2029ಕ್ಕೆ ರಾಹುಲ್ ಪ್ರಧಾನಿ ಮಾಡಲು ಪಣ: ಪಿ.ಎಂ.ನರೇಂದ್ರಸ್ವಾಮಿ

KannadaprabhaNewsNetwork |  
Published : Aug 09, 2026, 01:30 AM ISTUpdated : Aug 09, 2026, 04:41 AM IST
PM Narendra Swamy

ಸಾರಾಂಶ

ನಾವು ಯಾರನ್ನೂ ಟೀಕೆ ಮಾಡುವುದಿಲ್ಲ. ಪ್ರಚೋದನೆಗೂ ಒಳಗಾಗುವುದಿಲ್ಲ. ಜನರ ಸೇವೆ ಮಾಡುವುದಷ್ಟೇ ನಮ್ಮ ಕೆಲಸ. ನಾವು ನೆಪಮಾತ್ರಕ್ಕಷ್ಟೇ ಮಂತ್ರಿಗಳು. ನಿಮ್ಮಂತೆಯೇ ನಾವೂ ಕಾರ್ಯಕರ್ತರೇ. ಜಿಲ್ಲೆಯ ಅಭಿವೃದ್ಧಿ ಮಾಡುವುದಕ್ಕಷ್ಟೇ ನಮ್ಮ ಆದ್ಯತೆ. ವೀರಾವೇಷದ ಮಾತುಗಳ ಅವಶ್ಯಕತೆ ಇಲ್ಲ.

ಮಂಡ್ಯ : ೨೦೨೮ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮತ್ತು ೨೦೨೯ರಲ್ಲಿ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನ ಮಂತ್ರಿ ಮಾಡಲು ಎಲ್ಲರೂ ಪಣ ತೊಡಬೇಕು ಎಂದು ನೂತನ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಆಯೋಜಿಸಿದ್ದ ನೂತನ ಸಚಿವರಾದ ಎನ್.ಚಲುವರಾಯಸ್ವಾಮಿ ಮತ್ತು ಪಿ.ಎಂ. ನರೇಂದ್ರಸ್ವಾಮಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಯಾರನ್ನೂ ಟೀಕೆ ಮಾಡುವುದಿಲ್ಲ. ಪ್ರಚೋದನೆಗೂ ಒಳಗಾಗುವುದಿಲ್ಲ. ಜನರ ಸೇವೆ ಮಾಡುವುದಷ್ಟೇ ನಮ್ಮ ಕೆಲಸ ಎಂದು ಶಪಥ ಮಾಡಿದರು.

ನಾವು ನೆಪಮಾತ್ರಕ್ಕಷ್ಟೇ ಮಂತ್ರಿಗಳು. ನಿಮ್ಮಂತೆಯೇ ನಾವೂ ಕಾರ್ಯಕರ್ತರೇ. ಜಿಲ್ಲೆಯ ಅಭಿವೃದ್ಧಿ ಮಾಡುವುದಕ್ಕಷ್ಟೇ ನಮ್ಮ ಆದ್ಯತೆ. ವೀರಾವೇಷದ ಮಾತುಗಳ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೂರು ವರ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಒಳ್ಳೆಯ ಆಡಳಿತ ನಡೆಸಿದ್ದೇವೆ. ಇದೀಗ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಿದ್ದೇವೆ. ೨೦೨೮ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ತರಲು ಮತ್ತು ೨೦೨೯ಕ್ಕೆ ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಮಾಡಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ರಾಜ್ಯದಲ್ಲಿ ಬರದ ಪರಿಸ್ಥಿತಿ ಇದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ. ಮಂಡ್ಯದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದ ಕಾರ್ಯಕರ್ತರ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ ಎಂದು ಭಾವುಕರಾದರು.

ಕಾರ್ಯಕ್ರಮದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ರವಿಕುಮಾರ್, ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ದಡವನಪುರ ಶಿವಣ್ಣ, ಮಧು ಜಿ.ಮಾದೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಚ್.ಬಿ.ಶುಭದಾಯಿನಿ ಇತರರಿದ್ದರು.

