ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ನ ಆಡಳಿತ ಮಂಡಳಿಗೆ ಜನವರಿ 5ರಂದು ಚುನಾವಣೆ

KannadaprabhaNewsNetwork | Updated : Dec 24 2024, 03:20 AM IST

ಸಾರಾಂಶ

ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ನ ಆಡಳಿತ ಮಂಡಳಿಗೆ ಜನವರಿ 5ರಂದು ಚುನಾವಣೆ ನಡೆಯಲಿದೆ

 ಬಂಗಾರಪೇಟೆ : ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ನ ಆಡಳಿತ ಮಂಡಳಿಗೆ ಜನವರಿ ೫ರಂದು ಚುನಾವಣೆ ನಡೆಯಲಿದೆ. ಮತ್ತೆ ಬ್ಯಾಂಕಿನ ಆಡಳಿತ ಮಂಡಳಿ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೈತ್ರಿ ಪಕ್ಷಗಳಾದ ಬಿಜೆಪಿ ಜೆಡಿಎಸ್ ನಾಯಕರು ಚುನಾವಣೆ ಬಗ್ಗೆ ನಿರಾಸಕ್ತಿ ಹೊಂದಿದ್ದು, ಕಾಂಗ್ರೆಸ್‌ ಆಕಾಂಕ್ಷಿಗಳಲ್ಲಿ ಭಾರೀ ಪೈಪೋಟಿ ಕಂಡುಬರುತ್ತಿದೆ.

ಕಳೆದ ಹಲವು ದಶಕಗಳಿಂದ ಭೂಬ್ಯಾಂಕ್‌ನ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ ಪಾರುಪತ್ಯ ಸಾಧಿಸಿಕೊಂಡು ಬರುತ್ತಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಇಲ್ಲದಿರುವಾಗ ಇಬ್ಬರೂ ಅಖಾಡಕ್ಕೆ ಇಳಿಯುತ್ತಿದ್ದರು. 

ಆದರೆ ಮೈತ್ರಿಯ ಬಳಿಕ ಯಾಕೋ ಈ ಬ್ಯಾಂಕಿನ ಚುನಾವಣೆಯಲ್ಲಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಉತ್ಸಾಹ ತೋರುತ್ತಿಲ್ಲ,ಇದರಿಂದ ಈ ಬಾರಿ ಎರಡೂ ಪಕ್ಷಗಳ ಬೆಂಬಲಿತರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧೆಗಿಳಿಯಲು ಚಿಂತಿಸಿದ್ದಾರೆಂದು ತಿಳಿದು ಬಂದಿದೆ.ಬಿಜೆಪಿ- ಜಡಿಎಸ್‌ ಮೌನ

ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಪ್ರಬಲವಾಗಿದ್ದರೂ ಸಂಸದರೂ ಸಹ ಜೆಡಿಎಸ್‌ನಿಂದ ಗೆದ್ದಿದ್ದರೂ ಸಹ ಈ ಚುನಾವಣೆಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಿಂದೇಟು ಹಾಕುತ್ತಿರುವುದು ಕಾರ್ಯಕರ್ತರಲ್ಲಿ ನಿರಾಸೆ ಮನೆ ಮಾಡಿಸಿದೆ. ಒಂದು ಮೂಲದ ಪ್ರಕಾರ ಮತದಾರರ ಪಟ್ಟಿಯಲ್ಲಿ ಬಹುತೇಕ ಮೈತ್ರಿ ಪಕ್ಷಗಳ ಬೆಂಬಲಿತ ಶೇರುದಾರರ ಹೆಸರುಗಳು ನಾಪತ್ತೆಯಾಗಿವೆ ಮತ್ತು ನಿರ್ದೇಶಕರ ಸ್ಥಾನಗಳ ಮೀಸಲಾತಿಯಲ್ಲಿಯೂ ಅನುಕೂಲವಿಲ್ಲದ ಕಾರಣ ಈ ಚುನಾವಣೆಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ಜಯ ದೊರೆಯುವುದಿಲ್ಲ ಎಂಬ ಕಾರಣಕ್ಕೆ ಚುನಾವಣೆಯಿಂದ ಹಿಂದೆ ಸರಿಯುವಂತಾಗಿದೆ ಎಂದು ತಿಳಿದು ಬಂದಿದೆ.೩೬೩೦ ಮಂದಿಗೆ ಮತ ಹಕ್ಕಿಲ್ಲ

ಭೂ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಒಟ್ಟು 17 ಸ್ಥಾನಗಳಿದ್ದು 16 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ, ಒಂದು ಸ್ಥಾನ ಸರ್ಕಾರಿ ನಾಮನಿರ್ದೇಶಿತರಾಗಿರುತ್ತಾರೆ. ಒಟ್ಟು 1281 ಮತದಾರರಿದ್ದು, ಸಾಲಗಾರರಲ್ಲದ ಕ್ಷೇತ್ರದಲ್ಲಿ ಹೆಚ್ಚಿನ ೫೦೫ ಮತದಾರರಿದ್ದಾರೆ. ಕೆಜಿಎಫ್ ಕ್ಷೇತ್ರದಲ್ಲಿ ಕೇವಲ 18 ಮತದಾರರಿದ್ದಾರೆ. ಸುಸ್ತಿದಾರರು ೪೬ಮಂದಿ, ಷೇರು ಸುಸ್ತಿದಾರರು 66 ಮಂದಿಯಿದ್ದಾರೆ. ಅಲ್ಲದೆ ಒಟ್ಟು 3630 ಮಂದಿ ಮತದಾನದ ಹಕ್ಕು ಕಳೆದುಕೊಳ್ಳುವ ಸಾಧ್ಯತೆ ಇದೆ.

Share this article