160 ವರ್ಷ ಹಳೆಯ ‘ಕುಮಾರಕೃಪ’ ಈಗ ಡಿಕೆ ಅಧಿಕೃತ ನಿವಾಸ

Published : Nov 17, 2026, 05:39 AM IST
CM DK Shivakumar Hosts Housewarming Ceremony

ಸಾರಾಂಶ

ಪಾರಂಪರಿಕ ಕಟ್ಟಡವಾದ ‘ಕುಮಾರಕೃಪ’ ಸರ್ಕಾರಿ ಅತಿಥಿ ಗೃಹವನ್ನು ನವೀಕರಣ ಮಾಡಿ ‘ಗಂಗಾ’ ಎಂದು ಮರುನಾಮಕರಣ ಮಾಡಿದ್ದು, ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿ ಪರಿವರ್ತಿಸಲಾಗಿದೆ.ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಡಿ.ಕೆ. ಶಿವಕುಮಾರ್‌ ಅವರು ಸೋಮವಾರ ಕುಟುಂಬ ಸದಸ್ಯರ ಜೊತೆ ಖಾಸಗಿ ಪೂಜೆ ನೆರವೇರಿಸಿದರು.

ಬೆಂಗಳೂರು : ಪಾರಂಪರಿಕ ಕಟ್ಟಡವಾದ ‘ಕುಮಾರಕೃಪ’ ಸರ್ಕಾರಿ ಅತಿಥಿ ಗೃಹವನ್ನು ನವೀಕರಣ ಮಾಡಿ ‘ಗಂಗಾ’ ಎಂದು ಮರುನಾಮಕರಣ ಮಾಡಿದ್ದು, ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿ ಪರಿವರ್ತಿಸಲಾಗಿದೆ.

ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಡಿ.ಕೆ. ಶಿವಕುಮಾರ್‌ ಅವರು ಸೋಮವಾರ ಕುಟುಂಬ ಸದಸ್ಯರ ಜೊತೆ ಖಾಸಗಿ ಪೂಜೆ ನೆರವೇರಿಸಿದರು. ಸೋಮವಾರ ರಾತ್ರಿ ಗಂಗಾ ನಿವಾಸದಲ್ಲೇ ಡಿ.ಕೆ. ಶಿವಕುಮಾರ್‌ ತಂಗಿದ್ದು, ಸದ್ಯದಲ್ಲೇ ನೂತನ ಹಾಗೂ ಅಧಿಕೃತ ನಿವಾಸಕ್ಕೆ ಕುಟುಂಬ ಸ್ಥಳಾಂತರಗೊಳ್ಳಲಿದೆ ಎಂದು ತಿಳಿದುಬಂದಿದೆ.

ಶೇ.10 ಮಾತ್ರ ಮರು ವಿನ್ಯಾಸ:

ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಸರ್ಕಾರಿ ಅತಿಥಿ ಗೃಹವಾದ ಕುಮಾರಕೃಪವನ್ನು ‘ಗಂಗಾ’ ಎಂದು ಮರುನಾಮಕರಣ ಮಾಡಿದ್ದು, ಅಧಿಕೃತ ನಿವಾಸವಾಗಿ ಪರಿವರ್ತಿಸಲಾಗಿದೆ. ಈ ಕಟ್ಟಡದ ಪರಂಪರೆಯನ್ನು ಉಳಿಸಿಕೊಂಡು ಶೇ.10ರಷ್ಟು ಮರು ವಿನ್ಯಾಸ ಮಾಡಲಾಗಿದೆ ಎಂದು ಹೇಳಿದರು.