ಹಲವರು ಕನಸು ಕಾಣೋದನ್ನೇ ಬಿಟ್ಟಿದ್ದಾರೆ: ಉದಯ್

ಬಹಳಷ್ಟು ಜನರು ಹಗಲು ಕನಸು ಕಾಣುತ್ತಿದ್ದವರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದ ಮೇಲೆ ಕನಸು ಕಾಣೋದನ್ನೇ ಬಿಟ್ಟುಬಿಟ್ಟಿದ್ದಾರೆ ಎಂದು ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಅವರು ಹೇಳಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಸಚಿವರಾದ ಎನ್.ಚಲುವರಾಯಸ್ವಾಮಿ ಮತ್ತು ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ೨೦೨೮ಕ್ಕೆ ನೂರಕ್ಕೆ ಇನ್ನೂರುರಷ್ಟು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸದಿಂದ ನುಡಿದರು.ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈಗ ಇಬ್ಬರು ಸಚಿವರು ಸಿಕ್ಕಿದ್ದಾರೆ. ಡಬಲ್ ಇಂಜಿನ್‌ನಿಂದ ಮತಷ್ಟು ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಳ್ಳಲಿವೆ. ಮುಂದಿನ ದಿನಗಳಲ್ಲಿ ಚುನಾವಣೆ ಬರುತ್ತಿದೆ. ಕಾರ್ಯಕರ್ತರು ಗೆಲ್ಲುವ ಚುನಾವಣೆಗಳಾಗಿರುವುದರಿಂದ ನೀವು ಒಗ್ಗಟ್ಟು ಪ್ರದರ್ಶಿಸಿದರೆ ನಿಮ್ಮನ್ನು ಗೆಲ್ಲಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಭರವಸೆ ನೀಡಿದರು.

ಇಬ್ಬರು ಸಚಿವರಿಂದ ಜಿಲ್ಲೆಗೆ ಆನೆಬಲ: ಪಿ.ರವಿಕುಮಾರ್

ಮಂಡ್ಯಕ್ಕೆ ಇಬ್ಬರು ಸಚಿವರಿಂದ ಆನೆ ಬಲ ಬಂದಿದೆ. ಹುಲಿ-ಸಿಂಹ ಘರ್ಜಿಸಬೇಕು. ೨೦೨೮ಕ್ಕೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಸಚಿವರಾದ ಎನ್.ಚಲುವರಾಯಸ್ವಾಮಿ ಮತ್ತು ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜಿಲ್ಲೆಗೆ ಇಬ್ಬರು ಸಚಿವರನ್ನ ಕೊಟ್ಟಿದ್ದಾರೆ. ಇಬ್ಬರಿಂದಲೂ ಬಹಳಷ್ಟು ನಿರೀಕ್ಷೆಗಳಿವೆ. ಒಬ್ಬರು ಸಿಂಹ, ಇನ್ನೊಬ್ಬರು ಹುಲಿ. ಇವರಿಂದ ಆನೆಬಲ ಬಂದಂತಾಗಿದೆ ಎಂದರು.ಜಿಲ್ಲೆಯನ್ನು ಅಭಿವೃದ್ಧಿ ಮಾಡುವುದಕ್ಕೆ ಇಬ್ಬರ ಸಹಕಾರ ಬೇಕು. ಕೇವಲ ನಾಗಮಂಗಲ, ಮಳವಳ್ಳಿ ಅಲ್ಲ ಮಂಡ್ಯಕ್ಕೆ ಹೆಚ್ಚಿನ ಅನುದಾನ ಕೊಟ್ಟು ಅಭಿವೃದ್ಧಿಗೆ ಸಹಕರಿಸಬೇಕು. ಜಿಲ್ಲೆಯನ್ನು ಅಭಿವೃದ್ಧಿ ಮಾಡಿದರೆ ಇಂಡಿಯಾದಲ್ಲಿ ಸದ್ದು ಮಾಡುತ್ತೆ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಕಲಿ ಔಷಧ ಜಾಲ ಕೇಸಲ್ಲಿ ಸರ್ಕಾರಿ ಅಧಿಕಾರಿ ಸಸ್ಪೆಂಡ್‌ ಅಕ್ರಮ
ಸದನದೊಳಗೆ ಸರ್ಕಾರಕ್ಕೆ ವಿಪಕ್ಷ ವಂದೇ ಸಡ್ಡು