ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ತೀವ್ರಗೊಂಡ ಬೆನ್ನಲ್ಲೇ ಉಳಿದ 14 ಕ್ಷೇತ್ರಗಳಿಗೆ ಶುಕ್ರವಾರ ಅಧಿಸೂಚನೆ ಪ್ರಕಟವಾಗಲಿದೆ.
ಬೆಂಗಳೂರು: ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ತೀವ್ರಗೊಂಡ ಬೆನ್ನಲ್ಲೇ ಉಳಿದ 14 ಕ್ಷೇತ್ರಗಳಿಗೆ ಶುಕ್ರವಾರ ಅಧಿಸೂಚನೆ ಪ್ರಕಟವಾಗಲಿದೆ.
ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಪ್ರತಿದಿನ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇರಲಿದೆ. ರಜೆ ದಿನ ಹೊರತುಪಡಿಸಿ ಇನ್ನುಳಿದ ದಿನದಲ್ಲಿ ಅಭ್ಯರ್ಥಿಗಳು ಉಮೇದುವಾರಿಕೆ ಮಾಡಬಹುದಾಗಿದೆ. ರಾಜ್ಯದ ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಿಗೆ ಇದು ಅನ್ವಯವಾಗಲಿದೆ.
ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಲು ಇದೇ ತಿಂಗಳ 19 ಕಡೆಯ ದಿನವಾಗಿದ್ದು, 20ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಏ.22 ಕೊನೆಯ ದಿನವಾಗಿದೆ. ಮೇ 7ರಂದು ಮತದಾನ ನಡೆಯಲಿದೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೊಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.
ಇದೇ ವೇಳೆ ಯಾದಗಿರಿ ಜಿಲ್ಲೆ ಸುರಪುರ ವಿಧಾನಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಯಲಿದ್ದು, ಶುಕ್ರವಾರ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ಅನಾರೋಗ್ಯದಿಂದ ಬಳಲುತ್ತಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಫೆ.25ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಸುರಪುರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಲೋಕಸಭಾ ಚುನಾವಣೆಯ ದಿನಗಳೇ ಉಪಚುನಾವಣೆಗೂ ಅನ್ವಯವಾಗಲಿದೆ.
ಯಾವ ಕ್ಷೇತ್ರಗಳಿಗೆ ಉಮೇದುವಾರಿಕೆ?
ಚಿಕ್ಕೋಡಿ, ಬೆಳಗಾವಿ, ಬಾಗಲಕೊಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ
- ಮೊದಲ ಹಂತದಲ್ಲಿ ರಾಜ್ಯದ ದಕ್ಷಿಣ ಭಾಗದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಅಂತ್ಯ
- ಏ.26ರಂದು ಮತದಾನ ನಡೆಯುವ ಈ ಕ್ಷೇತ್ರಗಳಲ್ಲಿ ಈಗಾಗಲೇ ಪ್ರಚಾರ ತಾರಕಕ್ಕೆ
- ಇದೀಗ ರಾಜ್ಯದ ಇನ್ನೂ 14 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಪ್ರಕಟ
- ಇಂದಿನಿಂದ ಏ.19ರವರೆಗೆ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ ಮಾಡಬಹುದು
- ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ನಾಮಪತ್ರ ಸಲ್ಲಿಸಲು ಅವಕಾಶ