ನಾನು ತೆಗೆದುಕೊಂಡಿದ್ದ ಸರ್ಕಾರಿ ನಿವಾಸ ಚಿಕ್ಕದಾಗಿತ್ತು, ಈ ಮಧ್ಯೆ ಕುಮಾರಕೃಪ ಅತಿಥಿ ಗೃಹ ಉಪಯೋಗವಾಗದ ಕಾರಣ ನಾನು ಇದನ್ನು ಅಧಿಕೃತ ನಿವಾಸವಾಗಿ ಪರಿವರ್ತಿಸಿ ಖಾಸಗಿ ಪೂಜೆ ನೆರವೇರಿಸಿದ್ದೇನೆ. ಗುರುವಾರ ರಾಜ್ಯದ 224 ಶಾಸಕರು, ರಾಜ್ಯದ ಸಂಸದರು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸುವೆ. ಆ ನಂತರ ನಾನು ಈ ಮನೆಯಲ್ಲಿ ಎಲ್ಲರನ್ನು ಭೇಟಿ ಮಾಡುವೆ. ಈ ನಿವಾಸಕ್ಕೆ ಗಂಗಾ ಎಂದು ನಾಮಕರಣ ಮಾಡಿರುವೆ ಎಂದು ತಿಳಿಸಿದರು.

90% ಖಾಸಗಿ ಪೀಠೋಪಕರಣ ಬಳಕೆ:

ಕೆಲವರು ಇದಕ್ಕೆ ಆಗಿರುವ ಖರ್ಚಿನ ಬಗ್ಗೆ ಪ್ರಶ್ನೆ ಮಾಡಬಹುದು. ಭದ್ರತೆ ಹಾಗೂ ರಸ್ತೆ ಸೌಕರ್ಯಕ್ಕೆ ಹೆಚ್ಚು ವೆಚ್ಚವಾಗಿದೆ. ಉಳಿದಂತೆ 90% ಪೀಠೋಪಕರಣಗಳು ನನ್ನ ಖಾಸಗಿಯಾಗಿವೆ. ನಾನು ಕಡಿಮೆ (60- 80 ರು.) ಮೌಲ್ಯದ ಗ್ರಾನೈಟ್ ಕಲ್ಲನ್ನು ಬಳಸಿದ್ದೇನೆ. ವೆಚ್ಚದ ಬಗ್ಗೆ ಟೀಕೆ ಮಾಡುತ್ತಾರೆ ಎಂಬ ಕಾರಣಕ್ಕೇ ನಾನು ನನ್ನ ಮನೆ, ಕುಮಾರಕೃಪದಲ್ಲಿ ಇದ್ದ ಹಳೇ ಪೀಠೋಪಕರಣ ಇಟ್ಟುಕೊಂಡಿದ್ದೇನೆ. ಕೆಲವರು ಆರ್‌ಟಿಐ ಹಾಕಿದ್ದಾರೆ ಎಂದು ಶಿವಕುಮಾರ್‌ ಹೇಳಿದರು.

ಪ್ರತಿಪಕ್ಷದವರು ಟೀಕೆ ಮಾಡಲಿ:

ಪಾರಂಪರಿಕ ಕಟ್ಟಡವನ್ನು ಬದಲಿಸಿದ್ದಾರೆ ಎಂಬ ಪ್ರತಿಪಕ್ಷಗಳ ಟೀಕೆಗೆ ಉತ್ತರಿಸಿದ ಶಿವಕುಮಾರ್, ‘ಅವರು ಇರುವುದೇ ಟೀಕೆ ಮಾಡಲು. ಅದು ಅವರ ಕರ್ತವ್ಯ. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವೆ ಅವರು ಬಂದು ನೋಡಲಿ’ ಎಂದರು.

