ಅಧ್ಯಕ್ಷರ ಬದಲಿಸುವ ನಿರ್ಣಯ ಕೈಗೊಂಡಲ್ಲಿ ಪಟ್ಟಕ್ಕೆ ಭಿನ್ನರಿಂದ ಮೂವರು ಲಿಂಗಾಯತ ನಾಯಕರ ಹೆಸರು

KannadaprabhaNewsNetwork | Updated : Feb 11 2025, 04:15 AM IST

ಸಾರಾಂಶ

ಒಂದು ವೇಳೆ ಬಿಜೆಪಿ ಹೈಕಮಾಂಡ್‌ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಿಸುವ ನಿರ್ಣಯ ಕೈಗೊಂಡಲ್ಲಿ ಲಿಂಗಾಯತ ಸಮುದಾಯದಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಹೆಸರುಗಳನ್ನು ಪರಿಶೀಲಿಸಬೇಕು ಎಂಬ ಚರ್ಚೆ 

 ಬೆಂಗಳೂರು : ಒಂದು ವೇಳೆ ಬಿಜೆಪಿ ಹೈಕಮಾಂಡ್‌ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಿಸುವ ನಿರ್ಣಯ ಕೈಗೊಂಡಲ್ಲಿ ಲಿಂಗಾಯತ ಸಮುದಾಯದಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಹೆಸರುಗಳನ್ನು ಪರಿಶೀಲಿಸಬೇಕು ಎಂಬ ಚರ್ಚೆ ಪಕ್ಷದಲ್ಲಿ ಆರಂಭವಾಗಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಭಿನ್ನರ ಬಣ ದೆಹಲಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಸಂಸದರೊಂದಿಗೆ ನಡೆಸಿದ ಚರ್ಚೆಯಲ್ಲಿ ಲಿಂಗಾಯತ ಸಮುದಾಯದವರನ್ನೇ ಪರಿಗಣಿಸಬೇಕು ಎಂದಾದಲ್ಲಿ ಈ ಮೂರು ಹೆಸರುಗಳ ಪೈಕಿ ಒಬ್ಬರನ್ನು ನೇಮಕ ಮಾಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ.

ಪಕ್ಷದಲ್ಲಿನ ಭಿನ್ನಮತೀಯರ ಬೇಡಿಕೆ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರನ್ನು ಬದಲಿಸುವುದೇ ಆದಲ್ಲಿ ಆಗ ಹಿರಿಯರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಮಾತ್ರ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗಲು ಸಾಧ್ಯ. ಇಲ್ಲದಿದ್ದರೆ ಮತ್ತೆ ಭಿನ್ನಮತೀಯ ಚಟುವಟಿಕೆ ಮುಂದುವರೆಯುವ ಅಪಾಯವಿದೆ ಎಂಬ ಬಗ್ಗೆ ಚರ್ಚೆ ನಡೆದಿದೆ.

ಕೇಂದ್ರ ಸಚಿವ ಸೋಮಣ್ಣ ಅವರ ನಿವಾಸದಲ್ಲಿ ನಡೆದ ಸಭೆಯಲ್ಲೂ ಈ ಬಗ್ಗೆ ಸಮಾಲೋಚನೆ ನಡೆದಿದೆ. ಆದರೆ, ಇದುವರೆಗೆ ಬೊಮ್ಮಾಯಿ ಅವರಾಗಲಿ, ಸೋಮಣ್ಣ ಅವರಾಗಲಿ ಅಥವಾ ನಿರಾಣಿ ಅವರಾಗಲಿ ಯಾವುದೇ ಸ್ಪಷ್ಟ ಅಭಿಪ್ರಾಯ ಹೊರಹಾಕಿಲ್ಲ ಎನ್ನಲಾಗಿದೆ.ಸೋಮಣ್ಣ ಅವರು ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಅವಕಾಶ ಪಡೆದಿರುವುದರಿಂದ ಅದನ್ನು ಬಿಟ್ಟು ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಲು ಒಪ್ಪಿಕೊಳ್ಳುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬೊಮ್ಮಾಯಿ ಅವರು ಸಂಸದರಾಗಿರುವುದರಿಂದ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ಒಪ್ಪಿಕೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಮುುರುಗೇಶ್ ನಿರಾಣಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಸದ್ಯ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೂ ರಾಜ್ಯಾಧ್ಯಕ್ಷ ಸ್ಥಾನ ನಿರಾಕರಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.ಪ್ರಾದೇಶಿಕ ಅಸಮಾನತೆ ಹೇಗೆ?:

ಸದ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ದಕ್ಷಿಣ ಕರ್ನಾಟಕಕ್ಕೆ ಸೇರಿದವರು. ಹೀಗಾಗಿ, ಇದೇ ಭಾಗದವರ ಬದಲು ಬೇರೊಂದು ಭಾಗದವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು ಎಂಬ ಅಭಿಪ್ರಾಯವೂ ಪಕ್ಷದಲ್ಲಿ ಬಲವಾಗಿ ಕೇಳಿಬರುತ್ತಿದೆ.

Share this article