ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಕಡೆಗೂ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಖಡಕ್ ಸೂಚನೆ ದೊರೆತ ಹಿನ್ನೆಲೆಯಲ್ಲಿ ತಡವಾದರೂ ಪಟ್ಟಣದಲ್ಲಿ ಕಸ ವಿಲೇವಾರಿಗೆ ಪುರಸಭೆ ಅಧಿಕಾರಿಗಳು ಗುರುವಾರ ಮುಂದಾಗಿದ್ದಾರೆ.
ಪತ್ರಿಕೆಯಲ್ಲಿ ವರದಿ ಬಂದ ಬಳಿಕ ಪಟ್ಟಣದ ಕೆಲವು ಕಡೆ ಕಸ ವಿಲೇವಾರಿ ಮಾಡಿತ್ತಾದರೂ ಇನ್ನೂ ಕೆಲವು ಕಡೆ ಕಸ ವಿಲೇ ವಾರಿಗೆ ಪುರಸಭೆ ಅಧಿಕಾರಿಗಳು ಕ್ರಮ ತೆಗೆದು ಕೊಂಡಿರಲಿಲ್ಲದ ಕಾರಣ ಪಟ್ಟಣದದ ನಾಗರೀಕರಲ್ಲಿ ಸಹಜವಾಗಿಯೇ ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶದ ಮಾತು ಕೇಳಿ ಬಂದಿತ್ತು.
ವರದಿಯ ಪರಿಣಾಮ ಎಚ್ಚೆತ್ತ ಅಧಿಕಾರಿಗಳು ಪಟ್ಟಣದ ಕೆಆರ್‌ಸಿ ರಸ್ತೆ, ಹಳ್ಳದ ಕೇರಿ, ಡಾ.ಐತಾಳ್ ಕ್ಲಿನಿಕ್ ರಸ್ತೆ ಹಾಗೂ ಸ್ವಾಮಿಗೌಡ ಮರದ ಡಿಪೋ ಮುಂದೆ ಇದ್ದ ಅಪಾರ ಕಸದ ರಾಶಿಯನ್ನು ಪೌರ ಕಾರ್ಮಿಕರಿಂದ ಟ್ರ್ಯಾಕ್ಟರ್‌ಗೆ ತುಂಬಿ ಕಸ ವಿಲೇವಾರಿ ಮಾಡಿದರು.ಈ ವೇಳೆ ಪುರಸಭೆ ಆರೋಗ್ಯ ನಿರೀಕ್ಷಕ ಗೋಪಿ ಮಾತನಾಡಿ, ಗುರುವಾರ ಮಧ್ಯಾಹ್ನ ಕಸ ವಿಲೇವಾರಿ ಮಾಡಲಾಗಿದ್ದು, ಕಸ ಬೆಳಗ್ಗೆ ಕ್ಲೀನ್ ಮಾಡಿದರೂ ಮತ್ತೆ ಜನರು ಕಸ ಹಾಕುತ್ತಿದ್ದಾರೆ. ಜನರು ಕೂಡ ಸಹಕರಿಸಬೇಕು ಎಂದು ಮನವಿ ಮಾಡಿದರು. ಶಾಸಕ ಗಣೇಶ್ ತಾಕೀತು: ಕನ್ನಡಪ್ರಭ ವರದಿ ಬಳಿಕವೂ ಗುಂಡ್ಲುಪೇಟೆ ಪಟ್ಟಣದ ಇನ್ನೂ ಕೆಲವೆಡೆ ಸಂಪೂರ್ಣ ಕಸ ವಿಲೇವಾರಿಯಾಗಿಲ್ಲ ಎಂಬುದನ್ನು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಗಮನಕ್ಕೆ ತಂದ ಬೆನ್ನಲ್ಲೇ ಶಾಸಕರು ಪುರಸಭೆ ಅಧಿಕಾರಿಗಳಿಗೆ ಗುರುವಾರವೇ ಖಡಕ್ ಸೂಚನೆ ನೀಡಿ, ಪೂರ್ಣ ಕಸ ವಿಲೇವಾರಿಗೆ ಕ್ರಮವಹಿಸುವಂತೆ ತಾಕೀತು ಮಾಡಿದರು.