ಸಾರ್ವಜನಿಕರ ಭೇಟಿಗೆ ಅವಕಾಶವಿದೆಯೇ ಎಂದು ಕೇಳಿದಾಗ, ಶಾಸಕರು, ಅಧಿಕಾರಿಗಳ ಭೇಟಿ, ಚರ್ಚೆಗೆ ಇಲ್ಲಿ ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕ ಭೇಟಿಗೆ ಪಕ್ಕದ ಕೃಷ್ಣಾದಲ್ಲಿ, ಇಲ್ಲಿ ಸಾರ್ವಜನಿಕ ಭೇಟಿಗಾಗಿ ಪ್ರತ್ಯೇಕ ಹಾಲ್ ಅನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಒಂದೆರಡು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ನಾವು ಯಾರೂ ಇಲ್ಲಿ ಶಾಶ್ವತವಲ್ಲ. ರಾಜ್ಯದ ಮುಖ್ಯಮಂತ್ರಿಯಾದವರಿಗೆ ಇದು ಅನುಕೂಲವಾಗಲಿ, ಈ ಅತಿಥಿ ಗೃಹ ಜಾಗ ಉಪಯೋಗವಾಗಲಿ ವ್ಯರ್ಥವಾಗುವುದು ಬೇಡ ಎಂದು ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದರು.

170 ವರ್ಷಗಳ ಇತಿಹಾಸದ ಕಟ್ಟಡ:

ಕುಮಾರ ಕೃಪ ಅತಿಥಿ ಗೃಹದ ಮುಖ್ಯ ಕಲ್ಲಿನ ಕಟ್ಟಡವನ್ನು 1856ರಲ್ಲಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಕಟ್ಟಡವನ್ನು 1960ರಲ್ಲಿ ನಿರ್ಮಿಸಲಾಗಿದೆ. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್‌ ಕೆ. ಶೇಷಾದ್ರಿ ಅಯ್ಯರ್‌ ಅವರ ನಿವಾಸವಾದ ಕಟ್ಟಡವು ಬರೋಬ್ಬರಿ 170 ವರ್ಷಗಳ ಇತಿಹಾಸ ಹೊಂದಿದೆ. ಪ್ರಸ್ತುತ ಈ ಕಟ್ಟಡಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎಆರ್) ಸುಪರ್ದಿಯಲ್ಲಿವೆ.

‘ಕುಮಾರಕೃಪ’ ಹೆಸರು ಬಂದಿದ್ದು ಹೇಗೆ?

ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಪೂರ್ಣ ಹೆಸರು ಕುಮಾರಪುರಂ ಶೇಷಾದ್ರಿ ಅಯ್ಯರ್ ಎಂದಾಗಿತ್ತು (ಇವರು ಕೇರಳದ ಪಾಲಕ್ಕಾಡ್ ಸಮೀಪದ ‘ಕುಮಾರಪುರಂ’ ಮೂಲದವರು). ಅಲ್ಲದೆ, ಇವರ ಕುಲದೈವ ಅಥವಾ ಕುಟುಂಬದ ದೇವರು ಕುಮಾರಸ್ವಾಮಿ (ಸುಬ್ರಹ್ಮಣ್ಯ ಸ್ವಾಮಿ). ತಮ್ಮ ಕುಲದೈವದ ಹೆಸರಿನ ಹಾಗೂ ತಮ್ಮ ಮೂಲ ಊರಿನ (ಕುಮಾರಪುರಂ) ನೆನಪಿಗಾಗಿ ಈ ಮನೆಗೆ ‘ಕುಮಾರಕೃಪಾ’ ಎಂದು ಹೆಸರಿಟ್ಟರು ಎಂದು ತಿಳಿದುಬಂದಿದೆ.

ಅಯ್ಯರ್‌ ನಿವಾಸ ಸರ್ಕಾರ ಆಸ್ತಿ ಆಗಿದ್ದೇಗೆ?

ಶೇಷಾದ್ರಿ ಅಯ್ಯರ್ ಅವರ ನಿಧನದ ನಂತರ, 1918ರಲ್ಲಿ ಮೈಸೂರು ಸರ್ಕಾರವು ಈ ಬಂಗಲೆಯನ್ನು ಖರೀದಿಸಿ, ರಾಜ್ಯಕ್ಕೆ ಆಗಮಿಸುವ ಗಣ್ಯರಿಗಾಗಿ ಸರ್ಕಾರಿ ಅತಿಥಿಗೃಹವಾಗಿ ಪರಿವರ್ತಿಸಿತು. ಆ ಸಂದರ್ಭದಲ್ಲೂ ಇದರ ಹೆಸರನ್ನು ಬದಲಿಸಿರಲಿಲ್ಲ.

