ಮಂಡ್ಯ ಮಂಜುನಾಥ
ಮುಂಬರುವ ಲೋಕಸಭಾ ಚುನಾವಣೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ಸಂಸತ್ ಸ್ಥಾನಕ್ಕೆ ಸ್ಪರ್ಧಿಸಿ ಗೆಲ್ಲುವ ಅಭ್ಯರ್ಥಿಯ ಕೊರತೆ ಕೈಪಾಳಯವನ್ನು ತೀವ್ರವಾಗಿ ಕಾಡುತ್ತಿದೆ. ಪಕ್ಷವನ್ನು ಪ್ರತಿನಿಧಿಸಲಿರುವ ಅಭ್ಯರ್ಥಿ ಆಯ್ಕೆಗೆ ಗಂಭೀರ ಕಸರತ್ತು ಆರಂಭಗೊಂಡಿದೆ. ಒಮ್ಮೆ ಫಲಿತಾಂಶ ವ್ಯತ್ಯಾಸವಾದರೆ ಸಚಿವ ಸ್ಥಾನ ಕೈಬಿಟ್ಟುಹೋಗುವ ಆತಂಕವೂ ಸಹಜವಾಗಿಯೇ ಚಲುವರಾಯಸ್ವಾಮಿ ಅವರನ್ನು ಕಾಡುತ್ತಿದೆ.
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕೆ.ಆರ್.ಪೇಟೆ ಕ್ಷೇತ್ರವನ್ನು ಹೊರತುಪಡಿಸಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಶಾಸಕರು ಅಧಿಕಾರದಲ್ಲಿದ್ದಾರೆ. ಕ್ಷೇತ್ರದೊಳಗೆ ಬಲಿಷ್ಠ ಪ್ರಾಬಲ್ಯವನ್ನು ಹೊಂದಿರುವ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಹಾಗಾಗಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವುದು ಕೈಪಡೆಗೆ ಅನಿವಾರ್ಯವಾಗಿದೆ.ಸ್ಥಳೀಯರಲ್ಲಿ ಸಮರ್ಥರ ಕೊರತೆ:
ಕಾಂಗ್ರೆಸ್ ಪಕ್ಷಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿ ಸಿಗದಿದ್ದರೆ ಸಚಿವ ಎನ್. ಚಲುವರಾಯಸ್ವಾಮಿ ಅವರೇ ಅಖಾಡ ಪ್ರವೇಶಿಸುವ ಅನಿವಾರ್ಯತೆ ಎದುರಾಗುವ ಸಾಧ್ಯತೆಗಳೂ ಇವೆ. ಇದನ್ನು ಗಮನದಲ್ಲಿಟ್ಟುಕೊಂಡು ಚಲುವರಾಯಸ್ವಾಮಿ ಅವರು ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
೨೦೧೪ರ ಲೋಕಸಭಾ ಚುನಾವಣೆಯಲ್ಲಿ ಆರು ತಿಂಗಳ ಅವಧಿಗೆ ಸಂಸದೆಯಾಗಿ ಸ್ಪರ್ಧಿಸಿ ಗೆದ್ದಿದ್ದ ನಟಿ ರಮ್ಯಾ ಅವರನ್ನು ಮತ್ತೊಮ್ಮೆ ಕ್ಷೇತ್ರಕ್ಕೆ ಕರೆತರುವ ಪ್ರಯತ್ನಗಳು ತೆರೆ-ಮರೆಯಲ್ಲಿ ಬಿರುಸಿನಿಂದ ಸಾಗಿವೆ. ಆದರೆ, ರಮ್ಯ ಕ್ಷೇತ್ರಕ್ಕೆ ವಾಪಸ್ ಬರುವುದು ಸ್ಥಳೀಯವಾಗಿ ಅನೇಕ ನಾಯಕರಿಗೆ ಇಷ್ಟವಿಲ್ಲ. ಸಿನಿಮಾ ನಟರು ಕ್ಷೇತ್ರಕ್ಕೆ ಬೇಡ ಎಂಬ ನಿಲುವಿಗೆ ಅಂಟಿಕೊಂಡಿರುವುದು ಮತ್ತೊಂದು ಕಾರಣವಾಗಿದೆ. ಒಮ್ಮೆ ರಮ್ಯಾ ಜಿಲ್ಲೆಗೆ ಬಂದು ಚುನಾವಣೆಯಲ್ಲಿ ಗೆದ್ದರೆ ರಾಜಕೀಯವಾಗಿ ವರಿಷ್ಠರಿಂದ ಕಡೆಗಣನೆಗೆ ಒಳಗಾಗುತ್ತೇವೆಂಬ ಭಯ ಸ್ಥಳೀಯ ನಾಯಕರನ್ನು ಬಾಧಿಸುತ್ತಿದೆ.
೨೦೧೮ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಸೋತು ತನ್ನ ನೆಲೆಯನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್ ೨೦೨೩ರ ಚುನಾವಣೆಯಲ್ಲಿ ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಈಗ ಇತಿಹಾಸ. ೨೦೧೯ರ ಲೋಕಸಭಾ ಚುನಾವಣೆಯಿಂದ ಆರಂಭಗೊಂಡು ಒಂದು ವಿಧಾನಸಭೆ ಉಪ ಚುನಾವಣೆ, ಎರಡು ವಿಧಾನ ಪರಿಷತ್ ಚುನಾವಣೆಯಲ್ಲಿ ಕ್ಷೇತ್ರದೊಳಗೆ ಬಲವಾಗಿ ಬೇರೂರಿದ್ದ ಜೆಡಿಎಸ್ ಪಕ್ಷವನ್ನು ಮಣಿಸುವಲ್ಲಿ ಚಲುವರಾಯಸ್ವಾಮಿ ನಡೆಸಿದ ಗೇಮ್ ಪ್ಲಾನ್ ದೊಡ್ಡದು. ಅದೇ ರೀತಿಯಲ್ಲಿ ೨೦೨೩ರ ಚುನಾವಣಾ ನೇತೃತ್ವ ವಹಿಸಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಅಲ್ಲಲ್ಲಿ ಧನಲಕ್ಷ್ಮೀ ಪ್ರತ್ಯಕ್ಷ್ಯ..!
