ ಅನುಮತಿ ಕೊಡುವುದಿಲ್ಲವೇ ಎಂದು ಪ್ರಶ್ನಿಸಿದರು.
ನಮ್ಮ ಧರ್ಮ, ದೇಶ ಉಳಿಯಬೇಕು:
ಭಾರತ-ಪಾಕಿಸ್ತಾನ ಯುದ್ಧ ನಡೆದ ಸಂದರ್ಭದಲ್ಲೇ ನಮಗೆ ಕಪ್ಪು ಮಸಿ ಬಳಿದರು. ಮುಸ್ಲಿಮರಿಗೆ ಆಗಲೇ ಭಾಗ ಕೊಟ್ಟಿದ್ದೇವೆ ಇವಾಗ ಸಿಕ್ಕಿದನ್ನೆಲ್ಲ ನಮ್ಮದು ಎನ್ನುತ್ತಿದ್ದಾರೆ. ವಕ್ಫ್ ವಿವಾದದಲ್ಲಿ ಅವರು ಒಗ್ಗಟ್ಟಾಗಿದ್ದಾರೆ ನಮ್ಮಲ್ಲೇಕೆ ಯಾಕೆ ಒಗ್ಗಟ್ಟು ಇಲ್ಲ. ಈಗ ನಾವು ಎಚ್ಚರಗೊಳ್ಳದಿದ್ದರೆ ಮನೆ-ಆಸ್ತಿಯನ್ನು ಮಕ್ಕಳಿಗೆ ಕೊಡಲಾಗುವುದೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಭೈರತಿ ಬಸವರಾಜು, ಮೈಸೂರು-ಕೊಡಗು ಸಂಸದ ಯದುವೀರ್, ಕೋಲಾರ ಮಾಜಿ ಸಂಸದ ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮುಖಂಡ ಎಸ್.ಸಚ್ಚಿದಾನಂದ, ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜು, ಮೈಷುಗರ್ ಮಾಜಿ ಅಧ್ಯಕ್ಷ ಶಿವಲಿಂಗಯ್ಯ, ಟಿ.ಶ್ರೀಧರ್, ಅಶೋಕ್, ಪೀಹಳ್ಳಿ ರಮೇಶ್, ಮಂಗಳಾ, ಬೇವಿನಹಳ್ಳಿ ಮಹೇಶ್, ರಾಮಚಂದ್ರ, ಅಜಯ್, ಸಿದ್ದೇಗೌಡ ಇತರರಿದ್ದರು.