ಖಾಸಗಿ ಬಂಗಲೆ ಸರ್ಕಾರಿ ಅತಿಥಿಗೃಹ ಆಯಿತು:

1901ರ ಮಾರ್ಚ್‌ನಲ್ಲಿ ನಿವೃತ್ತರಾದ ಶೇಷಾದ್ರಿ ಅಯ್ಯರ್ ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆಯೂ ಕುಮಾರ ಕೃಪಾ ಬಳಿಯ ಮೈದಾನದಲ್ಲೇ ನೆರವೇರಿತು. ಆ ಬಳಿಕ ಅವರ ಕುಟುಂಬದವರು ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ನೆಲೆಸಿದ್ದರಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಅವಧಿಯಲ್ಲಿ (ಸುಮಾರು 1915-1918ರ ನಡುವೆ) ಮೈಸೂರು ಸರ್ಕಾರವು ಶೇಷಾದ್ರಿ ಅಯ್ಯರ್ ಅವರ ಪುತ್ರರಿಂದ ಈ ಬಂಗಲೆಯನ್ನು ಖರೀದಿಸಿತು. ಬ್ರಿಟಿಷರ ಆಳ್ವಿಕೆ ಅಂತ್ಯಗೊಂಡ ನಂತರ ಸರ್ಕಾರವು ಇದನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದು, ಗಣ್ಯರಿಗಾಗಿ ಅಧಿಕೃತ ರಾಜ್ಯ ಅತಿಥಿಗೃಹ ಆಗಿ ಬದಲಾಯಿಸಿತು.

ಎಸ್‌. ನಿಜಲಿಂಗಪ್ಪ ಅವರ ನಿವಾಸವಾಗಿತ್ತು:

ಕುಮಾರ ಕೃಪ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡುತ್ತಿರುವ ಮೊದಲ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಲ್ಲ.ಮೈಸೂರು ರಾಜ್ಯದ (ಈಗಿನ ಕರ್ನಾಟಕ) ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಸ್. ನಿಜಲಿಂಗಪ್ಪ ಅವರು ಕುಮಾರಕೃಪಾ ಬಂಗಲೆಯನ್ನು ತಮ್ಮ ನಿವಾಸವನ್ನಾಗಿ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ..

ಕುಮಾರಕೃಪ ಗಂಗಾ ಆಗಿ ಬದಲಾಗಿದ್ದು ಹೇಗೆ?

ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆದ ಬಳಿಕ ಅಧಿಕೃತ ನಿವಾಸ ಆಯ್ಕೆ ಬಗ್ಗೆ ಗೊಂದಲ ಉಂಟಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುತ್ರ ಯತೀಂದ್ರ ಜೊತೆ ‘ಕಾವೇರಿ’ಯಲ್ಲೇ ಉಳಿದುಕೊಂಡರು. ಹೀಗಾಗಿ ಡಿ.ಕೆ. ಶಿವಕುಮಾರ್‌ ಅವರು ಕುಮಾರಕೃಪವನ್ನು ನವೀಕರಿಸಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನಾಗಿ ಮಾಡಿದರು. ಬಳಿಕ ಇದನ್ನು ಸರ್ಕಾರಿ ದಾಖಲೆಗಳಿಗೆ ಬಳಸಲು ‘ಗಂಗಾ’ ಆಗಿ ಬದಲಿಸಿ ನ.16, 2026 ರಂದು ಸರ್ಕಾರಿ ಆದೇಶ ಹೊರಡಿಸಲಾಯಿತು.