ಮುಂಬೈನಲ್ಲಿ ಕೆಸಿಎನ್ ಭೇಟಿ;
ಜೆಡಿಎಸ್‌ನಿಂದ ಸಿ.ಎಸ್.ಪುಟ್ಟರಾಜು ಸ್ಪರ್ಧೆ ಮುನ್ನೆಲೆಗೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದಿಂದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಸ್ಪರ್ಧೆ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರ ಪ್ರವೇಶಿಸುವ ಸಾಧ್ಯತೆಗಳು ಕ್ಷೀಣಿಸಿರುವುದುರಿಂದ ಸಿ.ಎಸ್.ಪುಟ್ಟರಾಜು ಮತ್ತೆ ಸಂಸತ್ ಸ್ಥಾನದ ಅದೃಷ್ಟಪರೀಕ್ಷೆಗಿಳಿಯಬಹುದು ಎಂದು ಹೇಳಲಾಗುತ್ತಿದೆ.ಈಗಾಗಲೇ ಕ್ಷೇತ್ರದೊಳಗೆ ಸಿ.ಎಸ್.ಪುಟ್ಟರಾಜು ನಿಧಾನಗತಿಯಲ್ಲಿ ಚುನಾವಣಾ ತಾಲೀಮು ಆರಂಭಿಸಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಸಮಯದಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರ ಜೆಡಿಎಸ್ ಕೈಸೇರುವ ವಿಶ್ವಾಸದೊಂದಿಗೆ ಚುನಾವಣೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ.
೨೦೨೪ರ ಚುನಾವಣಾ ಸೋಲಿನ ಬಳಿಕ ಇದೀಗ ಮತ್ತೆ ಜನರ ಮಧ್ಯದಲ್ಲಿ ಗುರುತಿಸಿಕೊಳ್ಳುತ್ತಾ, ಚುನಾವಣೆಯಲ್ಲಿ ದೂರ ಸರಿದಿದ್ದವರನ್ನು ಮತ್ತೆ ಹತ್ತಿರ ಮಾಡಿಕೊಳ್ಳುತ್ತಾ, ಮುಖಂಡರು- ಕಾರ್ಯಕರ್ತರ ಹೊಸ ಉತ್ಸಾಹವನ್ನು ತುಂಬುವುದರೊಂದಿಗೆ ಕಳೆದುಹೋಗಿರುವ ಕ್ಷೇತ್ರವನ್ನು ಮತ್ತೆ ಹಿಡಿತಕ್ಕೆ ತೆಗೆದುಕೊಳ್ಳುವುದು, ಚುನಾವಣೆಯಲ್ಲಿ ಗೆಲುವು ಸಾಧಿಸುವುದನ್ನೇ ಗುರಿಯಾಗಿಸಿಕೊಂಡು ಮುನ್ನಡೆಯುತ್ತಿದ್ದಾರೆ.೨೦೧೫ರಲ್ಲಿ ಕಾಂಗ್ರೆಸ್ ಸಂಸದರಾಗಿದ್ದ ನಟಿ ರಮ್ಯಾ ಅವರನ್ನೇ ಸೋಲಿಸಿ ಮೊದಲಬಾರಿಗೆ ಸಿ.ಎಸ್.ಪುಟ್ಟರಾಜು ಲೋಕಸಭೆಗೆ ಪ್ರವೇಶ ಪಡೆದಿದ್ದರು. ಇದೀಗ ಎರಡನೇ ಬಾರಿಗೆ ಲೋಕಸಭೆ ಪ್ರವೇಶಿಸುವುದಕ್ಕೆ ಉತ್ಸುಕರಾಗಿದ್ದಾರೆ. ಕಾಂಗ್ರೆಸ್ ಸೇರುವುದಾದರೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡಿ ಗೆಲ್ಲಿಸುವ ಆಫರ್ ಕೂಡ ಸಿ.ಎಸ್.ಪುಟ್ಟರಾಜು ಅವರಿಗೆ ಬಂದಿತ್ತು ಎನ್ನಲಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೇಲಿನ ಅಪಾರ ಅಭಿಮಾನ, ಗೌರವದ ಕಾರಣದಿಂದ ಆ ಆಫರ್‌ನ್ನು ಪುಟ್ಟರಾಜು ತಿರಸ್ಕರಿಸಿದ್ದರು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿಯೇ ಕಣಕ್ಕಿಳಿದು ಸಂಸತ್‌ನಲ್ಲಿ ಜೆಡಿಎಸ್ ಬಾವುಟ ಹಾರಿಸಬೇಕೆನ್ನುವುದು ಸಿ.ಎಸ್.ಪುಟ್ಟರಾಜು ಉತ್ಕಟಾಕಾಂಕ್ಷೆಯಾಗಿದೆ ಎಂದು ಹೇಳಲಾಗಿದೆ.