ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿ ಡಿಕೆಶಿಯಿಂದ ₹2 ಸಾವಿರ ಕೋಟಿ ಭ್ರಷ್ಟಾಚಾರ : ಮುನಿರತ್ನ ದೂರು

KannadaprabhaNewsNetwork | Updated : Feb 22 2025, 04:10 AM IST

ಸಾರಾಂಶ

ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿ ₹2 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಅವರು ಲೋಕಾಯುಕ್ತ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ದೂರು ನೀಡಿದ್ದಾರೆ.

 ಬೆಂಗಳೂರು : ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿ ₹2 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಅವರು ಲೋಕಾಯುಕ್ತ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ದೂರು ನೀಡಿದ್ದಾರೆ.

ಶಿವಕುಮಾರ್ ನಡೆಸುತ್ತಿರುವ ಭ್ರಷ್ಟಾಚಾರ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರಲಾಗಿದೆ. ಬೆಂಗಳೂರು ನಗರಕ್ಕೆ ಎರಡು ಸಾವಿರ ಕೋಟಿ ರು. ಅನುದಾನವನ್ನು ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಇದರಲ್ಲಿ ವಿಶ್ವಬ್ಯಾಂಕ್‌ನಿಂದ ಸಾಲ ರೂಪದಲ್ಲಿ ₹1700 ಕೋಟಿ ಪಡೆಯಲಾಗಿದೆ ಮತ್ತು ಸಾರ್ವಜನಿಕ ತೆರಿಗೆ ₹300 ಕೋಟಿ ಅನುದಾನವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶಾಸಕ ಎಸ್‌.ಟಿ.ಸೋಮಶೇಖರ್‌ ಬಿಜೆಪಿಯ ಶಾಸಕರಾಗಿದ್ದರೂ ಕಾಂಗ್ರೆಸ್‌ನ ಶಾಸಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಕ್ಷೇತ್ರದ ವ್ಯಾಪ್ತಿಗೆ ಬಿಬಿಎಂಪಿಯ ಕೇವಲ ಐದು ವಾರ್ಡ್‌ಗಳಿದ್ದರೂ ಸುಮಾರು ₹232 ಕೋಟಿ ಹಂಚಿಕೆ ಮಾಡಲಾಗಿದೆ. ಇನ್ನು, ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ ಕಾಂಗ್ರೆಸ್‌ನ ಸ್ಟಾರ್‌ ಚಂದ್ರು ಮಾಲೀಕತ್ವದ ಸ್ಟಾರ್‌ ಬಿಲ್ಡರ್ಸ್‌ ಕಂಪನಿಗೆ ಯಶವಂತಪುರ ಕ್ಷೇತ್ರಕ್ಕೆ ಹಂಚಿಕೆಯಾಗಿರುವ ಅನುದಾನದಲ್ಲಿ ನೀಡಲು ತೀರ್ಮಾನಿಸಲಾಗಿದೆ ಎಂದು ದೂರಿದ್ದಾರೆ. 

ಬೆಂಗಳೂರು ನಗರಕ್ಕೆ ನೀಡುವ ಅನುದಾನ ವಿಚಾರದಲ್ಲಿ ಹೊರರಾಜ್ಯದ ಆಂಧ್ರಪ್ರದೇಶದ ಕೆಲವು ಬಲಿಷ್ಠ ಗುತ್ತಿಗೆದಾರರು ರಾಜ್ಯದ ಗುತ್ತಿಗೆದಾರರ ಮೇಲೆ ಸವಾರಿ ಮಾಡಲು ಬಂದಿದ್ದಾರೆ. ಶೇ.15ರಷ್ಟು ಕಮಿಷನ್‌ ಹಣದ ಮುಂಗಡವನ್ನು ಈಗಾಗಲೇ ಯುವ ಕಾಂಗ್ರೆಸ್‌ನ ಅಧ್ಯಕ್ಷ ಮಂಜುನಾಥ್‌ಗೌಡ ಮೂಲಕ ಚರ್ಚಿಸಿ ಹಣ ಸಂದಾಯ ಮಾಡಲಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಸಂಬಂಧಿಗಳಿಗೆ ನೀಡಲು ಉದ್ದೇಶಿಸಲಾಗಿದೆ ಮುನಿರತ್ನ ಆರೋಪಿಸಿದ್ದಾರೆ.

ಹಿಂದಿನ ಸರ್ಕಾರಗಳು ರಾಜ್ಯದ ಗುತ್ತಿಗೆದಾರರು ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ, ಹೊರರಾಜ್ಯದ ಆಂಧ್ರಪ್ರದೇಶದ ಬಲಿಷ್ಠ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ₹200 ಕೋಟಿ ಪ್ಯಾಕೇಜ್‌ ಅನುದಾನಗಳಿಗೆ ಟೆಂಡರ್‌ ಪ್ರಕ್ರಿಯೆಯನ್ನು ಮಾಡಲಾಗಿದ್ದು, ಇದರಿಂದ ರಾಜ್ಯದ ಗುತ್ತಿಗೆದಾರರು ಬೇರೆ ರಾಜ್ಯದ ಶ್ರೀಮಂತ ಗುತ್ತಿಗೆದಾರಿಗೆ ಗುಲಾಮರಾಗುತ್ತಿದ್ದಾರೆ. ಈ ಭ್ರಷ್ಟಾಚಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಒಂದು ಭಾಗವಾದರೆ, ಮತ್ತೊಂದು ಭಾಗಕ್ಕೆ ಪಾಲಿಕೆ ಆಯುಕ್ತ ತುಷಾರ್‌ ಗಿರಿನಾಥ್‌ ಕಾರಣಕರ್ತರಾಗಿರುತ್ತಾರೆ ಎಂದು ತಿಳಿಸಿದ್ದಾರೆ.

Share this article