ಕುಮಾರಕೃಪ ಖ್ಯಾತಿಯ ಹೆಸರು:

ಕುಮಾರಕೃಪ ಅತಿಥಿ ಗೃಹದಲ್ಲಿ ಮಹಾತ್ಮಗಾಂಧೀಜಿ ಸೇರಿದಂತೆ ಗಣ್ಯರು ವಾಸ್ತವ್ಯ ಹೂಡಿದ್ದರು. ಈ ಮನೆಯ ಹೆಸರಿನಿಂದಲೇ ಮುಂದೆ ಈ ಸುತ್ತಮುತ್ತಲಿನ ರಸ್ತೆಗೆ ‘ಕುಮಾರಕೃಪಾ ರಸ್ತೆ’ ಹಾಗೂ ನಂತರ ರೂಪುಗೊಂಡ ಬಡಾವಣೆಗಳಿಗೆ ‘ಕುಮಾರ ಪಾರ್ಕ್’ (ಪೂರ್ವ ಮತ್ತು ಪಶ್ಚಿಮ) ಎಂದು ಕರೆಯಲ್ಪಟ್ಟಿತು.

ವಾಸ್ತು ಪ್ರಕಾರವೇ ಮನೆ ನವೀಕರಣ

ಕೇವಲ ಐದು ತಿಂಗಳ ಅವಧಿಯಲ್ಲಿ ಕಟ್ಟಡದ ಒಳಗಿನ ಗೋಡೆಗಳನ್ನು ಕೆಡವಿ ಹೊಸ ಯೋಜನೆಯಂತೆ ಆಧುನಿಕ ನಿರ್ಮಾಣ ಸಾಮಗ್ರಿಗಳನ್ನು ಬಳಸಿ ನವೀಕರಿಸಲಾಗಿದೆ. ಹೊರ ಭಾಗದ ಕಲ್ಲಿನ ಕಟ್ಟಡವನ್ನು ಮೂಲಸ್ವರೂಪದಲ್ಲಿಯೇ ಉಳಿಸಿಕೊಳ್ಳಲಾಗಿದೆ. ಶಿವಕುಮಾರ್‌ ಅವರ ಆಪ್ತ, ವಾಸ್ತು ತಜ್ಞ ವಿ.ವಿ. ಆರಾಧ್ಯ ಅವರ ಸಲಹೆಯಂತೆ ಮುಖ್ಯಮಂತ್ರಿ ಕುಳಿತುಕೊಳ್ಳುವ ಜಾಗವನ್ನು (ಕುಬೇರ ಮೂಲೆ) ವಿಸ್ತರಿಸಲಾಗಿದೆ.

‘ಗಂಗಾ’ ಅಧಿಕೃತ ನಿವಾಸದಲ್ಲಿ ಏನೆಲ್ಲಾ ಇದೆ?

ಗಂಗಾ ನಿವಾಸದಲ್ಲಿ ಗಣ್ಯರ ಭೇಟಿಗಾಗಿ ಪ್ರತ್ಯೇಕ ಕೊಠಡಿ, ಸಾರ್ವಜನಿಕರ ಅಹವಾಲು ಆಲಿಕೆ ಮತ್ತು ಅರ್ಜಿ ಸ್ವೀಕರಿಸಲು ವಿಭಾಗ, ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳ ಗೃಹ ಕಚೇರಿಗಳಿಗಾಗಿ ಕುಮಾರಕೃಪಕ್ಕೆ ಹೊಂದಿಕೊಂಡಿರುವ ಡಿಪಿಎಆರ್‌ನ ಸಾರಿಗೆ ವಿಭಾಗ ಮತ್ತು ಆಡಳಿತ ಕಚೇರಿಯ ಕಟ್ಟಡಗಳನ್ನು ಬಳಕೆ ಮಾಡಲು ಕ್ರಮ ವಹಿಸಲಾಗುತ್ತಿದೆ.

ಎರಡು ಕೊಠಡಿಗಳಿಗೆ ಆಕರ್ಷಕ ಮತ್ತು ಐಷಾರಾಮಿ ನೈಸರ್ಗಿಕ ಕಲ್ಲುಗಳಲ್ಲಿ ಒಂದಾಗಿರುವ ಇಟಾಲಿಯನ್‌ ಬಿಳಿ ಮಾರ್ಬಲ್ ಬಳಸಲಾಗಿದೆ. ಉಳಿದ ಕೊಠಡಿಗಳಿಗೆ ಕಪ್ಪು, ಕಂದು, ಹಸಿರು, ಕಂದು ಬಣ್ಣದ ಗ್ರಾನೈಟ್‌ ಅನ್ನು ನೆಲಹಾಸಿಗೆ ಬಳಸಲಾಗಿದೆ. ಮೊದಲ ಮಹಡಿಯಲ್ಲಿರುವ ಬೆಡ್‌ ರೂಮ್‌ಗಳಿಗೆ ಅಲಂಕಾರಿಕ ಮರದ ನೆಲಹಾಸು ಹಾಕಲಾಗಿದೆ.

ಪ್ರತ್ಯೇಕ ಸಭಾ ಭವನ:

ಗಂಗಾ ನಿವಾಸಕ್ಕೆ ಹೊಂದಿಕೊಂಡಂತೆ ಸುಮಾರು 1,200 ಚದರ ಅಡಿ ವಿಸ್ತೀರ್ಣದಲ್ಲಿ ಪ್ರತ್ಯೇಕ ಸಭಾಂಗಣ ನಿರ್ಮಾಣ ಕೆಲಸ ಮುಂದುವರಿದಿದೆ. ವಿಡಿಯೊ ಸಂವಾದ ಮೂಲಕ ಸಭೆಗಳನ್ನು ನಡೆಸಲು ಅನುಕೂಲ ಆಗುವಂತೆ ಈ ಸಭಾಭವನವನ್ನು ವಿನ್ಯಾಸಗೊಳಿಸಲಾಗಿದೆ.

- ಗಾಂಧೀಜಿ ತಂಗಿದ್ದ, ನಿಜಲಿಂಗಪ್ಪ ನೆಲೆಸಿದ್ದ ಮನೆ ನವೀಕರಿಸಿ ಶಿವಕುಮಾರ್ ಗೃಹಪ್ರವೇಶ

- ಸಿಎಂ ಆದ 5 ತಿಂಗಳ ಬಳಿಕ ಸಿಕ್ತು ಹೊಸ ಮನೆ । ಶೀಘ್ರದಲ್ಲೇ ಇಡೀ ಕುಟುಂಬ ಸ್ಥಳಾಂತರ

- ಹೊಸ ಮನೆಗೆ ನಾಡಿದ್ದು ಎಲ್ಲ 224 ಶಾಸಕರಿಗೂ ಆಹ್ವಾನ, ಇನ್ನೂ ಇಲ್ಲೇ ಇರುವೆ: ಡಿಕೆಶಿ

ಕೃಷ್ಣಾ, ಕಾವೇರಿ ಸಾಲಿಗೆ ಈಗ ಗಂಗಾ ಸೇರ್ಪಡೆ

ರಾಜ್ಯದ ಹೆಚ್ಚಿನ ಮುಖ್ಯಮಂತ್ರಿಗಳು ‘ಕಾವೇರಿ’ ಹಾಗೂ ‘ಅನುಗ್ರಹ’ ಬಂಗಲೆಗಳನ್ನು ತಮ್ಮ ಅಧಿಕೃತ ನಿವಾಸವನ್ನಾಗಿ ಮಾಡಿಕೊಳ್ಳುತ್ತಿದ್ದರು. ಸಮೀಪದಲ್ಲೇ ಇರುವ ‘ಕೃಷ್ಣಾ’ ಬಂಗಲೆಯನ್ನು ಗೃಹ ಕಚೇರಿಯಾಗಿ ಬಳಸುತ್ತಿದ್ದರು. ಈಗ ಕಾವೇರಿ, ಕೃಷ್ಣಾ ಸಾಲಿಗೆ ಮತ್ತೊಂದು ನದಿಯ ಹೆಸರಾಗಿರುವ ‘ಗಂಗಾ’ ಸೇರ್ಪಡೆಯಾಗಿದೆ.

ಮೈಸೂರಿನ ದಿವಾನಅಯ್ಯರ್‌ ಮನೆ ಇದುಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ಸರ್‌ ಕೆ. ಶೇಷಾದ್ರಿ ಅಯ್ಯರ್‌ ಅವರು ಖಾಸಗಿ ನಿವಾಸವೇ ‘ಕುಮಾರಕೃಪ’. 1856ರಲ್ಲಿ ಇದರ ನಿರ್ಮಾಣ ಆಗಿತ್ತು. ಅಯ್ಯರ್‌ ಅವರ ನಿಧನಾ ನಂತರ ಮೈಸೂರು ರಾಜರು ಈ ಮನೆಯನ್ನು ಖರೀದಿಸಿದ್ದರು.

5 ಬೆಡ್‌ರೂಂಗಳು ಇರುವ ಬಂಗಲೆ

ಮೊದಲ ಮಹಡಿಯಲ್ಲಿ ಐದು ಬೆಡ್‌ ರೂಮ್‌ಗಳಿವೆ. ಮೊದಲ ಮಹಡಿಯಲ್ಲಿ ಶಿವಕುಮಾರ್‌ ಕುಟುಂಬಕ್ಕೆ ಖಾಸಗಿ ಅಡುಗೆ ಕೋಣೆ, ಡೈನಿಂಗ್ ರೂಮ್‌ ಇದೆ. ನೆಲಮಹಡಿಯಲ್ಲಿ ಅಧಿಕಾರಿಗಳ ಬಳಕೆಗಾಗಿ ಪ್ರತ್ಯೇಕ ಅಡುಗೆ ಕೋಣೆ ಮತ್ತು ಡೈನಿಂಗ್ ಕೊಠಡಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಕಟ್ಟಡದ ಪರಂಪರೆ ಉಳಿಸಿಕೊಂಡಿದ್ದೇವೆ

ನಾನು ತೆಗೆದುಕೊಂಡಿದ್ದ ಸರ್ಕಾರಿ ನಿವಾಸ ಚಿಕ್ಕದಾಗಿತ್ತು, ಈ ಮಧ್ಯೆ ಕುಮಾರಕೃಪ ಅತಿಥಿ ಗೃಹ ಉಪಯೋಗವಾಗುತ್ತಿರಲಿಲ್ಲವಾದ ಕಾರಣ ನಾನು ಇದನ್ನು ಅಧಿಕೃತ ನಿವಾಸವಾಗಿ ಪರಿವರ್ತಿಸಿ ಖಾಸಗಿ ಪೂಜೆ ನೆರವೇರಿಸಿದ್ದೇನೆ. ಈ ಕಟ್ಟಡದ ಪರಂಪರೆಯನ್ನು ಉಳಿಸಿಕೊಂಡು ಶೇ.10ರಷ್ಟು ಮರು ವಿನ್ಯಾಸ ಮಾಡಲಾಗಿದೆ.

- ಡಿ.ಕೆ. ಶಿವಕುಮಾರ್‌, ಮುಖ್ಯಮಂತ್ರಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜ್ಯ ರಾಜಕಾರಣಕ್ಕೆ ಸೂಕ್ತ ಸಮಯದಲ್ಲಿ ನಿರ್ಧಾರ : ಎಚ್ಡಿಕೆ
ಹಿರಿಯೂರು ಟಿಕೆಟ್‌ ಬಿಜೆಪಿಗೆ: ಅಶೋಕ್‌ - ನಮ್ಮ ಪಕ್ಷದಲ್ಲಿ ತೀರ್ಮಾನ ಆಗಿದೆ